ಕಾರಟಗಿ ಕೆಪಿಎಸ್ ಕಾಲೇಜು ವಿಭಾಗದಲ್ಲಿ ಗುರುವಾರ ಡಾ. ಸಿದ್ದಯ್ಯ ಪುರಾಣಿಕ ಅವರ ಮೊದಲು ಮಾನವನಾಗು ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿದ್ದಯ್ಯ ಪುರಾಣಿಕ ಅವರ ಬದುಕು ಬರಹ ಕುರಿತು ಉಪನ್ಯಾಸಕ ಹಾಗೂ ಕವಿ ಮಹೇಶ ಬಳ್ಳಾರಿ ಉಪನ್ಯಾಸ ನೀಡಿದರು.

ಕಾರಟಗಿ: ಕೊಪ್ಪಳ ತಿರುಳ್ಗನ್ನಡ ನಾಡಿನ ವಚನಕಾರರು, ಉತ್ತಮ ಆಡಳಿತಗಾರರಾದ ಡಾ. ಸಿದ್ದಯ್ಯ ಪುರಾಣಿಕರ ಸಾಹಿತ್ಯದ ವಿಚಾರಗಳು ಸರ್ವಕಾಲಿಕವಾಗಿವೆ. ಮನುಷ್ಯ ಮನುಷ್ಯರನ್ನು ಪ್ರೀತಿಸುವ ಮೊದಲು ಮಾನವನಾಗು ಎನ್ನುವ ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರಿದ ಕವಿ ಎಂದು ಉಪನ್ಯಾಸಕ ಹಾಗೂ ಕವಿ ಮಹೇಶ ಬಳ್ಳಾರಿ ಹೇಳಿದರು.

ಇಲ್ಲಿನ ಕೆಪಿಎಸ್ ಕಾಲೇಜು ವಿಭಾಗದಲ್ಲಿ ಗುರುವಾರ ನಡೆದ ಡಾ. ಸಿದ್ದಯ್ಯ ಪುರಾಣಿಕ ಅವರ ಮೊದಲು ಮಾನವನಾಗು ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿದ್ದಯ್ಯ ಪುರಾಣಿಕ ಅವರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು.

ಸಿದ್ದಯ್ಯ ಪುರಾಣಿಕರು ತಮ್ಮ ಬದುಕಿನಲ್ಲಿ ಅನೇಕ ಸಂಕಟಗಳನ್ನು ಎದುರಿಸಿದ್ದಾರೆ. ಅವರು ಉನ್ನತ ಅಧಿಕಾರಿಯಾಗಿದ್ದರೂ ಜನಮಾನಸದಲ್ಲಿ ಉಳಿಯುವಂತೆ ಸೇವೆಯನ್ನು ಮಾಡಿ ಈ ನಾಡಿಗೆ ಕನ್ನಡ ಮತ್ತು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಡಾ. ಸಿದ್ದಯ್ಯ ಪುರಾಣಿಕರನ್ನು ವಚನ ಬ್ರಹ್ಮ ಎಂದು ಕರೆಯುತ್ತಾರೆ. ಅವರ ಅನೇಕ ವಚನಗಳು ಮನುಷ್ಯ ಪ್ರೀತಿಯನ್ನು ಬಿತ್ತುತ್ತಿವೆ. ಹಾಗೆಯೇ ಬದುಕಿನ ಅಂತಃಕರುಣೆ, ಮಾನವಿಯತೆಯುಳ್ಳ ಅನೇಕ ಸಂದೇಶಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್‌ನ ಅಧ್ಯಕ್ಷ ಅಜಮೀರ್ ನಂದಾಪುರ ಮಾತನಾಡಿ, ಡಾ. ಸಿದ್ದಯ್ಯ ಪುರಾಣಿಕ ಅವರು ಕನ್ನಡ ಕಟ್ಟುವ ಕೆಲಸಗಳಲ್ಲಿ ಮುಂಚೂಣಿಯಲ್ಲಿ ಇದ್ದರು. ಅವರ ಮಾನವಪ್ರಜ್ಞೆ, ಜಾತಿ ನಿರ್ಮೂಲನೆ, ಮತ ಪಂಥಗಳ ಮೀರಿದ ವಿಚಾರಶೀಲತೆ ಅವರ ವಚನಗಳಲ್ಲಿ ಹಾಸುಹೊಕ್ಕಾಗಿವೆ ಎಂದರು.

ಪಿಯುಸಿ ಉಪ ನಿರ್ದೇಶಕ ರಾಜಶೇಖರ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಮೊದಲು ಮನುಷ್ಯರಾಗಬೇಕು ಎಂದು ಸಿದ್ದಯ್ಯ ಪುರಾಣಿಕ ಅವರು ತಮ್ಮ ವಚನಗಳಲ್ಲಿ ಸಾರಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ನೌಕರರ ಸಂಘದ ಹನುಮಂತಪ್ಪ ತೊಂಡಿಹಾಳ ಮಾತನಾಡಿ, ಡಾ. ಸಿದ್ದಯ್ಯ ಪುರಾಣಿಕ ಅವರ ಟ್ರಸ್ಟ್ ಅಡಿಯಲ್ಲಿ ಅವರ ವಿಚಾರಗಳನ್ನು ಮನೆಮನೆಗಗಳಿಗೂ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಾಲಾ-ಕಾಲೇಜುಗಳಲ್ಲಿ ಡಾ. ಸಿದ್ದಯ್ಯ ಪುರಾಣಿಕ ಅವರ ಸಾಹಿತ್ಯದ ಸಂದೇಶಗಳನ್ನು ಸಾರಬೇಕಾಗಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ್ ಕಿಲ್ಲೇದಾರ್ ಡಾ. ಸಿದ್ದಯ್ಯ ಪುರಾಣಿಕ ಅವರ ವಚನಗಳನ್ನು ಹಾಡಿದರು.

ಕೆಪಿಎಸ್ ಕಾಲೇಜು ವಿಭಾಗದ ಪ್ರಾಚಾರ್ಯ ನಾಗರಾಜ ಮೈನಹಳ್ಳಿ, ಉಪಪ್ರಾಚಾರ್ಯ ಶರಣಪ್ಪ ಸೋಮಲಾಪುರ, ರಾಜಶೇಖರ್ ಎಸ್. ಇದ್ದರು. ಟ್ರಸ್ಟ್‌ನ ಸಂಚಾಲಕ, ಸಾಹಿತಿ ರಮೇಶ ಸಿ. ಬನ್ನಿಕೊಪ್ಪ ಮತ್ತು ಹನುಮಂತಪ್ಪ ಚಂದಲಾಪುರ ಕಾರ್ಯಕ್ರಮ ನಿರ್ವಹಿಸಿದರು.