ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬುಡಕಟ್ಟು ಸಂಸ್ಕೃತಿಗಳ ತೂಗು ತೊಟ್ಟಿಲು ಎಂದು ಹೆಸರಾದ ಚಿತ್ರದುರ್ಗ ಕಿಲಾರಿಗಳ ಅಸ್ಮಿತೆಯೊಂದನ್ನು ನೆನಪಿಸಿಕೊಳ್ಳುವ ಅಪೂರ್ವ ಸಂದರ್ಭಕ್ಕೆ ಸಾಕ್ಷಿಯಾಗಲಿದೆ. ಜಾನಪದ ಅಕಾಡೆಮಿ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದೆ.ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ ಫೆ.17ರಂದು ಬೆಳಗ್ಗೆ 10.30ಕ್ಕೆ ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು ಪಿ.ಜಿ. ಸಭಾಂಗಣದಲ್ಲಿ ಕಿಲಾರಿ ಕಲರವ ಹೆಸರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಶುಪಾಲಕ ಬುಡಕಟ್ಟು ಕಿಲಾರಿಗಳ ಅಸ್ಮಿತೆ: ವಿಚಾರ-ಮಾತು ಕತೆ-ಹಾಡಿಕೆ ಮೇಳೈಸಲಿವೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಅಕಾಡೆಮಿ ಸದಸ್ಯ ಸಂಚಾಲಕ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡುವರು. ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತಾ, ಸರ್ಕಾರಿ ಕಲಾ ಕಾಲೇಜು ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಕರಿಯಪ್ಪ ಮಾಳಿಗೆ, ಇಂಗ್ಲಿಷ್ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಪ್ರೊ.ತಾರಿಣಿ ಶುಭದಾಯಿನಿ, ಸಮಾಜಶಾಸ್ತ್ರ ವಿಭಾಗದ ಪ್ರೊ.ವೈ.ಯಶೋಧಮ್ಮ ಗೌರವ ಉಪಸ್ಥಿತಿವಹಿಸುವರು. ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಮಂಜುನಾಥ್ ನಿರ್ವಹಣೆ ಮಾಡುವರು.ಮಧ್ಯಾಹ್ನ 12ಕ್ಕೆ ನಡೆಯುವ ಗೋಷ್ಠಿ-1ರಲ್ಲಿ ಕಿಲಾರಿ ಸಂಪ್ರದಾಯಗಳು ಎಂಬ ವಿಷಯ ಕುರಿತು ಡಾ.ಎಸ್.ಎಂ.ಮುತ್ತಯ್ಯ ಮಾತನಾಡುವರು. ಕಿಲಾರಿ ಕುಲಚಿಹ್ನೆಗಳು ವಿಷಯ ಕುರಿತು ಪಿ.ಅರಡಿಮಲ್ಲಯ್ಯ ಕಟ್ಟೇರ ವಿಷಯ ಮಂಡಿಸುವರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಆರ್.ಶಿವಪ್ಪ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್.ಗಂಗಾಧರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಿರೀಶ ನಾಯಕ ಉಪಸ್ಥಿತಿ ವಹಿಸುವರು. ಡಾ.ಜಿ.ಎಚ್.ನಾಗವರ್ಮ ಅವರು ಗೋಷ್ಠಿ ನಿರ್ವಹಣೆ ಮಾಡುವರು.
