ಸಾರಾಂಶ
ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ರೈತರು ಬೆಳೆದಿದ್ದ ಭತ್ತದ ಕಣಜಗಳು ದುಂಡಾಣು ಮಚ್ಚೆ ರೋಗದ ಬಾಧೆಗೆ ಒಳಗಾಗಿ ಒಣಗಿ ಹೋಗಿದ್ದು, ಇಳುವರಿಯಲ್ಲಿ ಭಾರಿ ಕುಂಠಿತವಾಗಿದೆ.
ಬಹುತೇಕ ಕಡೆ ಆರ್ ಎನ್ ಆರ್ ತಳಿಯ ಭತ್ತಕ್ಕೆ ರೋಗ ವ್ಯಾಪಿಸಿರುವುದರಿಂದ ಇಳುವರಿ ಗಣನೀಯವಾಗಿ ಕುಸಿದಿದ್ದು, ಹಲವು ತಿಂಗಳು ಶ್ರಮಿಸಿದ ಅನ್ನದಾತರು ಕಂಗಾಲಾಗಿದ್ದಾರೆ.ತಾಲೂಕಿನಲ್ಲಿ 18,782 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದೆ. ಅದರಲ್ಲೂ ಬಹುತೇಕ ಜಾಗಗಳಲ್ಲಿ ದುಂಡಾಣು ಮಚ್ಚೆ ರೋಗ ತೀವ್ರವಾಗಿ ಕಂಡುಬಂದಿದೆ. ರೋಗದ ಪರಿಣಾಮವಾಗಿ ಅನೇಕ ರೈತರು ವ್ಯಯಿಸಿದ ಬಂಡವಾಳವನ್ನು ಕೂಡಾ ಮರುಪಡೆಯುವ ಸ್ಥಿತಿ ಇಲ್ಲದಂತಾಗಿದೆ.
ವ್ಯಯಿಸಿದ ಹಣ, ಮಾಡಿದ ಶ್ರಮ ಎಲ್ಲವೂ ವ್ಯರ್ಥ:ಎರಡು ಎಕರೆ ಸ್ವಂತ ಜಮೀನು, 33 ಎಕರೆ ಗುತ್ತಿಗೆ ಪಡೆದು ಭತ್ತ ಬೆಳೆದಿದ್ದೇನೆ. ಸಸಿ, ರಸಗೊಬ್ಬರ, ರಾಸಾಯನಿಕ ಸಿಂಪಡಣೆ ಕೃಷಿ ವೆಚ್ಚ ಸೇರಿ ಎಕರೆಗೆ 40 ಸಾವಿರ ರೂ.ಕ್ಕಿಂತ ಹೆಚ್ಚು ವ್ಯಯಿಸಿದೆ. ಸಾಮಾನ್ಯವಾಗಿ 45–50 ಚೀಲ ಇಳುವರಿ, ಎಕರೆಗೆ 80 ಸಾವಿರದವರೆಗೂ ಲಾಭ ನಿರೀಕ್ಷೆ ಇತ್ತು. ಆದರೆ ದುಂಡಾಣು ಮಚ್ಚೆ ರೋಗದಿಂದ ಈ ಬಾರಿ 20–25 ಚೀಲಕ್ಕೂ ಇಳುವರಿ ಸೀಮಿತವಾಗಿದೆ. ಬೆಳೆದ ಭತ್ತಕ್ಕೆ ಉತ್ತಮ ದರ ಸಿಗದೇ ಹಾಗೆಯೇ ಗುತ್ತಿಗೆ ಜಮೀನಿನ ಮಾಲೀಕರಿಗೆ ಎಕರೆಗೆ 18 ಚೀಲ ಭತ್ತ ನೀಡಬೇಕಿರುವುದರಿಂದ ದೊಡ್ಡ ಹೊರೆ ಬಿದ್ದಿದೆ. ಬಂದ ಇಳುವರಿಯಲ್ಲಿ ಅದರ ಅರ್ಧದಷ್ಟೂ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ₹7 ಲಕ್ಷಕ್ಕಿಂತಲೂ ಹೆಚ್ಚು ನಷ್ಟ ಬಂದಿದೆ. ಸಾಲ ಪಡೆದು ಬೆಳೆದಿದ್ದೇನೆ, ಈಗ ಮುಂದೆ ದಾರಿ ಕಾಣದಂತಾಗಿದೆ ಎಂದು ಕೋಟಾಲ್ ಗ್ರಾಮದ ರೈತ ಆದಿಶೇಷಯ್ಯ ಅಳಲು ತೋಡಿಕೊಂಡಿದ್ದಾರೆ.
ಮೊದಲ ಬೆಳೆ ನಷ್ಟವನ್ನು ಎರಡನೇ ಬೆಳೆಯಲ್ಲಿ ಪರಿಹರಿಸಿಕೊಳ್ಳೋಣ ಎಂಬ ರೈತರ ಆಸೆಗೆ ಸರ್ಕಾರ ತಣ್ಣೀರು ಎರಚಿರುವಂತಾಗಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಾಮಗಾರಿ ಇರುವ ಕಾರಣ ಎರಡನೇ ಬೆಳೆಗೆ ನೀರು ಬಿಡುವುದಿಲ್ಲವೆಂದು ಎಂದು ಇಲಾಖೆ ತಿಳಿಸಿದೆ.ಈ ನಿರ್ಧಾರದಿಂದ ಈಗಾಗಲೇ ಒಂದನೇ ಬೆಳೆ ಭತ್ತದಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ಮತ್ತೊಂದು ಆಘಾತ ಎದುರಾಗಿದೆ. ನೀರಾವರಿ ಇಲ್ಲದ ಕಾರಣ ಎರಡನೇ ಬೆಳೆ ಸಾಧ್ಯವಾಗದಿರುವುದು, ಅವರಿಗಿರುವ ಸಾಲಭಾರ ಹಾಗೂ ನಷ್ಟದ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ದುಂಡಾಣು ಮಚ್ಚೆ ರೋಗದ ಪರಿಣಾಮದಿಂದ ಸಂಪೂರ್ಣ ತಾಲೂಕಿನ ರೈತರ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದಿಂದ ತುರ್ತು ನೆರವು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೌಡ.;Resize=(128,128))
;Resize=(128,128))
;Resize=(128,128))
;Resize=(128,128))