ರಾಮನಗರ: ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ ಮೆಂಟ್ ಯೋಜನೆಗಾಗಿ ಧಾರ್ಮಿಕ ಕೇಂದ್ರ ಹಾಗೂ ವಸತಿ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ಶಾಸಕರು ಬಾಯಿ ಮಾತಿನಲ್ಲಿ ಹೇಳಿದರೆ ಸಾಲುವುದಿಲ್ಲ. ಈಗ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ಹಿಂಪಡೆದು ಹೊಸದಾಗಿ ಅಧಿಸೂಚನೆ ಹೊರಡಿಸಲಿ ಎಂದು ಕಾಂಗ್ರೆಸ್ ಮುಖಂಡ ಶಿವಕುಮಾರಸ್ವಾಮಿ ಒತ್ತಾಯಿಸಿದರು

ರಾಮನಗರ: ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ ಮೆಂಟ್ ಯೋಜನೆಗಾಗಿ ಧಾರ್ಮಿಕ ಕೇಂದ್ರ ಹಾಗೂ ವಸತಿ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ಶಾಸಕರು ಬಾಯಿ ಮಾತಿನಲ್ಲಿ ಹೇಳಿದರೆ ಸಾಲುವುದಿಲ್ಲ. ಈಗ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ಹಿಂಪಡೆದು ಹೊಸದಾಗಿ ಅಧಿಸೂಚನೆ ಹೊರಡಿಸಲಿ ಎಂದು ಕಾಂಗ್ರೆಸ್ ಮುಖಂಡ ಶಿವಕುಮಾರಸ್ವಾಮಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಸ್ವಾಧೀನ ವಿಚಾರವಾಗಿ ರಾಘವೇಂದ್ರ ಕಾಲೋನಿ ನಿವಾಸಿಗಳು ಭೇಟಿ ಮಾಡಿದಾಗ ಶಾಸಕರು ಸರಿಯಾಗಿ ಸ್ಪಂದಿಸಿಲ್ಲ. ದರ್ಗಾ ಕಮಿಟಿಯವರು ಭೇಟಿ ಮಾಡಲು ಇಚ್ಚಿಸಿದಾಗ, ಬರಬೇಡಿ ಎಂದು ಹೇಳಿದ್ದಾರೆ. ಇಲ್ಲಿವರೆಗೆ ಅಧಿಸೂಚನೆ ಹಿಂಪಡೆಯುವುದಾಗಿ ಅಥವಾ ಹೊಸದಾಗಿ ಅಧಿಸೂಚನೆ ಹೊರಡಿಸುವುದಾಗಿ ಆಗಲಿ ಸ್ಪಷ್ಟಪಡಿಸಿಲ್ಲ. ಆತಂಕದಲ್ಲಿರುವ ನಿವಾಸಿಗಳು, ದೇಗುಲ ಮತ್ತು ದರ್ಗಾ ಕಮಿಟಿಯವರು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ತುರ್ತು ಸಭೆ ಕರೆದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿಗೆ ನಿಯೋಗ ತೆರಳಲು ನಿರ್ಣಯ ಕೈಗೊಂಡಿದ್ದಾರೆ ಎಂದು ಹೇಳಿದರು.

ನಗರಸಭೆ ನಿರ್ಣಯದ ವಿರುದ್ಧ ಕೆಲವರು ಹೋರಾಟದ ಎಚ್ಚರಿಕೆ ನೀಡಿರುವುದು ಸರಿಯಲ್ಲ. ನಗರದಲ್ಲಿ ಹಲವಾರು ಸಮಸ್ಯೆಗಳು ಎದುರಾದಾಗ, ಶಾಂತಿ-ಸೌಹಾರ್ದತೆಗಾಗಿ ಜನಜಾಗೃತಿ ವೇದಿಕೆ ಹೋರಾಡುತ್ತಾ ಬಂದಿದೆ. ಈ ವಿಚಾರದಲ್ಲೂ ವೇದಿಕೆ ಹೋರಾಟ ನಡೆಸುತ್ತಿದೆ. ಯಾರ ವಿರುದ್ಧವೂ ಸುಳ್ಳು ಆಪಾದನೆಗಳು ಬೇಡ. ಅಭಿವೃದ್ಧಿ ವಿಚಾರದಲ್ಲಿ ನಾವೆಲ್ಲರೂ ಶಾಸಕರ ಜೊತೆ ಇರುತ್ತೇವೆ. ಈಗಿನ ಅಧಿಸೂಚನೆ ಕೈಬಿಡಲಿ ಎಂದು ಶಿವಕುಮಾರ್ ಒತ್ತಾಯಿಸಿದರು.

