ಮುಂಬೈ ಏರ್‌ಪೋರ್ಟಲ್ಲಿ ಮಣಿಪಾಲ್‌ ಕಂಪನಿ ನಿರ್ದೇಶಕರ 1 ಲಕ್ಷ ರು. ಕಳವು

| Published : Jan 13 2024, 01:30 AM IST

ಮುಂಬೈ ಏರ್‌ಪೋರ್ಟಲ್ಲಿ ಮಣಿಪಾಲ್‌ ಕಂಪನಿ ನಿರ್ದೇಶಕರ 1 ಲಕ್ಷ ರು. ಕಳವು
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈಯ ವಿಮಾನ ನಿಲ್ದಾಣದಲ್ಲಿ ಚೆಕ್‌ ಇನ್‌ಗೆಂದು ಬ್ಯಾಗ್‌ ನೀಡಿದ್ದ ವೇಳೆ ಮಂಗಳೂರಿನ ಮಣಿಪಾಲ್‌ ಗ್ರೂಪ್‌ನ ಕಂಪನಿಯೊಂದರ ನಿರ್ದೇಶಕ ಬಿನೋದ್‌ ಕುಮಾರ್‌ ಮಂಡಲ್‌ ಅವರ ಬ್ಯಾಗ್‌ನಲ್ಲಿದ್ದ 1 ಲಕ್ಷ ರು. ನಗದು ಕಳ್ಳತನವಾಗಿದೆ.

ಮುಂಬೈ/ಮಂಗಳೂರು: ಮುಂಬೈಯ ವಿಮಾನ ನಿಲ್ದಾಣದಲ್ಲಿ ಚೆಕ್‌ ಇನ್‌ಗೆಂದು ಬ್ಯಾಗ್‌ ನೀಡಿದ್ದ ವೇಳೆ ಮಂಗಳೂರಿನ ಮಣಿಪಾಲ್‌ ಗ್ರೂಪ್‌ನ ಕಂಪನಿಯೊಂದರ ನಿರ್ದೇಶಕ ಬಿನೋದ್‌ ಕುಮಾರ್‌ ಮಂಡಲ್‌ (46) ಅವರ ಬ್ಯಾಗ್‌ನಲ್ಲಿದ್ದ 1 ಲಕ್ಷ ರು. ನಗದು ಹಾಗೂ 78 ವರ್ಷಗಳಷ್ಟು ಹಳೆಯ 5,000 ರು. ಬೆಲೆಯ ಫೌಂಟೇನ್‌ ಪೆನ್ನು ಕಳ್ಳತನವಾಗಿದೆ.

ಮಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ತೆರಳಿದ ಬಳಿಕ ಮುಂಬೈನ ವಿಮಾನ ಸಿಬ್ಬಂದಿಗಳಿಂದಲೇ ತಮ್ಮ ಬ್ಯಾಗ್‌ ಕಳ್ಳತನವಾಗಿದೆ. 1 ಲಕ್ಷ ರು. ನಗದು ಹಾಗೂ 1946ರಲ್ಲಿ ನಮ್ಮ ತಾತ ಖರೀದಿಸಿದ್ದ 5000 ರು. ಬೆಲೆಯ ಫೌಂಟೇನ್‌ ಪೆನ್ನು ಇದರಲ್ಲಿ ಸೇರಿವೆ ಎಂದು ಬಿನೋದ್‌ ಆರೋಪಿಸಿದ್ದಾರೆ. ಅಲ್ಲದೇ ಈ ಸಂಬಂಧ ಪೊಲೀಸರಲ್ಲಿ ಪ್ರಕರಣ ದಾಖಲಿಸಲು ಮುಂಬೈಯಲ್ಲಿ 5 ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಆಂಗ್ಲ ಪತ್ರಿಕೆಯೊಂದರ ಎದುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂಲತ ಪಶ್ಚಿಮ ಬಂಗಾಳದ ಕೋಲ್ಕತಾದವರಾಗಿರುವ ಬಿನೋದ್, ‘ನಾನು ಮಣಿಪಾಲ್‌ ಸಮೂಹದಲ್ಲಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. 2 ದಿನಗಳ ಕೆಲಸಕ್ಕೆಂದು ಅವರು ಮುಂಬೈಗೆ ತೆರಳಿದ್ದೆ. ನಿಲ್ದಾಣಕ್ಕೆ ಬಂದಿಳಿದ ಬಳಿಕ ಚೆಕ್‌ ಇನ್‌ ಆಗಿದ್ದ ಬ್ಯಾಗ್‌ನ ಲಾಕ್‌ ಓಪನ್‌ ಆಗಿದ್ದನ್ನು ಕಂಡು ಕಳ್ಳತನವಾಗಿದ್ದು ಪತ್ತೆಯಾಗಿದೆ. ಅದಕ್ಕೆ ನಂಬರ್‌ ಲಾಕ್‌ ಇದ್ದರೂ, ಅನ್‌ಲಾಕ್‌ ಮಾಡಿ ಜಿಪ್‌ ತೆರೆದಿದ್ದಾರೆ’ ಎಂದು ದೂರಿದ್ದಾರೆ.ನಿಲ್ದಾಣ ಸಿಬ್ಬಂದಿಯಿಂದಲೇ ಕಳವು?:ಈ ಬಗ್ಗೆ ಮಾತನಾಡಿರುವ ಬಿನೋದ್‌ ಅವರು ‘ನನ್ನ ಬ್ಯಾಗ್‌ ಕಳ್ಳತನದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗಳ ಕೈವಾಡವಿದೆ. ಇಲ್ಲದಿದ್ದರೆ ಕಳ್ಳತನ ಸಂಭವಿಸುತ್ತಿರಲಿಲ್ಲ. ಲಗೇಜ್ ಸ್ಕ್ಯಾನಿಂಗ್ ಮಾಡುವವರು ಲೋಡರ್‌ಗೆ, ಬ್ಯಾಗ್‌ನಲ್ಲಿ ನಗದು ಹಾಗೂ ಪೆನ್‌ ಇರುವ ಸುಳಿವು ನೀಡಿರಬಹುದು. ಬಳಿಕ ಸಿಸಿಟಿವಿ ಕವರೇಜ್ ಇಲ್ಲದ ಸ್ಥಳದಲ್ಲಿ ನಗದು ಕದಿಯಲಾಗಿದೆ ಎಂದು ನಾನು ಶಂಕಿಸುತ್ತೇನೆ’ ಎಂದು ಬಿನೋದ್‌ ಹೇಳಿದ್ದಾರೆ.

‘ನಾನು 1 ಲಕ್ಷ ರು. ಇಟ್ಟ ಬಗ್ಗೆ ನನ್ನ ಹತ್ತಿರ ಬ್ಯಾಂಕ್‌ ವಿತ್‌ಡ್ರಾ ರಸೀದಿಯ ಸಾಕ್ಷ್ಯವಿದೆ’ ಎಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.