ಕನ್ನಡಿಗರಾದ ನಾವು ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರದ ಅಳವಡಿಕೆ ಸಾಂಸ್ಕೃತಿಕ ಗುಲಾಮಗಿರಿಗೆ ಕಾರಣವಾಗಿದೆ. ಇದನ್ನು ತಿರಸ್ಕರಿಸಿದಾಗ ಮಾತ್ರ ಪ್ರಾದೇಶಿಕ ಭಾಷೆಗಳ ಅಸ್ತಿತ್ವ ಸಾಧ್ಯ ಎಂದು ವಿಮರ್ಶಕ ಕೆ.ಪಿ.ನಟರಾಜ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಕನ್ನಡಿಗರಾದ ನಾವು ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರದ ಅಳವಡಿಕೆ ಸಾಂಸ್ಕೃತಿಕ ಗುಲಾಮಗಿರಿಗೆ ಕಾರಣವಾಗಿದೆ. ಇದನ್ನು ತಿರಸ್ಕರಿಸಿದಾಗ ಮಾತ್ರ ಪ್ರಾದೇಶಿಕ ಭಾಷೆಗಳ ಅಸ್ತಿತ್ವ ಸಾಧ್ಯ ಎಂದು ವಿಮರ್ಶಕ ಕೆ.ಪಿ.ನಟರಾಜ್ ಅಭಿಪ್ರಾಯಪಟ್ಟರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಅಚಲ ಕಲ್ಚರಲ್ ಫೌಂಡೇಶನ್ ವತಿಯಿಂದ ನಡೆದ ವಿಶ್ವ ಮಾತೃಭಾಷೆ ದಿನಾಚರಣೆ ಮತ್ತು ನವ್ಯಕವಿ ಎಂ ಗೋಪಾಲಕೃಷ್ಣ ಅಡಿಗರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗ್ಗೆ 75 ವರ್ಷಗಳ ಹಿಂದೆ ಬಾಂಗ್ಲಾದೇಶದ ಉರ್ದು ಭಾಷೆ ಹೇರಿಕೆ ವಿರುದ್ಧ ನಡೆದ ಹೋರಾಟದಲ್ಲಿ ಡಾಕಾ ವಿವಿ ನಿಲಯದ 5 ಜನ ವಿದ್ಯಾರ್ಥಿಗಳು ಹುತಾತ್ಮರಾದರು. ಮುಂದೆ ಈ ಭಾಷಾ ಹೋರಾಟವೇ ದೇಶದ ಉದಯಕ್ಕೆ ಕಾರಣವಾಯಿತು. ಭಾಷೆ ಕೇವಲ ಸಂವಹನ ಮಾಧ್ಯಮವಾಗಿರದೆ ಒಂದು ಸಮುದಾಯದ ಅಸ್ಥಿತ್ವದ ಪ್ರತೀಕ ಎಂಬುದು ಚಾರಿತ್ರಿಕವಾಗಿ ಸಾಬೀತಾಗಿದೆ ಎಂದರು.ಮಹಾತ್ಮ ಗಾಂಧಿಜಿ 1920-21ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾಂತ್ಯ ಸಮಿತಿ ರಚಿಸುವಾಗ ಭಾರತದ ಪ್ರಾದೇಶಿಕ ಭಾಷಿಕ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಸಲಹೆ ನೀಡಿದ್ದರು. ಈ ಸಲಹೆಯೇ ಭಾರತ ಹಲವು ಭಾಷೆಗಳ ನಡುವೆ ಒಕ್ಕೂಟ ವ್ಯವಸ್ಥೆಯಾಗಿ ಉಳಿಯಲು ಮತ್ತು ಸ್ವಾತಂತ್ರೋತ್ತರದಲ್ಲಿ ಮುಕ್ಕಾಲು ಶತಮಾನದ ನಂತರವೂ ಭಾರತ ಏಕೀಕೃತ ಒಕ್ಕೂಟ ರಾಷ್ಟ್ರವಾಗಿ ರೂಪಗೊಳ್ಳಲು ಇದು ಕಾರಣವಾಗಿದೆ. ಆದರೆ ವರ್ತಮಾನದಲ್ಲಿ ರಾಷ್ಟ್ರ ನಿರ್ಮಾಪಕರ ಕಾಳಜಿ ಇದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದರು.
ನವ್ಯಕವಿ ಎಂ.ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಮತ್ತು ವ್ಯಕ್ತಿತ್ವ ಕುರಿತು ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಡಿಗರ ಕಾವ್ಯ ನವ್ಯ ಕಾವ್ಯದ ಯುಗಕ್ಕೆ ಸಾಕ್ಷಿ. ಹೊಸ ನಾಡು ಕಟ್ಟುವ ಕನಸನ್ನು ಸಂಕೇತ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಕ್ಕೆ ಹೊಸತನ್ನು ತಂದು ಕೊಡುವ ಮೂಲಕ ಪಿ.ಲಂಕೇಶ್ ಹೇಳಿದಂತೆ ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂಬ ಹೆಗ್ಗಳಿಕೆಗೆ ಅಡಿಗರು ಪಾತ್ರರಾದರು ಎಂದರು.ಪ್ರಾಸ್ತವಿಕ ನುಡಿಗಳನ್ನಾಡಿದ ಅಚಲ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಪ್ರೊ.ಡಿ.ಎಸ್.ಮುನೀಂದ್ರ ಕುಮಾರ್, ಜಾಗತೀಕರಣದಿಂದ ಅರ್ಧದಷ್ಟು ಭಾಷೆಗಳು ಅಳಿದು ಹೋಗುತ್ತಿವೆ. ವ್ಯಕ್ತಿಗೆ ವಿಚಾರವೊಂದನ್ನು ತಿಳಿದ ಭಾಷೆಯಲ್ಲಿ ಹೇಳಿದರೆ ತಲೆಗೆ ಹೋಗುತ್ತದೆ. ಆದರೆ ಆತನ ಮಾತೃಭಾಷೆಯಲ್ಲಿ ಹೇಳಿದರೆ ಅದು ಹೃದಯ ಮುಟ್ಟುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲ ಕೆ.ಎಸ್.ಕುಮಾರ್ ಭಾಷೆ ಭಾವನೆಗಳನ್ನು ಬೆಸೆಯುತ್ತದೆ.ವಿದ್ಯಾರ್ಥಿಗಳು ಕಲಿಕೆ ಹಂತದಲ್ಲಿ ಭಾಷೆಯನ್ನು ಶುದ್ಧತೆಯಿಂದ ಕಲಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಗೋವಿಂದರಾಯ,ಪತ್ರಾಂಕಿತ ವ್ಯವಸ್ಥಾಪಕಿ ಚಂದ್ರಕಲಾ,ಸಹಾಯಕ ಪ್ರಾಧ್ಯಾಪಕರಾದ ಡಾ.ಲತಾ, ಡಾ.ದುರ್ಗಪ್ಪ, ದರ್ಶನ್, ಮನೋಹರ್, ಚಂದ್ರಶೇಖರ್, ಹರಿಕುಮಾರ್,ನಟರಾಜು ,ರಂಶ್ಯಾಮಯ್ಯ, ಉಪನ್ಯಾಸಕರಾದ ಮಂಜುನಾಥ್ ತಿಮ್ಲಾಪುರ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು. ಮಂಜುನಾಥ್ ನಿರೂಪಿಸಿ ರಘು ವಂದಿಸಿದರು.