ಮುನಿ ಮಹಾರಾಜರ ತತ್ವಾದರ್ಶಗಳು ಸರ್ವವಂದ್ಯ

| Published : Feb 08 2024, 01:35 AM IST

ಸಾರಾಂಶ

ಜೈನ ಮುನಿ ಮಹಾರಾಜರು ಬೋಧಿಸಿದ ಅಹಿಂಸಾ ಮತ್ತು ನೈತಿಕ ಜೀವನ ಕ್ರಮಗಳು ಭೂಮಿ ಇರುವವರೆಗೂ ಶಾಶ್ವತವಾಗಿದ್ದು, ಜಗತ್ತಿನ ಅತ್ಯಂತ ಪ್ರಾಚೀನ ಧರ್ಮದ ಪರಮೋಚ್ಛ ಆಚಾರ-ವಿಚಾರಗಳು ಚಿರಸ್ಥಾಯಿಯಾಗಿವೆ. ಆಚಾರ್ಯ ೧೦೮ ಮಹಾಬಲ ಮುನಿ ಮಹಾರಾಜರ ಉಚ್ಚ ನೀತಿಬೋಧಕ ವಿಚಾರಗಳಿಂದಾಗಿ ಅವರ ತತ್ವಾದರ್ಶಗಳು ಸರ್ವವಂದ್ಯವಾಗಿವೆ ಎಂದು ಧುರೀಣ ಪ್ರವೀಣ ನಾಡಗೌಡ ನುಡಿದರು.

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ಜೈನ ಮುನಿ ಮಹಾರಾಜರು ಬೋಧಿಸಿದ ಅಹಿಂಸಾ ಮತ್ತು ನೈತಿಕ ಜೀವನ ಕ್ರಮಗಳು ಭೂಮಿ ಇರುವವರೆಗೂ ಶಾಶ್ವತವಾಗಿದ್ದು, ಜಗತ್ತಿನ ಅತ್ಯಂತ ಪ್ರಾಚೀನ ಧರ್ಮದ ಪರಮೋಚ್ಛ ಆಚಾರ-ವಿಚಾರಗಳು ಚಿರಸ್ಥಾಯಿಯಾಗಿವೆ. ಆಚಾರ್ಯ ೧೦೮ ಮಹಾಬಲ ಮುನಿ ಮಹಾರಾಜರ ಉಚ್ಚ ನೀತಿಬೋಧಕ ವಿಚಾರಗಳಿಂದಾಗಿ ಅವರ ತತ್ವಾದರ್ಶಗಳು ಸರ್ವವಂದ್ಯವಾಗಿವೆ ಎಂದು ಧುರೀಣ ಪ್ರವೀಣ ನಾಡಗೌಡ ನುಡಿದರು.

ಪಟ್ಟಣದ ಸಮಸ್ತ ಜೈನ ಶ್ರಾವಕರು ಪ್ರತಿ ವರ್ಷದಂತೆ ಈ ವರ್ಷವೂ ಸಮಾಧಿ ಸಾಮ್ರಾಟ, ಶಾಂತಮೂರ್ತಿ, ತಪೋನಿಧಿ ಶ್ರೀ೧೦೮ ಮಹಾಬಲ ಮುನಿ ಮಹಾರಾಜರ ೨೮ನೇ ಪುಣ್ಯತಿಥಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಭಾವಚಿತ್ರವನ್ನು ಸಕಲ ಮಂಗಲವಾದ್ಯಗಳೊಡನೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಮೆರವಣಿಗೆ ಮಾಡುವ ಮೂಲಕ ನೆರವೇರಿಸಿದರು.

ಮೆರವಣಿಗೆಯು ಶ್ರೀ ೧೦೦೮ ನೇಮಿನಾಥ ಗೊಂಕ ಜಿನಾಲಯದಿಂದ ಪ್ರಾರಂಭವಾಗಿ ನಾಡಕಚೇರಿ, ಚಾವಡಿ ಸರ್ಕಲ್, ಜವಳಿ ಬಜಾರ, ಶ್ರೀ ೧೦೦೮ ಅಜೀತನಾಥ ದಿಗಂಬರ ಜೈನ ಮಂದಿರ, ಹಳಪೇಠ ಗಲ್ಲಿ, ರೇಣುಕಾ ಗಲ್ಲಿ, ಜೋಳದ ಬಜಾರ, ಕಾಯಿಪಲ್ಲೆ ಮಾರುಕಟ್ಟೆ, ತಹಶೀಲ್ದಾರ ಕಚೇರಿ, ಬಸ್‌ ನಿಲ್ದಾಣ, ಮಹಾವೀರ ಸರ್ಕಲ್ ಮೂಲಕ ಗುರುಕುಲ ರಸ್ತೆಯ ಪಕ್ಕದಲ್ಲಿರುವ ಮುನಿಗಳ ನಿವಾಸದಲ್ಲಿ ಕೊನೆಗೊಂಡಿತು. ಮೆರವಣಿಗೆಯುದ್ದಕ್ಕೂ ಅಪಾರ ಜೈನ ಶ್ರಾವಕರಿಂದ ಜೈನ ಸಮಾಜದ ಜೈ ಘೋಷಗಳು ಝೇಂಕರಿಸಿದವು. ಕೊನೆಗೆ ಮಹಾಬಲ ಮುನಿ ಮಹಾರಾಜರ ಸಮಾಧಿ ಸ್ಥಳದಲ್ಲಿ ಪೂಜೆ ಕೈಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಭೀಮಗೊಂಡ ಸದಲಗಿ, ಮಲ್ಲಿನಾಥ ಬೋಳಗೊಂಡ, ಅಶೋಕ ಅಳಗೊಂಡ, ವರ್ಧಮಾನ ಕಡಹಟ್ಟಿ, ಸುನೀಲ ಅಳಗೊಂಡ, ಡಾ.ಜೆ.ಬಿ.ಆಲಗೂರ. ಡಿ.ಆರ್.ಪಾಟಿಲ, ಜಿನ್ನಪ್ಪ ಹೊಸೂರ, ನರಸಪ್ಪ ಕಾಗಿ, ಪ್ರಭು ಜೈನರ, ರಾಜು ಮುಧೋಳ, ಮಹಾವೀರ ಮಹಿಷವಾಡಗಿ ಹಾಗೂ ಇನ್ನೂ ಅನೇಕ ಯುವಕರು, ಹಿರಿಯರು, ಮಹಿಳೆಯರು, ಚಿಕ್ಕಮಕ್ಕಳು, ಗುರುಕುಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಎಲ್ಲ ಶಾಲಾ ಕಾಲೇಜುಗಳ ಸಿಬ್ಬಂದಿಯವರು ಉಪಸ್ಥಿತರಿದ್ದರು.