3 ವರ್ಷಗಳಲ್ಲಿ ಜಿಲ್ಲೆಯ ಚಿತ್ರಣವೇ ಬದಲು : ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

| N/A | Published : Feb 03 2025, 12:30 AM IST / Updated: Feb 03 2025, 11:04 AM IST

3 ವರ್ಷಗಳಲ್ಲಿ ಜಿಲ್ಲೆಯ ಚಿತ್ರಣವೇ ಬದಲು : ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

  ಮತದಾರರು ಈ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ನಾಯಕರು ಸೇರಿ ಇಡೀ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಜನ ಭಾವನಾತ್ಮಕ ಮಾತುಗಳಿಗೆ, ಬ್ಲಾಕ್ ಮೇಲ್‌ಗೆ ಜಗ್ಗದೇ ಅಭಿವೃದ್ಧಿಗೆ ಮತ ನೀಡಿದ್ದಾರೆ. ಮತದಾರರು ಈ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ನಾಯಕರು ಸೇರಿ ಇಡೀ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರದ ಮಹದೇಶ್ವರ ನಗರದ ಬಳಿ ಸಿ.ಪಿ.ಯೋಗೇಶ್ವರ್ ಗೆಲುವಿನ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮನ್ನು ಅಪೂರ್ವ ಸಹೋದರರು ಎಂದವರು, ನಮ್ಮ ಬಗ್ಗೆ ತುಚ್ಛವಾಗಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಾಗೂ ದಳದ ಎಲ್ಲಾ ನಾಯಕರಿಗೆ ನಿಮ್ಮ ತಟ್ಟೆ ಮರೆ ಏಟು ಉತ್ತರ ನೀಡಿದೆ. ನೀವು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಉತ್ತರ ನೀಡಿಲ್ಲ, ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿ ಎಂದು ಹೇಳಿದರು.

ಚುನಾವಣೆ ವೇಳೆ ಇಲ್ಲಿ ನಾನೇ ಅಭ್ಯರ್ಥಿ ಎಂದಿದ್ದೆ. ಈಗಲೂ ನಾನೇ ಅಭ್ಯರ್ಥಿ. ಮುಂದಿನ ಒಂದು ವಾರದಲ್ಲಿ ಮತ್ತೆ ಕ್ಷೇತ್ರಕ್ಕೆ ಬಂದು ಕೊಟ್ಟ ಮಾತು ಈಡೇರಿಸುವ ಕೆಲಸದ ಬಗ್ಗೆ ಪರಿಶೀಲಿಸುತ್ತೇನೆ. ಚುನಾವಣೆ ಸಮಯದಲ್ಲಿ ನಾನು ಕುಮಾರಸ್ವಾಮಿ ಅವರಿಗೆ ನೀವು ಶಾಸಕರಾಗಿ, ಮುಖ್ಯಮಂತ್ರಿಯಾಗಿ ಯಾವ ಸಾಧನೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದೆ. ಯೋಗೇಶ್ವರ್ ಅನೇಕ ದೇವಾಲಯ ಕಟ್ಟಿಸಿದ್ದಾರೆ, ನೀವು ಯಾವ ದೇವಾಲಯ ಕಟ್ಟಿದ್ದೀರಿ, ಶಾಲೆಗಾಗಿ ನೀವು 2 ಎಕರೆ ಜಮೀನು ದಾನ ಮಾಡಿದ್ದೀರಾ ಎಂದು ಸವಾಲು ಹಾಕಿದ್ದೆ. ನನ್ನ ಪ್ರಶ್ನೆಗೆ ಅವರಿಂದ ಉತ್ತರವೇ ಬರಲಿಲ್ಲ ಎಂದರು.

ಚುನಾವಣೆ ವೇಳೆ ಅಭಿವೃದ್ಧಿ ಬೇಕೋ, ಕಣ್ಣೀರು ಬೇಕೋ ನಿರ್ಧಾರ ಮಾಡಿ ಎಂದು ನಿಮ್ಮ ಹತ್ತಿರ ಮನವಿ ಮಾಡಿದ್ದೆ. ನೀವು ಅಭಿವೃದ್ಧಿಯನ್ನೇ ಆಯ್ಕೆ ಮಾಡಿದ್ದೀರಿ. ಮುಂದಿನ ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ರೂಪುರೇಷೆ ಮಾಡಬೇಕಿದೆ. ನಾನು ಆಕಾಶವನ್ನು ಧರೆಗೆ ಇಳಿಸುತ್ತೇನೆ ಎಂದು ಹೇಳುವುದಿಲ್ಲ. ನಿಮ್ಮ ಕಣ್ಣಿಗೆ ಕಾಣುವ ಬದಲಾವಣೆ ತರುತ್ತೇವೆ. ಹಾಲು ಉತ್ಪಾದಕರ ಸಮಸ್ಯೆ ನಮ್ಮ ಗಮನದಲ್ಲಿದೆ. ಸೂಕ್ತ ಕಾಲದಲ್ಲಿ ನಿರ್ಧಾರ ಮಾಡುತ್ತೇವೆ. ನೀವು ಹಣಕ್ಕೆ ಬೆಲೆ ಕೊಡಲಿಲ್ಲ, ಗುಣಕ್ಕೆ ಬೆಲೆ ಕೊಟ್ಟಿದ್ದೀರಿ ಎಂದು ಹೇಳಿದರು.

ಲಂಚ ನೀಡಬೇಡಿ:

ಚನ್ನಪಟ್ಟಣ ನಿವೇಶನ ರಹಿತರಿಗೆ ನಿವೇಶನ ಮತ್ತು ಮನೆಗಳಿಗಾಗಿ 300 ಎಕರೆ ಜಮೀನು ಗುರುತಿಸಲಾಗಿದೆ. ಸಚಿವ ಜಮೀರ್ ಅಹಮದ್ ಖಾನ್ ೫ ಸಾವಿರ ಮನೆಗಳನ್ನು ಮಂಜೂರು ಮಾಡಿದ್ದು, ಅವುಗಳನ್ನು ಹಂಚುತ್ತೇವೆ. ನೀವು ಯಾರಿಗೂ ಇದಕ್ಕೆ ಲಂಚ ನೀಡಬೇಡಿ ಎಂದರು.

ನಾನು ಹೇಳಿದ್ದೇ ನಿಜವಾಯಿತು:

ಮೂರು ಕ್ಷೇತ್ರಗಳ ಉಪಚುನಾವಣೆಗಳ ಪೈಕಿ ಸಂಡೂರು ಬಿಟ್ಟರೆ ಎಲ್ಲೂ ನೀವು ಗೆಲ್ಲಲ್ಲ ಅಂತ ಮಾಧ್ಯಮಗಳು ಹೇಳಿದ್ದವು. ಎಲ್ಲಾ ಸಮೀಕ್ಷೆಗಳು ತಲೆಕೆಳಗಾಗುತ್ತವೆ. ನಮ್ಮ ಸರ್ಕಾರದ ಸಂಖ್ಯಾಬಲ 135 ಅಲ್ಲ,  138 ಎಂದು ಹೇಳಿದ್ದೆ. ಮಾಜಿ ಸಿಎಂಗಳಾದ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಅವರ ಸುಪುತ್ರರ ವಿರುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದೆವು. ನೀವು ಅದೇ ರೀತಿ ಫಲಿತಾಂಶ ಕೊಟ್ಟಿದ್ದೀರಿ ಎಂದರು.

ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಆಸೆ ಇತ್ತು:

ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದಕ್ಕೆ ಪಕ್ಷ ಒಪ್ಪಲಿಲ್ಲ. ಸುರೇಶ್ ಸ್ಪರ್ಧಿಸಲು ಒತ್ತಡ ಇತ್ತು. ನಾವು ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂದು ತೀರ್ಮಾನಿಸಿ, ಯೋಗೇಶ್ವರ್ ಪಕ್ಷ ಹಾಗೂ ನಾಯಕತ್ವ ಒಪ್ಪಿ ಬಂದ ನಂತರ, ನಮ್ಮ ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ, ಅಂತಿಮ ತೀರ್ಮಾನ ಮಾಡಿದೆವು. ಈ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳಲು ಆಗಲಿಲ್ಲ. ಆದರೆ ಚಿಂತೆ ಮಾಡುವುದು ಬೇಡ, ನಾವು ಎಲ್ಲಾ ಕಾರ್ಯಕರ್ತರ ರಕ್ಷಣೆ ಮಾಡೇ ಮಾಡ್ತೇವೆಂದು ಭರವಸೆ ನೀಡಿದ ಅವರು, ಮುಂದೆ ನಾನು ಹಾಗೂ ಯೋಗೇಶ್ವರ್ ಸತ್ತೆಗಾಲಕ್ಕೆ ಭೇಟಿ ನೀಡಿ ನೀರಾವರಿ ಯೋಜನೆ, ಕೆರೆ ತುಂಬಿಸುವ ಕೆಲಸ, ರಸ್ತೆ ಅಭಿವೃದ್ಧಿ ಸೇರಿ ಎಲ್ಲಾ ಯೋಜನೆ ಬಗ್ಗೆ ಗಮನ ಹರಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಹ್ಯಾರೀಸ್, ಇಕ್ಬಾಲ್ ಹುಸೇನ್, ಶ್ರೀನಿವಾಸ್, ಬಾಲಕೃಷ್ಣ, ವಿಧಾನಪರಿಷತ್ ಸದಸ್ಯರಾದ ರಾಮೋಜಿಗೌಡ, ಎಸ್.ರವಿ, ಉಗ್ರಪ್ಪ, ಬಿಎಂಐಸಿಎಪಿಎ ಅಧ್ಯಕ್ಷ ರಘನಂದನ್ ರಾಮಣ್ಣ, ಮಾಜಿ ಶಾಸಕರಾದ ಕೆ.ರಾಜು, ಎಂ.ಸಿ.ಅಶ್ವತ್ಥ ಇತರರಿದ್ದರು.

ಮಂಡಿ ನೋವಿಂದ ಸಿಎಂ ಬರಲಾಗಿಲ್ಲ

ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶಕ್ಕೆ ಆಗಮಿಸಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿ ನೋವಿನಿಂದ ಕಡೆ ಕ್ಷಣದಲ್ಲಿ ರದ್ದಾಯಿತು. ಕಾರ್ಯಕ್ರಮದಲ್ಲಿ ಹಾಲಿನ ಖರೀದಿ ದರ ಹೆಚ್ಚಳದ ಕುರಿತು ಸಿಎಂ ಗಮನ ಸೆಳೆಯಲು ಮಹಿಳೆಯರು ಪ್ಲಕಾರ್ಡ್ ಹಿಡಿದು ಬಂದಿದ್ದರು. ಸಿದ್ದರಾಮಯ್ಯ ಆಗಮನ ರದ್ದಾದ ಹಿನ್ನೆಲೆ ನಿರಾಸೆಗೊಳಗಾದರು. ಡಿಸಿಎಂ ಡಿ.ಕೆ.ಶಿವಕುಮಾರ್ ಹೊರತುಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾವ ಸಚಿವರೂ ಆಗಮಿಸದ್ದು ಚರ್ಚೆಗೆ ಗ್ರಾಸ್ ಒದಗಿಸಿತು.

ಕಾರ್ಯಕ್ರಮಕ್ಕೂ ಮುನ್ನ ನಿರ್ಗಮಿಸಿದ ಜನ

ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಡಿಸಿಎಂ ಭಾಷಣದ ವೇಳೆಯೇ ಅರ್ಧಕ್ಕರ್ಧ ಜನ ನಿರ್ಗಮಿಸುತ್ತಿರುವ ದೃಶ್ಯ ಕಂಡು ಬಂದಿತು. ಕಾರ್ಯಕ್ರಮ 12 ಗಂಟೆಗೆ ನಿಗದಿಯಾಗಿತ್ತು. ಆದರೆ, ಆರಂಭಗೊಂಡಾಗ 1.15 ಗಂಟೆಯಾಗಿತ್ತು. ಬಿರುಬಿಸಿಲಿಗೆ ಜನ ಸುಸ್ತಾಗಿ ಡಿಸಿಎಂ ಭಾಷಣದ ವೇಳೆಯೇ ವೇದಿಕೆಯಿಂದ ನಿರ್ಗಮಿಸಿದರು. ಶಾಸಕ ಯೋಗೇಶ್ವರ್ ಭಾಷಣದ ವೇಳೆಗೆ ಬಹುತೇಕ ಜನ ನಿರ್ಗಮಿಸಿದ್ದರು.