ಸಾರಾಂಶ
ಹುಬ್ಬಳ್ಳಿ:
ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ. ಪಾಕಿಸ್ತಾನ ಮನಸ್ಥಿತಿಯ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲೇ ರಾಷ್ಟ್ರದ್ರೋಹಿ ಚಟುವಟಿಕೆಗಳು ನಾಗಮಂಗಲದಲ್ಲಿ ನಡೆದಿದೆ. ಹಿಂದೂಗಳು ಸಾಮೂಹಿಕವಾಗಿ ಗಣೇಶ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮಸೀದಿ ಮುಂದೆ ಡೊಳ್ಳು ಬಾರಿಸಲಾಗಿದೆ ಎಂಬ ಕಾರಣಕ್ಕೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮಸೀದಿ ಎದುರಿಗೆ ಡೊಳ್ಳು ನುಡಿಸಬಾರದೆಂಬ ನಿಯಮ ಏನಾದರೂ ಇದೆಯಾ? ಮಸೀದಿ ಎದುರಿಗೆ ಮೆರವಣಿಗೆ ನಡೆಸಬಾರದೆಂಬ ನಿಯಮವಿದೆಯಾ? ಎಂದು ಪ್ರಶ್ನಿಸಿದರು.
ವಿಸರ್ಜನೆ ಮೆರವಣಿಗೆ ಯಾವ ಮಾರ್ಗದಲ್ಲಿ ತೆರಳುತ್ತದೆ ಎಂಬುದು ಪೊಲೀಸ್ ಇಲಾಖೆಗೆ ಗೊತ್ತೇ ಇರುತ್ತದೆ. ಮತ್ತೇಕೆ ರಕ್ಷಣೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.ಪೆಟ್ರೋಲ್ ಬಾಂಬ್, ಕಲ್ಲು ತೂರಾಟ ಮಾಡಲಾಗಿದೆ. ಇತ್ತೀಚಿಗೆ ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ ಬಾಂಗ್ಲಾ ಮಾದರಿಯಲ್ಲಿ ರಾಜ್ಯದಲ್ಲಿ ಗಲಭೆ ನಡೆಯುತ್ತದೆ ಎಂಬ ಹೇಳಿಕೆ ನೀಡಿದ್ದರು. ಅದರಂತೆ ಪಾಕಿಸ್ತಾನ ಮನಸ್ಥಿತಿಯ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಗೃಹ ಸಚಿವರು ನಾಗಮಂಗಲದಲ್ಲಿ ನಡೆದ ಗಲಾಟೆ ಸಣ್ಣದು ಎಂಬ ಹೇಳಿಕೆ ಕೊಟ್ಟಿದ್ದಾರೆ. ಆದರೆ ಗೃಹ ಸಚಿವರು ರಾಷ್ಟ್ರದ್ರೋಹಿ ಮುಸ್ಲಿಂ ಗೂಂಡಾಗಳ ವಿರುದ್ಧ ಕ್ರಮಕೈಗೊಳ್ಳತ್ತೇವೆ ಎಂಬ ಹೇಳಿಕೆ ಕೊಡಬೇಕಿತ್ತು. ಅದು ಬಿಟ್ಟು ಅಮಾಯಕ ಜನರನ್ನು ಭಯಬೀಳುವಂತೆ ಮಾಡಿದ್ದಾರೆ ಎಂದರು.ಓಲೈಕೆ ರಾಜಕಾರಣ:
ಕಾಂಗ್ರೆಸ್ ಸರ್ಕಾರ ಹಿಂದಿನಿಂದಲೂ ಓಲೈಕೆ ರಾಜಕಾರಣ ಮಾಡುತ್ತಲೇ ಬರುತ್ತಿದೆ. ಅದು ಮುಂದುವರಿದಿದೆ ಅಷ್ಟೇ. ಯಾರು ಹಿಂದೂಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಂತಹ ಮುಸ್ಲಿಂ ಗೂಂಡಾಗಳನ್ನು ಬಂಧಿಸುವ ಕೆಲಸ ನಡೆಯಬೇಕೆಂದು ಈಶ್ವರಪ್ಪ ಆಗ್ರಹಿಸಿದರು.ಒಳಗೆ ಹಂಬಲ; ಹೊರಗೆ ಬೆಂಬಲ:
