12ನೇ ಶತಮಾನದಲ್ಲಿ ಬಸವಣ್ಣನರು ತಂದಿದ್ದ ಇಷ್ಟಲಿಂಗ ಎಂಬುದು ಕೇವಲ ಒಂದು ಆಧ್ಯಾತ್ಮಿಕ ಅಥವಾ ವೈಜ್ಞಾನಿಕ ವಸ್ತುವಲ್ಲ. ಅದು ಮೇಲ್ವರ್ಗದವರ ಸ್ವತ್ತಾಗಿದ್ದ ದೇವರನ್ನು ಜನಸಾಮಾನ್ಯರ ಅಂಗೈಗೆ ತಂದು ಕೊಟ್ಟ ಸಾಮಾಜಿಕ ನ್ಯಾಯದ ಸಂಕೇತವಾಗಿದೆ.

ಕನ್ನಡಪ್ರಭ ವಾರ್ತೆ ಮುಂಡರಗಿ

12ನೇ ಶತಮಾನದಲ್ಲಿ ಬಸವಣ್ಣನರು ತಂದಿದ್ದ ಇಷ್ಟಲಿಂಗ ಎಂಬುದು ಕೇವಲ ಒಂದು ಆಧ್ಯಾತ್ಮಿಕ ಅಥವಾ ವೈಜ್ಞಾನಿಕ ವಸ್ತುವಲ್ಲ. ಅದು ಮೇಲ್ವರ್ಗದವರ ಸ್ವತ್ತಾಗಿದ್ದ ದೇವರನ್ನು ಜನಸಾಮಾನ್ಯರ ಅಂಗೈಗೆ ತಂದು ಕೊಟ್ಟ ಸಾಮಾಜಿಕ ನ್ಯಾಯದ ಸಂಕೇತವಾಗಿದೆ ಎಂದು ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ತೋಂಟದಾರ್ಯ ಮಠದಲ್ಲಿ ಶುಕ್ರವಾರ ಸಂಜೆ ಜರುಗಿದ 63ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಹೆಣ್ಣುಮಕ್ಕಳಿಗೆ ಪೂಜೆ ಮಾಡುವ ಹಕ್ಕಿಲ್ಲದ ಕಾಲದಲ್ಲಿ, ಇಷ್ಟಲಿಂಗ ದೀಕ್ಷೆ ನೀಡುವ ಮೂಲಕ ಮಹಿಳೆಯರಿಗೆ ಧಾರ್ಮಿಕ ಸಮಾನತೆ ಕೊಟ್ಟವರು ಬಸವಣ್ಣನವರು. ತಾವು ಕಂಡುಕೊಂಡ ಈ ಶಿವಯೋಗವನ್ನು ಬಸವಣ್ಣನವರು ಮೊದಲು ಪ್ರಯೋಗಿಸಿದ್ದು ತಮ್ಮ ಅಕ್ಕ ನಾಗಮ್ಮನವರ ಮೇಲೆ. ಆ ಮೂಲಕ ಅಕ್ಕನಾಗಮ್ಮ ಈ ದೇಶದ ಮೊಟ್ಟಮೊದಲ ಶಿವಯೋಗಿನಿಯಾದರು. ಇಷ್ಟಲಿಂಗ ಸಾಧನೆಯ ಫಲವಾಗಿಯೇ ಅವರ ಉದರದಲ್ಲಿ ಚನ್ನಬಸವಣ್ಣನಂತಹ ಅವಿರಳ ಜ್ಞಾನಿ ಜನ್ಮತಾಳಿದರು.

