ಬಸವಣ್ಣ, ಅಂಬೇಡ್ಕರ್‌ ವಿಚಾರ ಕಾರ್ಯರೂಪಕ್ಕೆ ಬರಬೇಕು

| Published : Jul 01 2024, 01:46 AM IST

ಸಾರಾಂಶ

ಸಮಾಜದಲ್ಲಿ ಬಸವಣ್ಣ ಮತ್ತು ಅಂಬೇಡ್ಕರ್‌ ಅವರ ವಿಚಾರಗಳು ಕಾರ್ಯರೂಪಕ್ಕೆ ತಂದಾಗ ಸಮಾನತೆಯು ತಕ್ಕಮಟ್ಟಿಗಾದರೂ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಸದಾಶಿವ ಮರ್ಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮಾಜದಲ್ಲಿ ಬಸವಣ್ಣ ಮತ್ತು ಅಂಬೇಡ್ಕರ್‌ ಅವರ ವಿಚಾರಗಳು ಕಾರ್ಯರೂಪಕ್ಕೆ ತಂದಾಗ ಸಮಾನತೆಯು ತಕ್ಕಮಟ್ಟಿಗಾದರೂ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಸದಾಶಿವ ಮರ್ಜಿ ಅಭಿಪ್ರಾಯಪಟ್ಟರು.

ನವನಗರ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದ ಕಾರ್ಯಕ್ರಮದಲ್ಲಿ ದಮನಿತ ಲೋಕದ ಸಬಲೀಕರಣ ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುದ್ದನ ಕಾಲದಿಂದಲೂ ಸಮಾಜದ ಸಮಾನತೆಗೆ ಹೋರಾಟಗಳು ನಡೆದಿವೆ. ಬಸವಣ್ಣನವರು ಸಮಾಜದಲ್ಲಿ ಸಮಾನತೆಗಾಗಿ ದಮನಿತರನ್ನು ಒಪ್ಪಿಕೊಂಡು, ಅಪ್ಪಿಕೊಂಡು ಮೇಲಕ್ಕೆ ಎತ್ತುವ ಪ್ರಯತ್ನಪಟ್ಟರು. ಇದರ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್‌ ಅವರು ತಮ್ಮ ಬದುಕಿನಲ್ಲಿ ಎದುರಾದ ಸಾಮಾಜಿಕ ಸಮಸ್ಯೆಗಳನ್ನು, ಸಾಮಾಜಿಕ ಪಿಡುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂವಿಧಾನದ ಮೂಲಕ ದಮನಿತ ಲೋಕದ ಸಬಲೀಕರಣಕ್ಕೆ ಪರಿಹಾರ ನೀಡಿದ್ದಾರೆ. ಇಂತರ ಪ್ರಯತ್ನ ಪ್ರಯತ್ನದಲ್ಲಿ ಅನೇಕರು ಇದ್ದಾರೆ. ಅವರ ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ದಮನಿತರನ್ನು ನಾವೆಲ್ಲ ಪ್ರೀತಿಯಿಂದ ಒಪ್ಪಿಕೊಂಡು ಬದುಕಬೇಕಾಗಿದೆ. ಇದು ಮಾನವೀಯ ಜೀವನ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಪತ್ರಕರ್ತ ಮುತ್ತು ನಾಯ್ಕರ ಮಾತನಾಡಿ, ದಮನಿತರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದರೆ ಇಷ್ಟೊತ್ತಿಗೆ ಸ್ವಲ್ಪಮಟ್ಟಿಗಾದರೂ ಬದಲಾವಣೆ ಕಾಣಬಹುದಾಗಿತ್ತು. ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ದಮನಿತರಿಗೆ ಅವಕಾಶ ನೀಡುವ ಮೂಲಕ ಅವರ ಬದುಕಿಗೆ ಶಕ್ತಿ ನೀಡುವ ಕೆಲಸವಾಗಬೇಕಾಗಿದೆ ಎಂದರು.ಜಿಲ್ಲಾ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಎಲ್.ಸಿ.ಯಂಕಂಚಿ, ಉದ್ಯಮಿ ಕೃಷ್ಣ ಯಡಹಳ್ಳಿ ಮಾತನಾಡಿದರು. ಡಾ.ಚಂದ್ರಶೇಖರ ಕಾಳನ್ನವರ ಸ್ವಾಗತಿಸಿದರು. ವೈ.ಆರ್.ಭೂತಾಳಿ ವಂದಿಸಿದರು.