ಇಂದಿನಿಂದ ನೂತನ ದೇವಾಲಯಗಳ ಲೋಕಾರ್ಪಣೆ ಮಹೋತ್ಸವ

| Published : Oct 29 2025, 01:15 AM IST

ಇಂದಿನಿಂದ ನೂತನ ದೇವಾಲಯಗಳ ಲೋಕಾರ್ಪಣೆ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕಸಬಾ ಹೋಬಳಿ ಅಗ್ಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ.ವಿ. ಹಟ್ಟಿ ಗ್ರಾಮದಲ್ಲಿ ಅಕ್ಟೋಬರ್ 29ರಿಂದ 31ರವರೆಗೆ ಮೂರು ದಿನಗಳ ಕಾಲ ವಿವಿಧ ದೇವಾಲಯಗಳ ಪುನರ್‌ ಪ್ರತಿಷ್ಠಾಪನೆ, ಜೀರ್ಣೋದ್ಧಾರ ಹಾಗೂ ಶಿಖರ ಕಳಸ ಸ್ಥಾಪನಾ ಧಾರ್ಮಿಕ ಮಹೋತ್ಸವ ಭವ್ಯವಾಗಿ ನಡೆಯಲಿದೆ ಎಂದು ಶ್ರೀ ಹುತ್ತದಮ್ಮ ದೇವಿ ದೇವಸ್ಥಾನದ ಗೌರವಾಧ್ಯಕ್ಷ ಹಾಗೂ ಉದ್ಯಮಿ ಜೆ.ಸಿ. ಶಿವಕುಮಾರ್ ತಿಳಿಸಿದರು. ಮಹೋತ್ಸವದ ಪೂಜಾ ವಿಧಿ ವಿಧಾನಗಳನ್ನು ಹೊಸ ಬಂಡಿಹಳ್ಳಿಯ ಶ್ರೀ ಬಿ.ಎಸ್. ರೇಣುಕಾರಾಧ್ಯ ಶಾಸ್ತ್ರಿಗಳು ಹಾಗೂ ಪ್ರಧಾನ ಅರ್ಚಕ ಶ್ರೀ ಗುರು ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಅವರ ಪೌರೋಹಿತ್ಯದಲ್ಲಿ, ಸ್ಥಳೀಯ ಅರ್ಚಕರಾದ ಶಂಕರಪ್ಪ, ಹನುಮಪ್ಪ, ಬಸವರಾಜು, ಸುರೇಶ, ಸ್ವಾಮಿ, ವಿ.ಎನ್. ಕುಮಾರ್‌, ಲೋಕೇಶ್ ಮತ್ತು ಉಮೇಶ್ ತಂಡದವರು ನಿರ್ವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಕಸಬಾ ಹೋಬಳಿ ಅಗ್ಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ.ವಿ. ಹಟ್ಟಿ ಗ್ರಾಮದಲ್ಲಿ ಅಕ್ಟೋಬರ್ 29ರಿಂದ 31ರವರೆಗೆ ಮೂರು ದಿನಗಳ ಕಾಲ ವಿವಿಧ ದೇವಾಲಯಗಳ ಪುನರ್‌ ಪ್ರತಿಷ್ಠಾಪನೆ, ಜೀರ್ಣೋದ್ಧಾರ ಹಾಗೂ ಶಿಖರ ಕಳಸ ಸ್ಥಾಪನಾ ಧಾರ್ಮಿಕ ಮಹೋತ್ಸವ ಭವ್ಯವಾಗಿ ನಡೆಯಲಿದೆ ಎಂದು ಶ್ರೀ ಹುತ್ತದಮ್ಮ ದೇವಿ ದೇವಸ್ಥಾನದ ಗೌರವಾಧ್ಯಕ್ಷ ಹಾಗೂ ಉದ್ಯಮಿ ಜೆ.ಸಿ. ಶಿವಕುಮಾರ್ ತಿಳಿಸಿದರು.ನಗರದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ನೂತನ ದೇವಾಲಯದ ಪ್ರತಿಷ್ಠಾಪನೆ ಹಾಗೂ ಶ್ರೀ ಆದಿಶಕ್ತಿ ಹುತ್ತದಮ್ಮ ದೇವಾಲಯದ ಜೀರ್ಣೋದ್ಧಾರ ಶಿಖರ ಸ್ಥಾಪನೆ ಕಾರ್ಯಕ್ರಮವನ್ನು ಶಾಸ್ತ್ರೋಕ್ತ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಮಹೋತ್ಸವದ ಪೂಜಾ ವಿಧಿ ವಿಧಾನಗಳನ್ನು ಹೊಸ ಬಂಡಿಹಳ್ಳಿಯ ಶ್ರೀ ಬಿ.ಎಸ್. ರೇಣುಕಾರಾಧ್ಯ ಶಾಸ್ತ್ರಿಗಳು ಹಾಗೂ ಪ್ರಧಾನ ಅರ್ಚಕ ಶ್ರೀ ಗುರು ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಅವರ ಪೌರೋಹಿತ್ಯದಲ್ಲಿ, ಸ್ಥಳೀಯ ಅರ್ಚಕರಾದ ಶಂಕರಪ್ಪ, ಹನುಮಪ್ಪ, ಬಸವರಾಜು, ಸುರೇಶ, ಸ್ವಾಮಿ, ವಿ.ಎನ್. ಕುಮಾರ್‌, ಲೋಕೇಶ್ ಮತ್ತು ಉಮೇಶ್ ತಂಡದವರು ನಿರ್ವಹಿಸಲಿದ್ದಾರೆ.ಬ್ರಾಹ್ಮೀ ಮುಹೂರ್ತದಿಂದ ಆರಂಭವಾಗುವ ಈ ಪೂಜಾಕೈಂಕರ್ಯಗಳಲ್ಲಿ ಸುಪ್ರಭಾತ ಸೇವೆ, ವೇದಮಂತ್ರ ಪಠಣ, ಲಲಿತಾ ಸಹಸ್ರನಾಮ ಪಾರಾಯಣ, ಹೋಮ–ಹವನ, ನವದುರ್ಗಾ ಹೋಮ, ಚಂಡಿಕಾ ಹೋಮ, ಪ್ರಾಯಶ್ಚಿತ ಹೋಮ ಸೇರಿದಂತೆ ಗೋಪುರ ಕಳಸ ಸ್ಥಾಪನೆ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ. ಕಾರ್ಯಕ್ರಮಗಳಲ್ಲಿ 35 ಕ್ಕೂ ಹೆಚ್ಚು ವಿವಿಧ ದೇವಾಲಯಗಳ ದೇವರುಗಳು ಆಗಮಿಸಿ ಭಕ್ತರನ್ನು‌ ಹರಸಿ ಹಾರೈಸಲಿದ್ದಾರೆ.ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡರು ವಹಿಸಲಿದ್ದು, ಸುಕ್ಷೇತ್ರ ಕೆರೆಗೋಡಿ ರಂಗಾಪುರದ ಶ್ರೀ ಶ್ರೀ ಗುರುಪರದೇಶಿ ಕೇಂದ್ರ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಬಾಗಲಕೋಟೆ ಭೋವಿ ಗುರುಪೀಠದ ಶ್ರೀ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಉದ್ಘಾಟನೆ ನೆರವೇರಿಸಲಿದ್ದು, ಹಾರನಹಳ್ಳಿ ಕೋಡಿಮಠದ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹಾಗೂ ಅನೇಕ ಮಠಾಧೀಶರು ಆಶೀರ್ವಚನ ನೀಡಲಿದ್ದಾರೆ.ವಿವಿಧ ಕ್ಷೇತ್ರಗಳ ಮುಖಂಡರು, ಜನಪ್ರತಿನಿಧಿಗಳು, ಭಕ್ತಾಧಿಗಳು ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ಮತ್ತು ಶ್ರೀ ಹುತ್ತದಮ್ಮ ದೇವಿ ದೇವಾಲಯಗಳ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ.ಮೂರು ದಿನಗಳ ಧಾರ್ಮಿಕ ಮಹೋತ್ಸವದ ಅಂಗವಾಗಿ ಸಾಮೂಹಿಕ ಅನ್ನದಾಸೋಹ, ರಂಗೋಲಿ ಸ್ಪರ್ಧೆ, ಶನಿಪ್ರಭಾವ ನಾಟಕ ಪ್ರದರ್ಶನ, ವೀರಗಾಸೆ, ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಅನುಗ್ರಹ ಪಡೆಯಬೇಕೆಂದು ಆಯೋಜಕರು ವಿನಂತಿಸಿದ್ದಾರೆ.