ಮಾನವ ಸರಪಳಿ ಸಂಪೂರ್ಣ ಯಶಸ್ವಿ

| Published : Sep 16 2024, 01:49 AM IST / Updated: Sep 16 2024, 01:50 AM IST

ಸಾರಾಂಶ

The human chain is a complete success

ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು

ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಕೆಲವೆಡೆ ಸಣ್ಣ ಪುಟ್ಟ ಘಟನೆಗಳು ಹೊರತು ಪಡಿಸಿದರೆ ತಾಲೂಕಿನಲ್ಲಿ ಬಹುತೇಕ ಯಶಸ್ವಿಯಾಗಿ ನಡೆಯಿತು.

ತಾಲೂಕಿನ ಮೇಗಳ ಕಣಿವೆಯಿಂದ ಸಾಗಿ ರಾಂಪುರ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 150 ಮೂಲಕ ತಾಲೂಕಿನ ಗಡಿ ಬಿ.ಜಿ.ಕೆರೆ ಯರಬಳ್ಳಿ ಮಾರಮ್ಮನ ದೇವಸ್ಥಾನದವರೆಗೆ 50 ಕಿ ಮೀ ವ್ಯಾಪ್ತಿಯಲ್ಲಿ ನಿರ್ಮಾಣವಾಗಿತ್ತು.

ಕಸಬಾ ಮತ್ತು ದೇವಸಮುದ್ರ ಸೇರಿದಂತೆ ಎರಡೂ ಹೋಬಳಿಗಳ ಪೈಕಿ ಪ್ರಮುಖ ಗ್ರಾಮಗಳ ಸಮೀಪದಲ್ಲಿ ಹೆಚ್ಚಿನ ಜನರಿಂದ ಮಾನವ ಸರಪಳಿ ಉತ್ತಮವಾಗಿ ಕಂಡರೂ ಕೆಲವೆಡೆ ಜನರಿಲ್ಲದೆ ಸರಪಳಿ ಕೊಂಡಿ ಕಳಚಿಕೊಂಡು ಬಿಕೋ ಎನ್ನುವಂತೆ ಕಂಡು ಬಂತು.

ಕಮರಾ ಕಾವಲ್, ರಾಯಪುರ, ಅಂಕುಂದಿ, ಬೈರಾಪುರ ಸೇರಿದಂತೆ ಹಲವು ಕಡೆ ಜನಸಂಖ್ಯೆ ವಿರಳ ಎನ್ನುವಂತೆ ಕಂಡುಬಂತಾದರೂ ಬಿಜಿಕೆರೆ, ಹಾನಗಲ್, ನಾಗಸಮುದ್ರ, ಬಸವೇಶ್ವರನಗರ, ರಾಂಪುರ , ಮೇಗಳ ಕಣವಿ ಸೇರಿದಂತೆ ವಿವಿಧ ಕಡೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಹುತೇಕ ವಿದ್ಯಾರ್ಥಿಗಳಿಂದಲೇ ಮಾನವ ಸರಪಳಿ ರಚನೆಯಾಗಿತ್ತು.

ಸರ್ಕಾರದ ಭಾಗವಾಗಿರುವ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಬಹುತೇಕ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಇದ್ದರು. ಚಳ್ಳಕೆರೆ ಸೇರಿದಂತೆ ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದರು.

ಮಾನವ ಸರಪಳಿ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಲಾ ವಿದ್ಯಾರ್ಥಿಗಳು ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆ, ಚುನಾಯಿತ ಪ್ರತಿನಿಧಿಗಳಿಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಬಾಟಲಿ ನೀರಿನ ವ್ಯವಸ್ಥೆ ಮಾಡಿದ್ದರು. ದೂರದಿಂದ ಬರುವ ಶಾಲಾ ವಿದ್ಯಾರ್ಥಿಗಳಿಗೆ ಉಪಹಾರ ಕಲ್ಪಿಸಿದ್ದು ಗಮನಾರ್ಹವಾಗಿತ್ತು. 9.30 ಕ್ಕೆ ಪ್ರಾರಂಭವಾದ ಮಾನವ ಸರಪಳಿ 10.30 ಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

....ಬಾಕ್ಸ್ ....

ಪ್ರಜಾಪ್ರಭುತ್ವದ ಮೌಲ್ಯವನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಸರ್ಕಾರ ಆಯೋಜಿಸಿದ್ದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಕ್ಷೇತ್ರದ ಜನ ಉತ್ತಮ ಬೆಂಬಲ ವ್ಯಕ್ತಪಡಿಸಿದ್ದು, ಶ್ಲಾಘನೀಯ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರು.

ತಾಲೂಕಿನ ರಾಂಪುರ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಜಾಪ್ರಭುತ್ವ ದಿನಾಚರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಆಯೋಜಿಸಲಾಗಿದ್ದ ಮಾನವ ಸರಪಳಿ ನಿರ್ಮಾಣ ಸಾಗಿರುವ ಕ್ಷೇತ್ರದಲ್ಲಿ ಉತ್ತಮ ಬೆಂಬಲ ಸಿಕ್ಕಿರುವುದು ಅವಿಸ್ಮರಣೀಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಉತ್ತಮ ಕಾರ್ಯಕ್ರಮ ಇದಾಗಿದೆ. ಇದರ ಯಶಸ್ವಿಗೆ ಹಗಲಿರುಳು ಶ್ರಮಿಸಿದ ಅಧಿಕಾರಿಗಳು ಹಾಗೂ ಸ್ಥಳೀಯರ ಶ್ರಮ ಅವಿಸ್ಮರಣೀಯ. ಹಿಂದುಳಿದ ಭಾಗದಲ್ಲಿ ಕಾರ್ಯಕ್ರಮಕ್ಕೆ ಉತ್ತಮ ಸಹಕಾರ ಸಿಕ್ಕಿದ್ದು ಅತ್ಯಂತ ಸಂತಸವಾಗಿದೆ ಎಂದರು