ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ತ್ಯಾಗಿಗಳು ಹಾಗೂ ಹೋರಾಟಗಾರರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿದ್ದು ಅವರನ್ನು ಸ್ಮರಿಸುವ ಮೂಲಕ ಯುವ ಪೀಳಿಗೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ದೇಶಕ್ಕೆ ಮತ್ತು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ತಾಲೂಕಿನ ರಂಗಾಪುರ ಶ್ರೀಮಠದ ಆವರಣದಲ್ಲಿ ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾಪೀಠದ ಎಲ್ಲಾ ಶಾಲಾ-ಕಾಲೇಜುಗಳ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು ಸಾವಿರಾರು ದೇಶಭಕ್ತರ ಹೋರಾಟದ ಫಲವಾಗಿ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡುಗಡೆ ಹೊಂದಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಈ ದಿನವನ್ನು ನಾವೆಲ್ಲರೂ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ವಿದೇಶಿಯರಿಂದ ನಮ್ಮ ದೇಶವನ್ನು ಬಿಡಿಸಿಕೊಂಡು ಅಖಂಡ ಭಾರತ ನಿರ್ಮಿಸಲು ದೇಶಾಭಿಮಾನಿಗಳ ತ್ಯಾಗ, ಬಲಿದಾನಗಳಿಂದಲೇ ಸ್ವಾತಂತ್ರ್ಯ ಭಾರತವಾಗಿ ವಿಶ್ವದಲ್ಲೇ ಆರ್ಥಿಕತೆ ಹಾಗೂ ಅಭಿವೃದ್ದಿಯಲ್ಲಿ ಮಂಚೂಣಿಯಲ್ಲಿದೆ. ಹಾಗಾಗಿ ಪ್ರತಿಯೊಬ್ಬರು ದೇಶಭಕ್ತಿ, ದೇಶಪ್ರೇಮ, ಸಹನೆ, ತಾಳ್ಮೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸ್ವಾತಂತ್ರ್ಯದ ಮಹತ್ವವನ್ನು ಅರಿತು ದೇಶದ ಅಭಿವೃದ್ದಿಗೆ ಮುಂದಾಗಬೇಕಿದೆ. ಎಲ್ಲರಲ್ಲಿಯೂ ನಮ್ಮ ದೇಶ, ಭಾಷೆ, ನೆಲ, ಜಲದ ಬಗ್ಗೆ ಗೌರವ ಹೆಚ್ಚಾಗಬೇಕು. ದೇಶಾಭಿಮಾನ, ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಎಸ್‌ಪಿಎಸ್ ವಿದ್ಯಾಪೀಠದ ಸಹ ಕಾರ್ಯದರ್ಶಿ ಕೆ.ಆರ್. ಶಂಕರಪ್ಪ, ಉಪನ್ಯಾಸಕ ಜಿ.ಆರ್.ಪ್ರಕಾಶ್, ಗ್ರಾ.ಪಂ ಸದಸ್ಯ ಶಿವಶಂಕರ್, ಸಿಆರ್‌ಪಿ ದಿವಕರ್, ಮುಖ್ಯಶಿಕ್ಷಕ ಕುಮಾರ್, ಐಟಿಯ ಕಾಲೇಜಿನ ಪ್ರಾಂಶುಪಾಲ ಶಶಿಧರ್ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶ್ರೀಮಠದ ಭಕ್ತರು ಭಾಗವಹಿಸಿದ್ದರು.