ಕಾಂಗ್ರೆಸ್ಸಿನಲ್ಲೀಗ ಒಳಗೊಳಗೆ ಹಂಬಲ, ಹೊರಗೆ ಬೆಂಬಲ ಎಂಬಂತಾಗಿದೆ. ಸಿದ್ದರಾಮಯ್ಯ ಪರವಾಗಿ ಬಂಡೆಯಂತೆ ನಿಲ್ಲುತ್ತೇವೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಆದರೆ ಒಳಗೊಳಗೆ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಕಾಯುತ್ತಿದ್ದಾರೆ ಎಂದ ಈಶ್ವರಪ್ಪ, ಶಾಮನೂರು ಶಿವಶಂಕರಪ್ಪ ಆದಿಯಾಗಿ ಎಲ್ಲರದೂ ಒಳಗೊಳಗೆ ಹಂಬಲ, ಹೊರಗೆ ಬೆಂಬಲ ಎಂಬಂತಾಗಿದೆ. ಕೋರ್ಟ್ ತೀರ್ಪು ಏನು ಬರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಸಿಎಂ ರೇಸ್‌ನಲ್ಲಿರುವವರ ಲಿಸ್ಟ್ ವೋಟರ್ ಲಿಸ್ಟ್ ರೂಪದಲ್ಲಿ ಹೊರಗೆ ಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕೊಟ್ಟರೂ ಮತ್ತೆ ಮತ್ತೆ ಹೇಳಿಕೆ ನೀಡುವುದರಲ್ಲೇ ನಿರತರಾಗಿದ್ದಾರೆ. ಹೈಕಮಾಂಡ್ ಸೂಚನೆಗೂ ಬೆಲೆ ಇಲ್ಲದಂತಾಗಿದೆ. ಸಿದ್ದರಾಮಯ್ಯ ಅಧಿಕಾರದಿಂದ ಕೆಳಕ್ಕೆ ಇಳಿಯಬೇಕು ಎಂದು ನಾನು ಹೇಳಲ್ಲ. ಆದರೆ ಅವರು ತಪ್ಪು ಮಾಡಿದ್ದರೆ ತೀರ್ಪು ವಿರೋಧವಾಗಿಯೇ ಬರುತ್ತದೆ ಎಂದರು.ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಎಂದು ಹೇಳುತ್ತಿದ್ದಾರೆ. ಅಂದರೆ ಕೇಜ್ರಿವಾಲ್ ತರಹ ಜೈಲಲ್ಲೇ ಇರಬೇಕಾ ಎಂದು ಪ್ರಶ್ನಿಸಿದರು.
ಒಂದು ವೇಳೆ ಸಿದ್ದರಾಮಯ್ಯ ಹೇಳಿದವರು ಸಿಎಂ ಆದರೂ ಉಳಿದವರು ಸುಮ್ಮನಿರಲ್ಲ. ನನ್ನ ಅನುಭವದ ಪ್ರಕಾರ ಸಿದ್ದರಾಮಯ್ಯ ಇನ್ನೊಬ್ಬರಿಗೆ ಸಿಎಂ ಆಗುವ ಅವಕಾಶ ಕೊಡಲ್ಲ ಎಂದರು.ಬಿಜೆಪಿ ಸೇರುವ ಇಂಗಿತ
ತವರು ಮನೆಗೆ ಹೋಗದೇ ಇರುವ ಹೆಣ್ಣು ಯಾರಾದರೂ ಇದ್ದಾರೆಯೇ? ಹೆಣ್ಮಕ್ಕಳು ತವರು ಮನೆಗೆ ಹೋಗಿಯೇ ಹೋಗುತ್ತಾರೆ ಎಂದು ಬಿಜೆಪಿ ಸೇರ್ಪಡೆ ಕುರಿತಂತೆ ಕೇಳಿದ ಪ್ರಶ್ನೆಗೆ ಈಶ್ವರಪ್ಪ ಪ್ರತಿಕ್ರಿಯಿಸಿದರು. ಈ ಮೂಲಕ ಮತ್ತೆ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದರು. ಬಿಜೆಪಿ ನಾಲ್ಕು ಜನ ಕಟ್ಟಿದ ಪಕ್ಷವಲ್ಲ. ಅನೇಕರು ರಕ್ತ ಸುರಿಸಿ ಪಕ್ಷ ಕಟ್ಟಿದ್ದಾರೆ. ಅವರು ಕರೆಯಬೇಕು ಅಂತ ಏನಿಲ್ಲ. ಪಕ್ಷದಲ್ಲಿನ ಸಮಸ್ಯೆಗಳು ಸರಿಯಾದ ಮೇಲೆ ಪುನಃ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಆದರೆ ಕಾಯ್ದು ನೋಡೋಣ ಎಂದಷ್ಟೇ ಹೇಳಿದರು.