ಈಶಾನ್ಯ ಪದವೀಧರರ ಸಮಸ್ಯೆಗೆ ಸದನದಲ್ಲಿ ಧ್ವನಿಯಾಗುವೆ: ಅಮರನಾಥ ಪಾಟೀಲ್

| Published : May 14 2024, 01:04 AM IST

ಸಾರಾಂಶ

ಈ ಹಿಂದೆ 2012ರಿಂದ 2018ರವರೆಗೆ ಈಶಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೆ. ಆಗ ಪದವೀಧರರ ಸಮಸ್ಯೆಗಳನ್ನು ಸದನದಲ್ಲಿ ಧ್ವನಿ ಎತ್ತಿದ್ದೇನೆ.

ಬಳ್ಳಾರಿ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಈ ಭಾಗದ ಪದವೀಧರರು ಹಾಗೂ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಹೇಳಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 2012ರಿಂದ 2018ರವರೆಗೆ ಈಶಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೆ. ಆಗ ಪದವೀಧರರ ಸಮಸ್ಯೆಗಳನ್ನು ಸದನದಲ್ಲಿ ಧ್ವನಿ ಎತ್ತಿದ್ದೇನೆ. 2009ರಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ (ಕೆಕೆಡಿಬಿ) ಅಧ್ಯಕ್ಷನಾಗಿದ್ದಾಗಲೂ ಈ ಭಾಗದ ಪ್ರಗತಿಗೆ ಒತ್ತು ನೀಡಿದ್ದೇನೆ. 371(ಜೆ) ಪರಿಣಾಮಕಾರಿಯಾಗಿ ಅನುಷ್ಠಾನ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸುವುದು, ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ ಸಂಬಂಧ ಸದನದಲ್ಲಿ ಹೋರಾಟ ನಡೆಸಲಾಗುವುದು.

ರಾಜ್ಯದ ಪದವೀಧರರಿಗೆ ಉದ್ಯೋಗ ಸೃಷ್ಟಿಯಾಗಬೇಕು. ಈಗಾಗಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ನಿರಂತರವಾಗಿ ಸದನದಲ್ಲಿ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.

ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಅವಕಾಶ ಸಿಗಲಿಲ್ಲ. ಬಳ್ಳಾರಿ ಜಿಲ್ಲೆಯ ಅಭ್ಯರ್ಥಿಗೆ ನೀಡಲಾಗಿತ್ತು. ಅವರ ಆಯ್ಕೆಗೆ ಸಾಕಷ್ಟು ಶ್ರಮಿಸಿದೆವು. ಆದರೆ, ಆಯ್ಕೆಯಾಗಲಿಲ್ಲ. ಈ ಬಾರಿ ಪಕ್ಷ ಮತ್ತೆ ನನ್ನನ್ನು ಗುರುತಿಸಿ, ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ. ಈ ಭಾಗದ ಪದವೀಧರರು ಮತ್ತೊಮ್ಮೆ ಚುನಾಯಿಸಬೇಕು. ಈ ಮೂಲಕ ಪದವೀಧರರ ಪರವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಡಾ.ಬಿ.ಕೆ.ಸುಂದರ್, ಮುರಹರಗೌಡ ಗೋನಾಳ್, ಗಣಪಾಲ್ ಐನಾಥ ರೆಡ್ಡಿ, ಡಾ.ಮಹಿಪಾಲ್, ಎಸ್‌.ಗುರುಲಿಂಗನಗೌಡ, ಗುತ್ತಿಗನೂರು ವಿರುಪಾಕ್ಷಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.