ಪೀರನ್ ಷಾ ವಲಿ ದರ್ಗಾ ಸಮಿತಿಯ ಕಾರ್ಯದರ್ಶಿ ಸೈಯದ್ ಲಿಯಾಖತ್ ಆಲಿ ಮಾತನಾಡಿ, ದರ್ಗಾ, ದೇವಾಲಯಗಳು, ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಹೊರತುಪಡಿಸಿ ಅಧಿಸೂಚನೆ ಜಾರಿಯಾಗಲಿ ಎಂಬುದಷ್ಟೇ ನಮ್ಮ ಮನವಿ. ಶಾಸಕರು ಈ ವಿಚಾರದಲ್ಲಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಅಮ್ಜದ್ ಸಾಹುಕಾರ್ ಮಾತನಾಡಿ, ಅಂತಿಮ ಅಧಿಸೂಚನೆ ಪ್ರಕಟವಾದರೆ ಈ ಸ್ಥಳಗಳನ್ನು ಉಳಿಸಿಕೊಳ್ಳುವುದು ಅಸಾಧ್ಯ. ಧಾರ್ಮಿಕ ಸ್ಥಳಗಳಿಗೆ ಧಕ್ಕೆಯಾದರೆ ನಮ್ಮ ಭಾವನೆಗಳಿಗೂ ನೋವಾಗುತ್ತದೆ. ಎಲ್ಲಾ ಧರ್ಮಿಯರು ಸೌಹಾರ್ದತೆಯಿಂದ ಇದ್ದೇವೆ. ಅಭಿವೃಧ್ದಿ ವಿಚಾರದಲ್ಲಿ ನಿಮ್ಮ ಜೊತೆಗೆ ಇರುತ್ತೇವೆ ಎಂದರು.

ರಾಮನಗರ ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ ಮಾತನಾಡಿ, ಈ ಯೋಜನೆ ವಿಚಾರವಾದಿ ಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿಲ್ಲ. ಈಗ ಏಕಾಏಕಿ ನೋಟಿಸ್ ಜಾರಿ ಮಾಡಿ ಸ್ವಾಧೀನ ಮಾಡುತ್ತೇವೆ ಎಂದರೆ ವಸತಿ ಪ್ರದೇಶದ ನಿವಾಸಿಗಳು ಎಲ್ಲಿಗೆ ಹೋಗಬೇಕು. ಧಾರ್ಮಿಕ ಕೇಂದ್ರಗಳನ್ನು ನೆಲಸಮ ಮಾಡಿ, ಅಲ್ಲಿ ವಾಕಿಂಗ್ ಪಾಥ್ ಮಾಡುವ ಅಭಿವೃದ್ಧಿ ನಮಗೆ ಬೇಕಾಗಿಲ್ಲ ಎಂದು ಕಿಡಿಕಾರಿದರು.

ರಾಘವೇಂದ್ರ ಕಾಲೋನಿ ನಿವಾಸಿ ಪವನ್ ಕುಮಾರ್ ಮತ್ತು ಜಿ.ಕೆ.ಮಂಜುನಾಥ್ ಮಾತನಾಡಿ, ಕಳೆದ 45 ವರ್ಷದಿಂದ ನಾವೆಲ್ಲ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದೇವೆ. ನಗರಸಭೆಗೆ ಕಂದಾಯವನ್ನು ಪಾವತಿಸುತ್ತಿದ್ದೇವೆ. ಈಗ ಸ್ವಾಧೀನ ಎಂದು ನೋಟಿಸ್ ಬಂದಿದೆ. ನೆಮ್ಮದಿ ಹಾಳು ಮಾಡುವ ಯೋಜನೆ ಬೇಡ. ನಮ್ಮ ಸಮಾಧಿ ಮೇಲೆ ಪಾರ್ಕ್ ನಿರ್ಮಾಣ ಮಾಡುವುದು ಬೇಡ ಎಂದು ನೋವು ತೋಡಿಕೊಂಡರು.

