ವಾಲ್ಮೀಕಿ ರಚಿಸಿದ ರಾಮಾಯಣದ ಪ್ರತಿಯೊಂದು ಶ್ಲೋಕವು ಮನುಕುಲಕ್ಕೆ ಸನ್ಮಾರ್ಗವನ್ನು ತೋರಿಸುವ ದೀವಿಗೆ ಯಾಗಿದೆ. ಅವರ ಜೀವನ ಚರಿತ್ರೆ ಮತ್ತು ಆದರ್ಶಗಳು ಪ್ರತಿಯೊಬ್ಬ ಭಾರತೀಯನೂ ಸದಾಸ್ಮರಣೀಯ ಮತ್ತು ಪ್ರೇರಣದಾಯಕವಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಇಂದಿನ ಆಧುನಿಕ ಮತ್ತು ಯಾಂತ್ರಿಕ ಜಗತ್ತಿನಲ್ಲಿ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ನಮಗೆ ಹೆಚ್ಚು ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಶಿವಕುಮಾರ್ ಬಿರಾದಾರ ಸೋಮವಾರ ಹೇಳಿದರು.ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಜ್ಞಾನ, ತಪಸ್ಸು, ಕಾವ್ಯ, ಮತ್ತು ಮಾನವೀಯ ಮೌಲ್ಯಗಳಿಗೆ ಅತ್ಯುನ್ನತ ಸ್ಥಾನವಿದೆ. ಈ ಪರಂಪರೆಯ ಬೇರುಗಳನ್ನು ಆಳವಾಗಿ ಬಿತ್ತಿದ ಮಹಾನ್ ಋಷಿಗಳಲ್ಲಿ ವಾಲ್ಮೀಕಿ ಅಗ್ರಗಣ್ಯರು ಎಂದು ಬಣ್ಣಿಸಿದರು.
ವಾಲ್ಮೀಕಿ ರಚಿಸಿದ ರಾಮಾಯಣದ ಪ್ರತಿಯೊಂದು ಶ್ಲೋಕವು ಮನುಕುಲಕ್ಕೆ ಸನ್ಮಾರ್ಗವನ್ನು ತೋರಿಸುವ ದೀವಿಗೆ ಯಾಗಿದೆ. ಅವರ ಜೀವನ ಚರಿತ್ರೆ ಮತ್ತು ಆದರ್ಶಗಳು ಪ್ರತಿಯೊಬ್ಬ ಭಾರತೀಯನೂ ಸದಾಸ್ಮರಣೀಯ ಮತ್ತು ಪ್ರೇರಣದಾಯಕವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ಮಾತನಾಡಿ, ವಾಲ್ಮೀಕಿ ಮಹರ್ಷಿಯವರ ಸಾಹಿತ್ಯ ಮತ್ತು ಸಂಸ್ಕೃತಿ ಅನನ್ಯ ರತ್ನವಾಗಿದೆ. ತ್ರೇತಾ ಯುಗದಲ್ಲಿ ರಾಮಾಯಣ ಮಹಾಕಾವ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಅವರ ಮೌಲ್ಯಗಳಿಂದ ಜೀವನದಲ್ಲಿ ನಾವು ಹೇಗೆ ಬದುಕು ನಡೆಸಬೇಕು ಎನ್ನುವುದನ್ನು ವಾಲ್ಮೀಕಿ ಅವರು ತಮ್ಮ ಕಾವ್ಯಗಳ ಮೂಲಕ ಪ್ರಚುರ ಪಡಿಸಿದ್ದಾರೆ ಎಂದರು.
ಮಹರ್ಷಿ ವಾಲ್ಮೀಕಿ ಕುರಿತು ತರೀಕೆರೆ ರಾಜಮುಡಿ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡಿದ ಸಾಧಕರಾದ ರಂಗ ಕಲಾವಿದ ಚೆಲುವರಾಜು, ಚಾಕನಕೆರೆ ಪುಟ್ಟ ಗೌರಮ್ಮ, ಕೊಪ್ಪ ಗ್ರಾಮದ ಪಾರ್ವತಮ್ಮ, ಮದ್ದೂರಿನ ಸೌಮ್ಯಾವತಿ ಹಾಗೂದುಂಡನಹಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಪುಷ್ಪಲತಾ ಅವರುಗಳನ್ನು ಅಭಿನಂದಿಸಲಾಯಿತು. ಅಲ್ಲದೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ತಾಪಂ ಇಒ ರಾಮಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೈ.ಸಿ. ಮನುಜಶ್ರೀ, ನಗರಸಭೆ ಪೌರಾಯುಕ್ತೆ ಎಸ್. ಎನ್. ರಾಧಿಕಾ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅರುಣ್ ಕುಮಾರ್, ಕೃಷಿ ಅಧಿಕಾರಿ ಪರಮೇಶ್, ಸಿಪಿಐ ನವೀನ್, ದಲಿತ ಮುಖಂಡ ಆತಗೂರು ವೆಂಕಟಾಚಲಯ್ಯ, ಸನ್ಮಾನ ಸಮಿತಿ ಅಧ್ಯಕ್ಷ ಡಾ.ಬಿ. ಕೃಷ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಶ್ರೀ ನರಸಿಂಹ ಸ್ವಾಮಿ ದೇವಾಲಯದ ಆವರಣದಿಂದ ಅಂಬೇಡ್ಕರ್ ಭವನದವರೆಗೆ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.