ಸಾರಾಂಶ
ಎಲ್ಲ ಭಾಷೆ, ಸಂಸ್ಕೃತಿ ಪ್ರೀತಿಸಬೇಕು. ಆದರೆ ನಮ್ಮ ಮಾತೃ ಭಾಷೆಯಲ್ಲಿ ಜೀವಿಸಬೇಕು ಎಂದು ಹಿರಿಯ ಸಾಹಿತಿ ಜಲಜಾ ಶೇಖರ್ ಅಭಿಮತ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕನ್ನಡ ನಾಡು, ನುಡಿ ಬೆಳವಣಿಗೆಗೆ ದುಡಿದ ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಶಾಫಿ ಸಅದಿ ಅಭಿಪ್ರಾಯಪಟ್ಟರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್‍ನ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್‍ಗೆ 105 ವರ್ಷಗಳ ಸಂಭ್ರಮ. ಕನ್ನಡ ಭಾಷೆಯ ರಕ್ಷಣೆಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನು ಸ್ಥಾಪಿಸಿದರು. ಈಗ ಹೆಮ್ಮರವಾಗಿ ಬೆಳೆದಿದೆ. ಈಗ ನಾವೆಲ್ಲರೂ ಜಾತಿ, ಧರ್ಮ,ಪಂಗಡ, ವರ್ಣ ಭೇದ ಮರೆತು ಕನ್ನಡ ಭಾಷಾ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.ಕನ್ನಡ ನಮ್ಮ ಅಸ್ಮಿತೆ, ಕನ್ನಡ ಭಾಷೆಯ ಮೂಲಕ ನಾವೆಲ್ಲೂ ಒಗ್ಗಟ್ಟಾಗಬೇಕು. ನಾಡು, ನುಡಿಗೆ ತೊಂದರೆ ಆದಾಗ ಕನ್ನಡ ಮನಸ್ಸುಗಳು ಜಾಗೃತರಾಗಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಜಲಜಾ ಶೇಖರ್ ಮಾತನಾಡಿ, ಎಲ್ಲ ಭಾಷೆ, ಸಂಸ್ಕೃತಿಯನ್ನು ಪ್ರೀತಿಸಬೇಕು. ಆದರೆ ನಮ್ಮ ಮಾತೃಭಾಷೆಯಲ್ಲಿ ಜೀವಿಸಬೇಕು. ನಮ್ಮ ನಡೆ, ನುಡಿಗಳಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಮೂಲಕ ಸಾಹಿತಿಗಳು, ಕವಿಗಳು ಬೆಳೆದಿದ್ದಾರೆ. ಸಾವಿರಾರು ಸಾಹಿತಿಗಳು ಕನ್ನಡ ಭಾಷಾ ಬೆಳವಣಿಗೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಪರಿಷತ್ ಮೂಲಕ ಹೆಚ್ಚಿನ ಕಾರ್ಯಕ್ರಮಗಳು ನಡೆದು, ಯುವ ಪ್ರತಿಭಾವಂತ ಸಾಹಿತಿಗಳು ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಜೆ.ಸಿ.ಶೇಖರ್ ಮತ್ತು ಜಲಜಾ ಶೇಖರ್ ಅವರನ್ನು ಸನ್ಮಾನಿಸಿಲಾಯಿತು. ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಸೋಮವಾರಪೇಟೆ ಠಾಣಾಧಿಕಾರಿ ರಮೇಶ್ ಕುಮಾರ್, ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಎ.ಪಿ.ವೀರರಾಜು, ಕೋಶಾಧ್ಯಕ್ಷ ಕೆ.ಪಿ.ದಿನೇಶ್ ಇದ್ದರು.