ಸ್ಥಳ ಪರಿಶೀಲನೆ ಮಾಡದೆಯೇ ತಮ್ಮ ವಾಸ ಸ್ಥಳವನ್ನು ಖರಾಬು ಅಂತ ಗುರುತಿಸಿದ್ದಾರೆ. ಇನ್ನೊಂದೆಡೆ ಶಾಸಕರು ಯಾರಿಗೂ ನೋವು ಮಾಡುವುದಿಲ್ಲ. ಧಾರ್ಮಿಕ ಸ್ಥಳಗಳು ಮತ್ತು ಮನೆಗಳನ್ನು ಕೈಬಿಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಶಾಸಕರು ಕಾನೂನು ಪ್ರಕಾರ ಪ್ರಿಲಿಮಿನರಿ ನೋಟಿಸನ್ನು ಹಿಂಪಡೆಯಲು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಸದಸ್ಯರಾದ ನರಸಿಂಹ, ಸೋಮಶೇಖರ್, ಗ್ಯಾಬ್ರಿಯಲ್, ನಾಗಮ್ಮ, ಅಕ್ಲೀಂ, ಮುಖಂಡರಾದ ಗೂಳಿಗೌಡ, ಮಾವಿನಸಸಿ ವೆಂಕಟೇಶ್, ಹಾಲಿನ ಚಂದ್ರು, ವೆಂಕಟೇಶ್, ಬಾಬು, ಸಿದ್ದರಾಜು, ಮಂಟೇದಯ್ಯ, ಚಂದ್ರಶೇಖರ್, ಸಿದ್ದರಾಜು (ಮಾಸ್ಟರ್), ಕಬ್ಬಡಿ ವಿಜಿ, ಡೇರಿ ವೆಂಕಟೇಶ್ ಮತ್ತಿತರರಿದ್ದರು.

ಕೋಟ್ .............

ನಗರಸಭಾಧ್ಯಕ್ಷರು ನಗರದ ಪ್ರಥಮ ಪ್ರಜೆ. ನಗರ ವ್ಯಾಪ್ತಿಯ ಅಭಿವೃದ್ಧಿ ವಿಚಾರಗಳನ್ನು ಅವರ ಗಮನ ಸೆಳೆದಿದ್ದರೆ ಅರ್ಕಾವತಿ ರಿವರ್ ಫ್ರಂಟ್ ಯೋಜನೆ ಇಷ್ಟೆಲ್ಲ ಗೊಂದಲಗಳಿಗೆ ಕಾರಣವಾಗುತ್ತಿರಲಿಲ್ಲ. ನಗರಸಭೆ ಕೈಗೊಂಡ ನಿರ್ಣಯ ಮತ್ತು ಅಧ್ಯಕ್ಷರ ವಿರುದ್ದ ಕೆಲವರು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ನಗರದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿರುವ ಅಧ್ಯಕ್ಷರ ವಿರುದ್ದ ಹೋರಾಟ ಮಾಡಿದರೆ ಜನ ಒಪ್ಪುವುದಿಲ್ಲ. ಅವರ ಧಮ್ಕಿಗೆ ಹೆದರುವುದಿಲ್ಲ.

-ದೊಡ್ಡಿ ಸುರೇಶ್, ಅಧ್ಯಕ್ಷರು, ರಾಮನಗರ ಟಿಎಪಿಸಿಎಂಎಸ್

13ಕೆಆರ್ ಎಂಎನ್ 13.ಜೆಪಿಜಿ

ರಾಮನಗರದಲ್ಲಿ ಕಾಂಗ್ರೆಸ್ ಮುಖಂಡ ಶಿವಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.