ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಸಂತ ಸೇವಾಲಾಲರ ಆದರ್ಶ ವಿಚಾರಗಳನ್ನು ಹಾಗೂ ಅವರ ತತ್ವಾದರ್ಶಗಳನ್ನು ಯುವ ಪೀಳಿಗೆ ಅಳವಡಿಕೊಳ್ಳಬೇಕು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಂತ ಸೇವಾಲಾಲರ ಆದರ್ಶ ವಿಚಾರಗಳನ್ನು ಹಾಗೂ ಅವರ ತತ್ವಾದರ್ಶಗಳನ್ನು ಯುವ ಪೀಳಿಗೆ ಅಳವಡಿಕೊಳ್ಳಬೇಕು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸತ್ಯ, ಧರ್ಮ ಹಾಗೂ ಸಂಸ್ಕಾರಗಳನ್ನು ರೂಢಿಸಿಕೊಂಡು ಸಂತರ ದಾರ್ಶನಿಕರ ಮಾರ್ಗದಲ್ಲಿ ನಾವೆಲ್ಲ ಸಾಗಬೇಕು ಎಂದು ಕರೆ ನೀಡಿದರು.
ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಯುವ ಜನಾಂಗ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ದಾರ್ಶನಿಕರ ತತ್ವಾದರ್ಶಗಳನ್ನು ತಿಳಿದುಕೊಳ್ಳಬಹುದಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಾಧನೆಗೆ ಹಾಗೂ ಮಕ್ಕಳ ಸುಂದರ ಜೀವನ ಉಜ್ವಲವಾಗುವಂತೆ ಉತ್ತಮವಾಗಿ ಭವಿಷ್ಯ ರೂಪಿಸಿಕೊಳ್ಳಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ ಮಾತನಾಡಿ, ಸಂತ ಸೇವಾಲಾಲರ ಜೀವನ, ಅವರ ಕಾಯಕ ತತ್ವ, ಅವರ ಆದರ್ಶ ವಿಚಾರ ಮತ್ತು ಅವರ ಜೀವನದ ಸಂದೇಶ ಕುರಿತು ಉಪನ್ಯಾಸ ನೀಡಿದರು.
ಪಾಲಿಕೆ ಸದಸ್ಯೆ ಸುಮಿತ್ರಾ ಜಾಧವ, ಜಿಪಂ ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಪಾಲಿಕೆಯ ಉಪ ಆಯುಕ್ತ ನಾರಾಯಣಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಬೋವಿ, ನಿವೃತ್ತ ಶಿಕ್ಷಕ ಎಚ್.ಎ.ಮಮದಾಪೂರ, ಕೇಶು ನಾಯಕ, ರಾಜಪಾಲ ಚವ್ಹಾಣ, ರುಕ್ಮಿಣಿ ಚವ್ಹಾಣ, ಸುರೇಶ ಬಿಜಾಪುರ, ಭೀಮರಾಯ ಜಿಗಜಿಣಗಿ, ದೇವೆಂದ್ರ ಮಿರೆಕರ್, ಸೋಮನಗೌಡ ಕಲ್ಲೂರ, ವಿದ್ಯಾವತಿ ಅಂಕಲಗಿ, ಗಿರೀಶ್ ಕುಲಕರ್ಣಿ ಸೇರಿದಂತೆ ಮುಂತಾದವರು ಇದ್ದರು.ಮೆರವಣಿಗೆಗೆ ಡಿಸಿ ಚಾಲನೆ: ಸೇವಾಲಾಲ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ನಗರದ ಶ್ರೀ ಸಿದ್ದೇಶ್ವರ ದೇಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು. ಮೆರವಣಿಗೆ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತ ಮಾರ್ಗವಾಗಿ ಕಂದಗಲ್ ಹನುಮಂತರಾಯ ರಂಗಮಂದಿಕ್ಕೆ ತೆರಳಿತು.