ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ತಾಯಿ ಭುವನೇಶ್ವರಿ ರಥಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20, 21, 22ರಂದು ನಡೆಯಲಿರುವ ನಡೆಯಲಿರುವ ಸಮ್ಮೇಳನದ ಅಂಗವಾಗಿ ರಾಜ್ಯದ ಎಲ್ಲರನ್ನು ಆಹ್ವಾನಿಸಲು ಕನ್ನಡ ಜ್ಯೋತಿ ರಥ ಸಿದ್ಧಕೊಂಡಿದ್ದು, ಪಟ್ಟಣದ ತಾಯಿ ನಿಮಿಷಾಂಭ ದೇವಸ್ಥಾನದ ಮುಂಭಾಗ ಸಚಿವರು ಪೂಜೆ ಸಲ್ಲಿಸಿದರು.
87 ದಿನ ರಾಜ್ಯಾದ್ಯಂತ ಸಂಚರಿಸುವ ರಥಕ್ಕೆ ಅಧಿಕೃತವಾಗಿ ಸೆಪ್ಟೆಂಬರ್ 22 ರಂದು ಉತ್ತರ ಕನ್ನಡದ ಭುವನಗಿರಿಯಲ್ಲಿರುವ ತಾಯಿ ಭುವನೇಶ್ವರಿ ದೇವಾಲಯದಿಂದ ಚಾಲನೆ ನೀಡಲಾಗುವುದು. ಸಕ್ಕರೆ ನಾಡಿನಲ್ಲಿ ನಡೆಯುವ ‘ಸಾಹಿತ್ಯ ಸಮ್ಮೇಳನಕ್ಕೆ ಮರೆಯದೇ ಬನ್ನಿ’ ಎಂದು ಅಕ್ಕರೆಯ ಆಹ್ವಾನ ನೀಡಲಿದೆ. ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಕನ್ನಡ ನುಡಿಯ ಸವಿ ಬಡಿಸಲು ಸಿದ್ಧವಾಗಿದೆ ಎಂಬುವ ರೀತಿ ಅಲಂಕೃತವಾಗಿರುವ ಕನ್ನಡ ರಥ ಕನ್ನಡಿಗರ ಕಣ್ಮನ ಸೆಳೆಯಲಿದೆ.ಮಂಡ್ಯ ಜಿಲ್ಲೆಯ ವಿಶೇಷತೆ ಸಾರುವ ರಥ ಕನ್ನಡ ನುಡಿ ಕಲಿಸುವ ತಾಯಿ ಭುವನೇಶ್ವರಿ, ಜಿಲ್ಲೆಗೆ ಅನ್ನ ನೀಡುವ ಕಾವೇರಿ ಮಾತೆ, ಉಳುಮೆ ಮಾಡಲು ಸಿದ್ಧವಿರುವ ಎತ್ತುಗಳು ಮತ್ತು ರೈತ, ಮಂಡ್ಯ ಜಿಲ್ಲೆ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಸುಂದರ ಆಕೃತಿಗಳು ಜಿಲ್ಲೆಯ ಬಗ್ಗೆ ಹಮ್ಮೆ ಉಂಟು ಮಾಡುತ್ತದೆ.
ಜ್ಙಾನ ಪೀಠ ಪುರಸ್ಕೃತರಾದ ರಾಷ್ಟ್ರಕವಿ ಕುವೆಂಪು, ದಾ.ರಾ.ಬೇಂದ್ರೆ, ಶಿವರಾಮ್ ಕಾರಂತ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ್ ಅವರ ಭಾವಚಿತ್ರಗಳು ಹಾಗೂ ಮಂಡ್ಯ ಜಿಲ್ಲೆಯ 7 ತಾಲೂಕಿನಲ್ಲಿ ಪ್ರೇಕ್ಷಣೀಯ ಸ್ಥಳಗಳು ಎಲ್ಲರನ್ನೂ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ ಕನ್ನಡದ ಹಬ್ಬ ಆಚರಿಸೋಣ ಎನ್ನುತ್ತಿದೆ.ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಡಾ:ಮೀರಾ ಶಿವಲಿಂಗಯ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ಪೊನ್ನದೊಡ್ಡಿ, ಹರ್ಷ ವಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.