ಭಕ್ತ ಕನಕದಾಸರ ಕೀರ್ತನೆಗಳು ದೇಶಕ್ಕೆ ಮಾದರಿಯಾಗಿವೆ. ಕನಕದಾಸರ ಆದರ್ಶ ಬದುಕು ನಮ್ಮ ನಿಜ ಜೀವನದಲ್ಲಿ ಮೈಗೊಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಭಕ್ತ ಕನಕದಾಸರ ಕೀರ್ತನೆಗಳು ದೇಶಕ್ಕೆ ಮಾದರಿಯಾಗಿವೆ. ಕನಕದಾಸರ ಆದರ್ಶ ಬದುಕು ನಮ್ಮ ನಿಜ ಜೀವನದಲ್ಲಿ ಮೈಗೊಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದಡಿ ನಡೆದ ಭಕ್ತ ಕನಕದಾಸರ 538ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಶುದ್ಧ ಕಾಯಕದ ಸಂಕೇತವೆ ಹಾಲುಮತ. ಈ ಸಮುದಾಯದಲ್ಲಿ ಜನಿಸಿದ ಕನಕರು ಕೇವಲ ತಮ್ಮ ಒಂದೇ ಜಾತಿಗೆ ಸೀಮಿತವಾಗಲಿ ಎನ್ನುವ ಭಾವನೆಯಿಂದ ಕವನ ಮತ್ತು ವಚನಗಳನ್ನು ರಚಿಸಿಲ್ಲ. ಇಡೀ ಮನುಕುಲಕ್ಕೆ ದಾರಿ ದೀಪವಾಗುವ ನಿಟ್ಟಿನಲ್ಲಿ ಸಾವಿರಾರು ವಚನಗಳು ಬರೆದು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಕನಕರ ಜಯಂತಿ ಕೇವಲ ವೇದಿಕೆಗೆ ಅಷ್ಟೇ ಸೀಮಿತವಾಗಬಾರದು. ಪ್ರತಿನಿತ್ಯ ಮಕ್ಕಳಿಗೆ ಕನಕದಾಸರ ಜೀವನ ಚರಿತೆ ತಿಳಿಸುವ ಕಾರ್ಯವಾಗಬೇಕು ಎಂದರು.ಅರವಿಂದ ಮನಗೂಳಿ ಮಾತನಾಡಿ, ಇಂದಿನ ಯುವ ಪೀಳಿಗೆ ದುಶ್ಚಟಕ್ಕೆ ಬಿದ್ದು ತಮ್ಮ ಸುಂದರ ಬದುಕು ನಾಶ ಮಾಡಿಕೊಳ್ಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಹಾಲುಮತ ಬಾಂಧವರು ಆರ್ಥಿಕವಾಗಿ ಸದೃಢವಾಗಿದ್ದಾರೆ. ಆದರೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿಲ್ಲ. ಒಂದು ಸಮಾಜ ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರೆ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು, ಆ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಗುವಿಗೆ 18 ವರ್ಷ ತುಂಬುವುದಷ್ಟೇ ತಡ ಪಾಲಕರು ಮದುವೆ ಮಾಡಲು ಮುಂದಾಗುತ್ತಾರೆ. ಗಂಡು- ಹೆಣ್ಣು ಬೇಧ ಮಾಡಿ ಹೆಣ್ಣು ಮಕ್ಕಳನ್ನು ಶಿಕ್ಷದಿಂದ ವಂಚಿತರಾಗಿಸಬೇಡಿ. ಕನಕದಾಸರು ತಮ್ಮ ಭಕ್ತಿ ಮೂಲಕ ಪ್ರತ್ಯಕ್ಷ ದೇವರನ್ನು ಕಂಡಂತ ಶ್ರೇಷ್ಠ ಭಕ್ತರು. ಅವರು ಮರೆಯಾದರು ಅವರ ಜೀವನ ಚರಿತ್ರೆ ಸೂರ್ಯ ಚಂದ್ರರಿರುವರೆಗೂ ಅಜರಾಮರ ಎಂದು ಹೇಳಿದರು.
ಸಮಾಜದ ಮುಖಂಡ, ಸರ್ಕಾರದ ಪಂಚ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಶ್ರೀಶೈಲ ಕವಲಗಿ ಮಾತನಾಡಿ, ಇಂದಿನ ರಾಜಕೀಯ ನಾಯಕರುಗಳು ನಮ್ಮನ್ನು ಒಡೆದು ಆಳುತ್ತಿದ್ದಾರೆ. 38 ಸಾವಿರ ಮತಗಳನ್ನು ಹೊಂದಿದ ಹಾಲುಮತ ಸಮುದಾಯದ ಗುಡಿ ಗುಂಡಾರು ಅಭಿವೃದ್ಧಿ ಕುರಿತು ಜನನಾಯಕರುಗಳಿಗೆ ಅನುದಾನ ಕೇಳಿದರೆ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳುತ್ತಾರೆ. ಆದರೆ ಬೇರೆ ಸಮುದಾಯದ ಸ್ಮಶಾನಕ್ಕೆ ಕಂಪೌಂಡ್ ಕಟ್ಟಲು ಹಣ ನೀಡುತ್ತಿದ್ದಾರೆ. ಒಟ್ಟಾರೆ ರಾಜಕಾರಣಿಗಳು ಕುರುಬರನ್ನು ಕಡೆಗಣಿಸುತ್ತಿದ್ದು ನಾವೆಲ್ಲರೂ ಎಚ್ಚೆತ್ತು ಸಂಘಟಿತರಾಗಬೇಕು ಎಂದರು.ಮುಖಂಡ ರವಿಕಾಂತ ನಾಯ್ಕೋಡಿ, ಮಾಜಿ ಜಿಪಂ ಉಪಾಧ್ಯಕ್ಷ ಮಲ್ಲಣ್ಣ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 11ಕ್ಕೆ ಸಕಲ ವಾದ್ಯ ವೈಭವದಿಂದ ಡಾ.ಅಂಬೇಡ್ಕರ್ ವೃತ್ತದಿಂದ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ಪ್ರಾರಂಭವಾಗಿ ಬಸವೇಶ್ವರ ವೃತ್ತದಿಂದ ಮೂಲ ವೇದಿಕೆ ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿತು.ಅಭಿನವ ಪುಂಡಲಿಂಗ ಮಹಾರಾಜರು ಗೋಳಸಾರ ಹಾಗೂ ಹುಲಜಂತಿ ಪೀಠದ ಪಟ್ಟಾಧಿಕಾರಿ ಶ್ರೀ ಮಹಾಲಿಂಗರಾಯ ಸಾನ್ನಿಧ್ಯ ವಹಿಸಿದ್ದರು. ಇಂಡಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಡಿ ಪಾಟೀಲ್, ರಮೇಶ ಬಂಟನೂರ, ಸಿದ್ದು ಬುಳ್ಳಾ, ನಾಗಪ್ಪ ಶಿವೂರ, ಮಲ್ಲು ಸಾವಳಸಂಗ, ಯಲ್ಲು ಬಮನಳ್ಳಿ, ಮಾಡ್ದಪ್ಪ ಸೊನ್ನದ, ವಿಠಲ ಮಾಡಬಾಳ, ಸಿದ್ದು ಬೀರಗೊಂಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.