ಹಾವೇರಿ ನಗರದ ಹುಕ್ಕೇರಿ ಮಠದ ಲಿಂ.ಶಿವಬಸವ ಶ್ರೀಗಳ 80ನೇ, ಲಿಂ.ಶಿವಲಿಂಗ ಶ್ರೀಗಳ 17ನೇ ಪುಣ್ಯಸ್ಮರಣೋತ್ಸವ ಹಾಗೂ ಸದಾಶಿವ ಶ್ರೀಗಳ ವರ್ಧಂತಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ನಮ್ಮೂರ ಜಾತ್ರೆ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಹಾವೇರಿ:ನಗರದ ಹುಕ್ಕೇರಿ ಮಠದ ಲಿಂ.ಶಿವಬಸವ ಶ್ರೀಗಳ 80ನೇ, ಲಿಂ.ಶಿವಲಿಂಗ ಶ್ರೀಗಳ 17ನೇ ಪುಣ್ಯಸ್ಮರಣೋತ್ಸವ ಹಾಗೂ ಸದಾಶಿವ ಶ್ರೀಗಳ ವರ್ಧಂತಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ನಮ್ಮೂರ ಜಾತ್ರೆ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.ನಗರದ ಹುಕ್ಕೇರಿಮಠದಲ್ಲಿನ ಲಿಂ.ಉಭಯ ಶ್ರೀಗಳ ಗದ್ದುಗೆಗೆ ಹಾಗೂ ಮೂರ್ತಿಗಳಿಗೆ ಮಂಗಳವಾರ ಬೆಳಗ್ಗೆ ವಿಶೇಷ ಅಲಂಕಾರ ಜತೆಗೆ ಫಲಪುಷ್ಪಗಳಿಂದ ಶೃಂಗಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಮಠದಲ್ಲಿ ಮಹಾ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಜರುಗಿತು. ಮಧ್ಯಾಹ್ನದ ವೇಳೆಗೆ ಮಹಾಗಣಾರಾಧನೆ ನಡೆಯಿತು. ಬಳಿಕ ಮಹಾ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆಯ ವೇಳೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಾವಚಿತ್ರ ಮೆರವಣಿಗೆ ಜರುಗಿದವು. ಭಕ್ತರು ಹೂವು, ಹಣ್ಣು, ಕಾಯಿ ನೈವೇದ್ಯವನ್ನು ತಂದು ಉಭಯ ಶ್ರೀಗಳ ಗದ್ದುಗೆಗೆ ಅರ್ಪಿಸುವುದರ ಮೂಲಕ ಪೂಜೆ ಸಲ್ಲಿಸಿದರು. ನಂತರ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದು ಪುನೀತರಾದರು.ಮೆರವಣಿಗೆಗೆ ಚಾಲನೆ: ಹುಕ್ಕೇರಿಮಠದ ಆವರಣದಲ್ಲಿ ಮಂಗಳವಾರ ಸಂಜೆ ಲಿಂ. ಶಿವಬಸವ ಹಾಗೂ ಲಿಂ. ಶಿವಲಿಂಗ ಶ್ರೀಗಳ ಭಾವಚಿತ್ರ ಮೆರವಣಿಗೆಯ ರಥೋತ್ಸವಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಹುಕ್ಕೇರಿಮಠದಿಂದ ಆರಂಭವಾದ ಮೆರವಣಿಗೆ ಎಂ.ಜಿ. ರಸ್ತೆ, ಹೆರೂರ ಅಂಗಡಿ ಕ್ರಾಸ್, ಮೇಲಿನಪೇಟೆ, ಹೊರಡಿ ದವಾಖಾನೆ, ರೈತರ ಓಣಿ, ಎಂ.ಜಿ. ರೋಡ್‌, ಕಲ್ಲುಮಂಟಪ ರಸ್ತೆ, ದ್ಯಾಮವ್ವನ ಗುಡಿ ಪಾದಗಟ್ಟಿ, ಅಕ್ಕಿಪೇಟೆ, ಯಾಲಕ್ಕಿ ಓಣಿ, ಪುರದ ಓಣಿ, ಬಾಲೆಹೊಸೂರ ದವಾಖಾನೆ ಮಾರ್ಗವಾಗಿ ಸಂಚರಿಸಿ ಮರಳಿ ಶ್ರೀ ಮಠಕ್ಕೆ ಧಾವಿಸಿ ಸಂಪನ್ನಗೊಂಡಿತು.ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ:ಉಭಯ ಶ್ರೀಗಳವರ ಭಾವಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಶ್ರೀಗಳ ಭಾವಚಿತ್ರ ಇರಿಸಿದ್ದ ರಥ, ಆನೆ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳ ಬಳಿ ನಿಂತು ಯುವಕ, ಯುವತಿಯರು ಸೆಲಿ ಕ್ಲಿಕ್ಕಿಸಿಕೊಂಡು ಸಂತಸ ಪಡುವ ಮೂಲಕ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು. ಮೆರವಣಿಗೆಯಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಿರಸಿಯ ಅಟವಿ ಶಿವಲಿಂಗ ಸ್ವಾಮೀಜಿ, ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಶೇಗುಣಸಿ ಮಹಾಂತಪ್ರಭು ಸ್ವಾಮೀಜಿ, ವಿಜಯಪುರದ ಷಣ್ಮುಖಾರೂಢ ಮಠದ ಸಿದ್ದಾರೂಢ ಸ್ವಾಮೀಜಿ, ಅಕ್ಕಿಆಲೂರು ಶಿವಬಸವ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಕೊಟ್ರೇಶಪ್ಪ ಬಸೇಗಣ್ಣಿ, ಸಂಜೀವಕುಮಾರ ನೀರಲಗಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಎಂ.ಎಸ್. ಕೋರಿಶೆಟ್ಟರ, ಮಹೇಶ ಚಿನ್ನಿಕಟ್ಟಿ, ರಾಜಶೇಖರ ಮಾಗನೂರ ಸೇರಿದಂತೆ ಜನಪ್ರತಿನಿಧಿಗಳು, ಜಾತ್ರಾ ಮಹೋತ್ಸವ ಸಮಿತಿ, ಬೆಳ್ಳಿ ತುಲಾಭಾರ ಸಮಿತಿ, ಪ್ರಸಾದ ನಿಲಯ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.ಕಲಾ ತಂಡಗಳ ಮೆರುಗು:ಐತಿಹಾಸಿಕ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಮೆರವಣಿಗೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮ್ಮಾಳ ತಂಡ, ಹನುಮಾನ್ ಬ್ಯಾಂಡ್, ಕೇರಳದ ತಯಂ ತಂಡ, ಹುಲಿ ವೇಷ, ಲಕ್ಷ್ಮೀ, ಸರಸ್ವತಿ, ಆಂಜನೇಯ, ಶಿವನ ಅವತಾರ, ಹನುಮಂತನ ವೇಷ, ಝಾಂಜ್ ಮೇಳ, ನಂದಿಕೋಲ ಕುಣಿತ, ಚಂಡಿ ವಾದ್ಯ, ಬೇಡರ ವೇಷ, ಡೊಳ್ಳು ಕುಣಿತ, ಗೊಂಬೆ ಕುಣಿತ ಸೇರಿದಂತೆ ಹಲವಾರು ಕಲಾ ತಂಡಗಳು ಭಾಗವಹಿಸಿ ಶ್ರೀಗಳ ಉತ್ಸವದ ಮೆರವಣಿಗೆಗೆ ವೈಭವದ ಮೆರುಗು ತಂದವು. ಜಾತ್ರೆಗೆ ಭಕ್ತಸಾಗರ:ಈ ಬಾರಿ ಪ್ರಮುಖ ಆಕರ್ಷಣೆಯಾಗಿರುವ ವಚನವಂದನ, ಗುರುವಂದನೆ, ಸದಾಶಿವ ಶ್ರೀಗಳ ಬೆಳ್ಳಿ ತುಲಾಭಾರವನ್ನು ಕಣ್ತುಂಬಿಕೊಳ್ಳಲು ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇನ್ನೂ ಮಂಗಳವಾರ ನಡೆದ ಪೂಜ್ಯದ್ವಯರ ಭಾವಚಿತ್ರ ಮೆರವಣಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳಲು ಹಾವೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಟ್ರ್ಯಾಕ್ಟರ್, ಎತ್ತಿನ ಗಾಡಿ ಹಾಗೂ ಖಾಸಗಿ ವಾಹನಗಳ ಮೂಲಕ ಜಾತ್ರೆಗೆ ಆಗಮಿಸಿ ಉಭಯ ಶ್ರೀಗಳ ಜಾತ್ರಾ ಮಹೋತ್ಸವದ ದರ್ಶನವನ್ನು ಪಡೆದು ಪುನೀತರಾದರು.