ಪಶ್ಚಿಮಘಟ್ಟ ಪ್ರದೇಶಕ್ಕೆ ಮರಣ ಶಾಸನದಂತಿರುವ ಕಸ್ತೂರಿ ರಂಗನ್ ವರದಿ ಸಂಬಂಧ ಕೇಂದ್ರ ಸರ್ಕಾರ ನಡೆಸಿದ ಸಭೆಗಳಿಗೆ ಒಂದು ಬಾರಿಯೂ ಹಾಜರಾಗದ ಸಂಸದರು ಸಂಸತ್ ಅಧಿವೇಶನದಲ್ಲಿಯೂ ಪ್ರಸ್ತಾಪ ಮಾಡದೆ ಕಾಲಹರಣ ಮಾಡಿದ್ದಾರೆ ಎಂದು ಸಹಕಾರ ವೇದಿಕೆ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪಶ್ಚಿಮಘಟ್ಟ ಪ್ರದೇಶಕ್ಕೆ ಮರಣ ಶಾಸನದಂತಿರುವ ಕಸ್ತೂರಿ ರಂಗನ್ ವರದಿ ಸಂಬಂಧ ಕೇಂದ್ರ ಸರ್ಕಾರ ನಡೆಸಿದ ಸಭೆಗಳಿಗೆ ಒಂದು ಬಾರಿಯೂ ಹಾಜರಾಗದ ಸಂಸದರು ಸಂಸತ್ ಅಧಿವೇಶನದಲ್ಲಿಯೂ ಪ್ರಸ್ತಾಪ ಮಾಡದೆ ಕಾಲಹರಣ ಮಾಡಿದ್ದಾರೆ ಎಂದು ಸಹಕಾರ ವೇದಿಕೆ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಆರೋಪಿಸಿದರು.ಕಸ್ತೂರಿ ರಂಗನ್ ಜಾರಿ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ವತಿಯಿಂದ ಉಂಟೂರುಕಟ್ಟೆ-ಕೈಮರದಿಂದ ತಾಲೂಕು ಕಚೇರಿವರೆಗೆ ಶನಿವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತು ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ಆರು ರಾಜ್ಯಗಳ ವ್ಯಾಪ್ತಿಯ ಘಟ್ಟ ಸಾಲನ್ನು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸುವುದು ಸರಿಯಾದ ಕ್ರಮವಲ್ಲ. ಸರ್ಕಾರ ಜನರಿಂದ ಜನರಿಗಾಗಿ ಇರಬೇಕು ಎಂದು ಆಗ್ರಹಿಸಿದರು.
ರಾಜಕಾರಣಿಗಳು ಸಣ್ಣತನ, ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು. ಭೂಮಿಯ ಒಡೆತನ ಕಲ್ಪಿಸಿದ ಶಾಂತವೇರಿ ಗೋಪಾಲಗೌಡರೇ ನಮಗೆ ಆದರ್ಶ. ಯಾರ ಮೇಲೂ ದ್ವೇಷ ಕಾರುವುದು ಬೇಡ. ಕಾಡು ಕಳೆದ ಎರಡು ದಶಕದಲ್ಲಿ ದ್ವಿಗುಣವಾಗಿದೆ. ಅರಣ್ಯ ಇಲಾಖೆ ಕ್ರಮದಿಂದಲೇ ಅರಣ್ಯ ನಾಶವಾಗುತ್ತಿದೆ ಎಂದು ಆರೋಪಿಸಿದರು.ಮಾಧವ ಗಾಡ್ಗೀಳ್ - ಕಸ್ತೂರಿ ರಂಗನ್ ವರದಿ ಮಲೆನಾಡಿಗರ ಸಹಜ ಬದುಕಿಗೆ ಮರಣಶಾಸನವಾಗಿದೆ. ಅರಣ್ಯ ಕಾಯ್ದೆಯಿಂದಾಗಿ ಮಲೆನಾಡು ಅಕ್ಷರಶಃ ಸುಡುಗಾಡಾಗುತ್ತಿದೆ. ದೇಶಕ್ಕೆ ಬೆಳಕು ನೀಡಿದ ನಮ್ಮೂರಿನ ಜನ ಕತ್ತಲಿನಲ್ಲಿ ಕಾಲ ಕಳೆಯುವ ಸನ್ನಿವೇಶ ದೂರ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರ 17 ಬಾರಿ ಸಭೆ ಕರೆದರೂ ಇಲ್ಲಿನ 12 ಸಂಸದರು ಸಭೆಯಲ್ಲಿ ಧ್ವನಿ ಎತ್ತಲಿಲ್ಲ. ಸುಪ್ರೀಂ ಕೋರ್ಟ್ ಸಂಸತ್ತು ಬಯಸಿದರೆ ಪ್ರಕರಣವನ್ನು ವಜಾ ಮಾಡುವುದಾಗಿ ತಿಳಿಸಿದೆ. ಶರಾವತಿ ಸಂತ್ರಸ್ತರಿಗೆ ಕೊಡಲು ಇಚ್ಛಿಸಿರುವ 9 ಸಾವಿರ ಪ್ರದೇಶಕ್ಕೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.ಸಂಚಾಲಕ ಬಿ.ಆರ್. ಜಯಂತ್ ಮಾತನಾಡಿ, ತಪ್ಪು ಅಭಿಪ್ರಾಯ ಹುಟ್ಟುಹಾಕುವ ಅಪಪ್ರಚಾರವನ್ನು ಅಧಿಕಾರ ನಿಲ್ಲಿಸಬೇಕು. ಒಳನೋಟ ಇಲ್ಲದ ಹೋರಾಟಕ್ಕೆ ಬೆಲೆ ಸಿಗುವುದಿಲ್ಲ. 2014ರಿಂದ ಎಲ್ಲ 6 ರಾಜ್ಯದ ಮುಖ್ಯಮಂತ್ರಿಗಳ ಅಧಿಸೂಚನೆ ಹಿಂಪಡೆಯಲು ಒತ್ತಾಯಿಸಿದ್ದಾರೆ. ನಮ್ಮ ಮನೆ, ಶಾಲೆ, ರಸ್ತೆ, ಅಂಗನವಾಡಿ, ದೇವಸ್ಥಾನ ಎಲ್ಲವೂ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿದೆ. ಸುಪ್ರೀಂ ಕೋರ್ಟ್ ಮಲೆನಾಡಿಗರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಎಂಟು ಅಂಶಗಳನ್ನು ಒಳಗೊಂಡ ಮನವಿಯನ್ನು ಶಿವಮೊಗ್ಗ ಉಪ ವಿಭಾಗಾಧಿಕಾರಿ ಡಾ. ಮೈತ್ರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು. ಶಿಮುಲ್ ಅಧ್ಯಕ್ಷ ವಿದ್ಯಾಧರ, ಸಹಕಾರ ವೇದಿಕೆಯ ಮುಖಂಡರಾದ ಎಂ.ಶ್ರೀಕಾಂತ್, ಶಚೀಂದ್ರ ಹೆಗ್ಡೆ, ಬಸವಾನಿ ವಿಜಯದೇವ್, ಗೋಣಿ ಮಾಲ್ತೇಶ್, ನಾಗರಾಜ್ ಗೌಡ, ಈಚಲಬೈಲು ಶಶಿಧರ್, ರತ್ನಾಕರ ಎನ್ ಶೆಟ್ಟಿ, ಟಿ.ಎಲ್. ಸುಂದರೇಶ್, ಸುಷ್ಮಾ ಸಂಜಯ್, ಗೀತಾ ಇದ್ದರು.ಕಾಯ್ದೆ ನೆಪದಲ್ಲಿ ನೈಸರ್ಗಿಕ ಜೈಲು: ಜಯಂತ್: ಸ್ಥಳೀಯ ಸಮೀಕ್ಷೆ ನಡೆಸಿ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಜನರ ಕಣ್ಣೊರೆಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ವಾಸ್ತವಾಗಿ ಗ್ರಾಮಸಭೆ, ಪಂಚಾಯ್ತಿ ಸಭೆ, ಗ್ರಾಮ ಅರಣ್ಯ ಸಮಿತಿಯ ಜತೆ ಚರ್ಚಿಸಲಿಲ್ಲ. ಈಗಿರುವ ಅರಣ್ಯ, ವನ್ಯಜೀವಿ, ಅಭಯಾರಣ್ಯ ಕಾಯ್ದೆಗಳಿಂದ ಬದುಕು ದುಸ್ತರವಾಗಿದೆ. ಉದ್ದೇಶಿತ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ಜನರ ಬದುಕು ನೈಸರ್ಗಿಕ ಜೈಲಾಗಿ ಬದಲಾಗಲಿದೆ ಎಂದು ಸಂಚಾಲಕ ಬಿ.ಆರ್. ಜಯಂತ್ ಆತಂಕ ವ್ಯಕ್ತಪಡಿಸಿದರು.