ಮಧ್ಯಾಹ್ನ 2.30ಕ್ಕೆ ಗೋಷ್ಠಿ-2ರಲ್ಲಿ ಕಿಲಾರಿಗಳೊಂದಿಗೆ ಮಾತುಕತೆಯಲ್ಲಿ ಕಂಪಳ ದೇವರಹಟ್ಟಿ ಕಿಲಾರಿ ಬೋರಯ್ಯ, ಮುತ್ತಿಗಾರಹಳ್ಳಿ ಕಿಲಾರಿ ಪಾಲಯ್ಯ ಭಾಗವಹಿಸಲಿದ್ದು, ಸಂವಾದಕರಾಗಿ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ.ಸುರೇಶ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಶ್ಯಾಮರಾಜ, ಹಂಪಿಯ ಪೋಸ್ಟ್ ಡಾಕ್ಟರಲ್ ಫೆಲೋ ಡಾ.ಎಸ್.ಶಿವರಾಜ್, ಉಪನ್ಯಾಸಕ ಡಾ.ಡಿ.ಎಂ.ಪ್ರಹ್ಲಾದ್ ಪಾಲ್ಗೊಳ್ಳುವರು. ಮಧ್ಯಾಹ್ನ 3.30ಕ್ಕೆ ಗೋಷ್ಠಿ-3ರಲ್ಲಿ ಕಿಲಾರಿ ಪದಗಾಯನದಲ್ಲಿ ನಲಗೇತನಹಟ್ಟಿಯ ಎಂ.ಮಂಜುನಾಥ, ಆರ್.ಎಂ.ಸಣ್ಣಬೋರಯ್ಯ ಹಾಗೂ ಗಡ್ಡದ ಬೋರಯ್ಯನಹಟ್ಟಿಯ ಕಿಲಾರಿ ಬೋರಯ್ಯ, ಪೂಜಾರಿ ಸಣ್ಣಪಾಲಯ್ಯ ಭಾಗವಹಿಸುವರು. ಸೋಬಾನೆ ಪದಗಾಯನದಲ್ಲಿ ಕಂಪಳದೇವರಹಟ್ಟಿಯ ಓಬಮ್ಮ ಬಡಬೋರಯ್ಯ, ಪಾಲಯ್ಯ, ಪಾಪಯ್ಯ, ಓಬಮ್ಮ ದು.ಪಾಪಯ್ಯ, ಓಬಮ್ಮ, ಕಾಟಯ್ಯ ಭಾಗವಹಿಸುವರು.ಕಿಲಾರಿಗಳು ಮ್ಯಾಸಬೇಡರಲ್ಲಿ ಪ್ರಚಲಿತವಿರುವ ಸಂಪ್ರದಾಯ ಆಚರಣೆಗಳಲ್ಲಿ ಇಂದಿಗೂ ಗಟ್ಟಿಯಾಗಿ ಅಸ್ತಿತ್ವದಲ್ಲಿರುವ ಕಿಲಾರಿ ಸಂಪ್ರದಾಯವು ಒಂದು. ಪದ ಕೋಶಗಳು ಹೇಳುವಂತೆ ಕಿಲಾರ್ ಅಥವಾ ಕಿಲಾರಿ ಎಂದರೆ ದನಗಳ ವಿಶಿಷ್ಟವಾದ ಒಂದು ತಳಿ. ಈ ತಳಿಯ ದನಗಳನ್ನು ಸರ್ಕಾರದ ಅಧೀನದಲ್ಲಿ ಸಾಕಲಾಗುತ್ತಿತ್ತು ಎಂಬ ಉಲ್ಲೇಖಗಳಿವೆ. ಕರ್ನಾಟಕದ ಹಲವು ಕಡೆಗಳಲ್ಲಿ ಕಿಲಾರಿ ದನಗಳು ಸಿಗುತ್ತವೆ. ಆದರೆ ಮ್ಯಾಸಬೇಡರ ಸಮುದಾಯದೊಳಗೆ ಕುರಿ ಕಿಲಾರಿ, ಎತ್ತಿನ ಕಿಲಾರಿ ಎನ್ನುವ ಪದ ಬಳಕೆ ಸಾಮಾನ್ಯವಾಗಿದೆ. ಕುರಿ ಕಾಯುವವನಿಗೆ ಕುರಿ ಕಿಲಾರಿ ಅಂದ್ರೆ, ಎತ್ತು ಕಾಯುವವನಿಗೆ ಎತ್ತಿನ ಕಿಲಾರಿ ಎನುತ್ತಾರೆ ಎಂದು ಸರ್ಕಾರಿ ಕಲಾ ಕಾಲೇಜು ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದ್ದಾರೆ.