ಮುಂಗಾರುಮಳೆ ತಂದ ಹರ್ಷ: ಕಾನನವೆಲ್ಲ ಹಸಿರುಮಯ

| Published : May 22 2025, 11:53 PM IST

ಸಾರಾಂಶ

ಮಳೆಯಿಂದ ಅರಣ್ಯ ಪ್ರದೇಶವು ಹಸಿರುಮಯವಾಗಿದ್ದು, ಅಲ್ಲಲ್ಲಿ ಪ್ರಾಣಿ ಪಕ್ಷಿಗಳ ದರ್ಶನ ಸಹ ಹೆಚ್ಚಾಗುತ್ತಿದೆ. ಇದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಇದರಿಂದಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆಯಿಂದ ಸಫಾರಿಗೆ ಹೋಗುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಅರಣ್ಯ ಪ್ರದೇಶವು ಒಣಗಿ ಕಾಡು ಪ್ರಾಣಿ-ಪಕ್ಷಿಗಳು ಸಂಕಷ್ಟ ಎದುರಾಗುತ್ತಿತ್ತು. ಆದರೆ, ಈ ಬಾರಿ ಏಪ್ರಿಲ್, ಮೇ ತಿಂಗಳಲ್ಲೇ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶವು ಹಚ್ಚ ಹಸಿರಾಗಿದೆ.

ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಪ್ರಾಣಿ ಪಕ್ಷಿಗಳಿಗೆ ಮೇವು, ನೀರು ಲಭ್ಯವಾಗುತ್ತಿದೆ. ಇದು ಒಂದೆಡೆ ವನ್ಯಜೀವಿಗಳಿಗೆ ಖುಷಿ ಉಂಟು ಮಾಡಿದರೇ, ಪರಿಸರ ಪ್ರೇಮಿಗಳಿಗೂ ಸಮಾಧಾನ ತಂದಿದೆ.

ಹಿಂದೆಲ್ಲ ಮಳೆ ಅಭಾವದಿಂದ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಅಲ್ಲಲ್ಲಿ ಬೆಂಕಿ ಬಿದ್ದು ಎಕರೆ ಗಟ್ಟಲೆ ಅರಣ್ಯ ಪ್ರದೇಶವು ಸುಟ್ಟು ಹೋಗುತ್ತಿದ್ದವು. ಕೆರೆ- ಕಟ್ಟುಗಳು ಒಣಗಿ ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ, ಈ ವರ್ಷ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಎಲ್ಲೂ ಬೆಂಕಿ ಬಿದ್ದ ಪ್ರಕರಣಗಳು ವರದಿಯಾಗಿಲ್ಲ.

ಮುಂಗಾರಿಗೆ ಮೊದಲೇ ಸಾಕಷ್ಟು ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಮರಗಳಲ್ಲಿ ಹಸಿರೆಳೆಗಳು ಕಂಗೊಳಿಸುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರಿಂದ ಎಲ್ಲೂ ಬೆಂಕಿ ಬಿದ್ದ ಪ್ರಕರಣಗಳು ವರದಿಯಾಗಿಲ್ಲ.

ನಾಗರಹೊಳೆ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ಕಬಿನಿ ಹಿನ್ನೀರು ಪ್ರದೇಶದಲ್ಲಿ ನೀರು ಸಾಕಷ್ಟು ಲಭ್ಯವಿದೆ. ಹಾಗೆಯೇ, ಮೇಟಿಕುಪ್ಪೆ ಕೆರೆ, ಕೆಂಚಮ್ಮನಕೆರೆ, ಡಿ.ಬಿ. ಕುಪ್ಪೆ, ಹುಲಿ ಕೆರೆ, ಹೊಸಕೆರೆ ಹಾಗೂ ಕಡಬನಕಟ್ಟೆಕೆರೆಗಳಲ್ಲಿ ನೀರು ಲಭ್ಯವಿದೆ. ಇದರಿಂದ ಆನೆ, ಹುಲಿ, ಚಿರತೆ, ಕಾಡಮ್ಮೆ, ಜಿಂಕೆ ಸೇರಿದಂತೆ ಅನೇಕ ಪ್ರಾಣಿಪಕ್ಷಿಗಳಿಗೆ ಅನುಕೂಲವಾಗಿದೆ. ಅಲ್ಲದೆ, ವನ್ಯಜೀವಿಗಳು ಕಬಿನಿ ಹಿನ್ನೀರು ಪ್ರದೇಶದಲ್ಲಿ ಮೇವು, ನೀರಿಗಾಗಿ ಬರುವುದು ಸಾಮಾನ್ಯವಾಗಿದೆ.

ಪ್ರವಾಸಿಗರ ಸಂಖ್ಯೆ ಹೆಚ್ಚಳ:

ಮಳೆಯಿಂದ ಅರಣ್ಯ ಪ್ರದೇಶವು ಹಸಿರುಮಯವಾಗಿದ್ದು, ಅಲ್ಲಲ್ಲಿ ಪ್ರಾಣಿ ಪಕ್ಷಿಗಳ ದರ್ಶನ ಸಹ ಹೆಚ್ಚಾಗುತ್ತಿದೆ. ಇದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಇದರಿಂದಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆಯಿಂದ ಸಫಾರಿಗೆ ಹೋಗುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಪ್ರತಿ ವರ್ಷ ಏಪ್ರಿಲ್, ಮೇ ಬಂದರೇ ಪ್ರವಾಸಿಗರಿಗೆ ಕಾಡು ಪ್ರಾಣಿಪಕ್ಷಿಗಳು ಕಂಡರೂ ಹಸಿರುಲೋಕ ದರ್ಶನ ಆಗುತ್ತಿರಲಿಲ್ಲ. ಆದರೆ, ಈ ಬಾರಿ ಹಸಿರನ ಜೊತೆಗೆ ವನ್ಯಜೀವಿಗಳ ದರ್ಶನವೂ ಆಗುತ್ತಿರುವುದು ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಸಫಾರಿಗೆ ಬರುವ ಪ್ರವಾಸಿಗರಿಗೆ ಅನುಕೂಲಕರ ರೀತಿಯಲ್ಲಿ ಅರಣ್ಯ ಇಲಾಖೆಯವರು ಕ್ರಮ ವಹಿಸುತ್ತಿರುವುದರಿಂದ ಬಹುತೇಕ ಎಲ್ಲರಿಗೂ ವನ್ಯಜೀವಿಗಳ ದರ್ಶನ ಆಗುತ್ತಿದೆ.