ಕನ್ನಡಿಯೊಳಗೆ ಪ್ರತಿಬಿಂಬ ಅಡಗಿರುವಂತೆ, ಭಕ್ತನೊಳಗೆ ದೇವರ ಶಕ್ತಿ ಅಡಗಿದೆ ಎಂಬುದನ್ನು ವಚನಗಳ ಮೂಲಕ ಅರ್ಥೈಸಿಕೊಳ್ಳಬೇಕು. ವಚನಗಳನ್ನು ಮೀರಿ ಬರೆಯುವುದಕ್ಕಿಂತ ಅವುಗಳ ಆಶಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ವಚನಗಳನ್ನು ಕೇವಲ ಮೇಲ್ನೋಟಕ್ಕೆ ಓದದೆ, ಅವುಗಳ ಆಳವಾದ ತತ್ವಗಳನ್ನು ಅಧ್ಯಯನಶೀಲತೆಯಿಂದ ಅರ್ಥಮಾಡಿಕೊಳ್ಳಬೇಕು. ಯೋಗ ಮತ್ತು ನಾಟ್ಯಕ್ಕೆ ಭಾರತವೇ ತವರುಮನೆ. ಆದಿಶಿವನಿಂದ ಆರಂಭವಾದ ಯೋಗ ಪರಂಪರೆಯು ಹಠಯೋಗ, ಲಯಯೋಗ, ಭಕ್ತಿಯೋಗಗಳ ಮೂಲಕ ಸಾಗಿ ಬಸವಣ್ಣನವರ ಕಾಲದಲ್ಲಿ ಶಿವಯೋಗವಾಗಿ ವಿಕಸನಗೊಂಡಿತು. ಸಾಕಾರದಿಂದ ನಿರಾಕಾರದತ್ತ ಸಾಗುವ ಮಾರ್ಗವೇ ಇಷ್ಟಲಿಂಗ ಎಂದರು.

ಹುಬ್ಬಳ್ಳಿಯ ಬಸವರಾಜ ಹುಲ್ಲೋಳಿ ಮಾತನಾಡಿ, ಇಷ್ಟಲಿಂಗ ಎನ್ನುವುದು ಕೇವಲ ಧಾರ್ಮಿಕ ಸಂಕೇತವಲ್ಲ, ಅದೊಂದು ಅತ್ಯುನ್ನತ ವೈಜ್ಞಾನಿಕ ಸಂಶೋಧನೆಯಾಗಿದೆ. ಬಸವಣ್ಣನವರು ಜಗತ್ತಿಗೆ ನೀಡಿದ ಈ ಇಷ್ಟಲಿಂಗವನ್ನು ಇಂದಿನ ಯುವ ಪೀಳಿಗೆ ಅದರ ಹಿಂದಿನ ವೈಜ್ಞಾನಿಕ ಮಹತ್ವ ಅರಿತುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಶ್ವಿನಿ ಗೌಡರ್ ಅವರನ್ನು ಪೂಜ್ಯರು ಸನ್ಮಾನಿಸಿದರು. ಸಂತೋಷ ಅಂಗಡಿ ಶಿವಾನುಭವದ ಭಕ್ತಿಸೇವೆ ವಹಿಸಿಕೊಂಡಿದ್ದರು. ಅವರು ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರವಚನ ಸಮೀತಿ ಅಧ್ಯಕ್ಷ ಸಿ.ಕೆ. ಗಣಪ್ಪನವರ, ಈಶಣ್ಣ ಬೆಟಗೇರಿ, ಬಸಯ್ಯನವರು ಗಿಂಡಿಮಠ, ಕೊಟ್ರೇಶ ಅಂಗಡಿ, ಶಿವಯೋಗಿ ಗಡ್ಡದ, ಶರಣಪ್ಪ ಕುಬಸದ, ಪಾಲಾಕ್ಷಿ ಗಣದಿನ್ನಿ, ಶಿವಯೋಗಿ ನಾವಿ, ನಾಗಪ್ಪ ಹಾಲಗಿ, ಸದಾಶಿವಯ್ಯ ಕಬ್ಬೂರಮಠ, ಶಿವಕುಮಾರ ಬೆಟಗೇರಿ, ಪವನ್ ಚೋಪ್ರಾ, ಮುತ್ತು ಹಾಳಕೇರಿ, ವಿ.ಎಸ್. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ನಿಂಗು ಸೊಲಗಿ ಸ್ವಾಗತಿಸಿ, ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿದರು.