ಚನ್ನಗಿರಿ ಪಟ್ಟಣದ ಪ್ರವಾಸಿ ಮಂದಿರ ಮುಂಭಾಗ ಪಾಳುಬಿದ್ದಿರುವ ಉದ್ಯಾನದಲ್ಲಿ ಕೆಳದಿ ಅರಸರ ಕಾಲದ ಫಿರಂಗಿಯ ಭಗ್ನಗೊಂಡ ನಳಿಕೆಯೊಂದಿದೆ. ಆದರೆ, ಚನ್ನಗಿರಿ ಇತಿಹಾಸದ ಕುರುಹಾಗಿರುವ ಈ ನಳಿಕೆಯ ಸೂಕ್ತ ರಕ್ಷಣೆಯಾಗದೇ ಅನಾಥವಾಗಿ ಬಿದ್ದಿದೆ.
- ಪಟ್ಟಣದ ಕಲ್ಲಿನ ಕೋಟೆ ನಂಟಿರುವ ಇತಿಹಾಸ ಕುರುಹು ರಕ್ಷಣೆ ಮರೆತ ಆಡಳಿತಗಳು । ವಿಶೇಷ ಪೂಜೆ ವಂಚಿತ ಫಿರಂಗಿ ನಳಿಕೆ
- - -ಬಾ.ರಾ.ಮಹೇಶ್, ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿಪಟ್ಟಣದ ಪ್ರವಾಸಿ ಮಂದಿರ ಮುಂಭಾಗ ಪಾಳುಬಿದ್ದಿರುವ ಉದ್ಯಾನದಲ್ಲಿ ಕೆಳದಿ ಅರಸರ ಕಾಲದ ಫಿರಂಗಿಯ ಭಗ್ನಗೊಂಡ ನಳಿಕೆಯೊಂದಿದೆ. ಆದರೆ, ಚನ್ನಗಿರಿ ಇತಿಹಾಸದ ಕುರುಹಾಗಿರುವ ಈ ನಳಿಕೆಯ ಸೂಕ್ತ ರಕ್ಷಣೆಯಾಗದೇ ಅನಾಥವಾಗಿ ಬಿದ್ದಿದೆ.
ಚನ್ನಗಿರಿ ಪಟ್ಟಣದಲ್ಲಿ ಕೆಳದಿ ಅರಸರ ಕಾಲದ ಎರಡು ಸುತ್ತಿನ ಕಲ್ಲಿನ ಕೋಟೆಯಿದೆ. ಈ ಕೋಟೆ ನಿರ್ಮಿಸಿ ಶತ್ರುಗಳನ್ನು ಹಿಮ್ಮೆಟಿಸಲು ಮದ್ದು-ಗುಂಡುಗಳನ್ನು ಬಳಸುತ್ತಿದ್ದರು. ಆಗ ಬಳಕೆಯಾಗಿದ್ದ 4 ಅಡಿ ಉದ್ದದ ಫಿರಂಗಿಯ ನಳಿಕೆ ಈಗ ಮುರಿದ ಸ್ಥಿತಿಯಲ್ಲಿದೆ. ಈ ಫಿರಂಗಿ ನಳಿಕೆಯ ಇತಿಹಾಸ ಅರಿತು 1976ರಲ್ಲಿ ಆಗಿನ ಪುರಸಭೆಯವರು ರಕ್ಷಿಸುವ ಉದ್ದೇಶದಿಂದ ಸುರಕ್ಷಿತವಾಗಿ ತಂದು ಪುರಸಭೆ ಮುಂಭಾಗದಲ್ಲಿ ಫಿರಂಗಿಯ ಗಾಡಿಯಂತೆ ಸಿಮೆಂಟ್‌ನಲ್ಲಿ ನಿರ್ಮಿಸಿ, ನಳಿಕೆಯನ್ನು ಜೋಡಿಸಿ ಸ್ಮಾರಕವನ್ನಾಗಿ ಮಾಡಿದ್ದರು. ಆದರೆ, ಈಗ ಈ ಫಿರಂಗಿ ನಳಿಕೆಯ ಕಾಳಜಿ ಯಾರಿಗೂ ಇಲ್ಲದಂತಾಗಿದೆ.ಳದಿ ರಾಣಿ ಚನ್ನಮ್ಮ ಆಳಿದ ಈ ಚನ್ನಗಿರಿ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೂ ಮೊದಲು ಆ ಸ್ಥಳದಲ್ಲಿದ್ದ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಫಿರಂಗಿ ನಳಿಕೆ ಪ್ರತಿಷ್ಠಾಪಿಸಿ ಎಲ್ಲ ರಾಷ್ಟ್ರೀಯ ಹಬ್ಬಗಳು, ವಿಜಯ ದಶಮಿಯ ಆಯುಧ ಪೂಜೆ ವಿಶೇಷ ದಿನಗಳಂದು ಆಗಿನ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪೂಜೆ ಸಲ್ಲಿಸುತ್ತಿದ್ದರು. ಮಿನಿ ವಿಧಾನಸೌಧ ನಿರ್ಮಾಣ ಸಂದರ್ಭ ಪಟ್ಟಣ ಪಂಚಾಯಿತಿ ಕಟ್ಟಡ ತೆರವುಗೊಳಿಸುವ ವೇಳೆ ಕಟ್ಟಡದ ಮುಂದಿದ್ದ ಫಿರಂಗಿ ನಳಿಕೆಯನ್ನು ಪ್ರವಾಸಿ ಮಂದಿರದ ಕಟ್ಟಡದ ಪಕ್ಕದ ಪೊದೆಯಲ್ಲಿ ಎಸೆಯಲಾಗಿತ್ತು. ಅಂದಿನಿಂದ ಚನ್ನಗಿರಿ ಇತಿಹಾಸದ ಕುರುಹಾಗಿರುವ ಈ ಫಿರಂಗಿ ನಳಿಕೆ ಅನಾಥವಾಗಿ ಬಿದ್ದಿದೆ.
ತಾಲೂಕು ಆಡಳಿತ ಚನ್ನಗಿರಿ ಇತಿಹಾಸ ಕುರುಹಾದ ಫಿರಂಗಿ ನಳಿಕೆ ಸಂರಕ್ಷಣೆ ಬಗ್ಗೆ ನಿರ್ಲಕ್ಷ್ಯ ತಳಿದಿತ್ತು. ಈ ಅವ್ಯವಸ್ಥೆ ಬಗ್ಗೆ 2011ರ ಆಗಸ್ಟ್ 18ರಂದು ಕನ್ನಡಪ್ರಭ ಪತ್ರಿಕೆಯಲ್ಲಿ "ಫಿರಂಗಿಗೆ ಕಾಡುತ್ತಿದೆ ಅನಾಥಪ್ರಜ್ಞೆ " ಎಂಬ ತಲೆಬರಹದಲ್ಲಿ ಪಿರಂಗಿ ನಳಿಕೆಯ ಇತಿಹಾಸ ಸಾರುವ ವಿಷಯ ಕುರಿತಂತೆ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಆಗ ಕನ್ನಡಪ್ರಭದ ವರದಿ ಗಮನಿಸಿದ ತಾಲೂಕು ಆಡಳಿತ, ಲೋಕೋಪಯೋಗಿ ಇಲಾಖೆ ತನ್ನ ಉಸ್ತುವಾರಿಯಲ್ಲಿರುವ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ಉದ್ಯಾನದಲ್ಲಿ ನಳಿಕೆಯನ್ನು ತಂದಿಡಲು ನಿರ್ಧರಿಸಿತ್ತು. ಅಂದಿನ ಪಿಡಬ್ಲ್ಯುಡಿ ಇಲಾಖೆ ಅಭಿಯಂತರ ಬಸವರಾಜಪ್ಪ ಮುಂದಾಳತ್ವದಲ್ಲಿ ಸಿಮೆಂಟ್‌ನಿಂದ ಕಟ್ಟೆ ಕಟ್ಟಿಸಿ ಫಿರಂಗಿ ನಳಿಕೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೆ, ಈಗ ಈ ಸ್ಥಳದಲ್ಲಿ ಕಳೆ ಗಿಡಗಳು ಬೆಳೆದಿವೆ. ಅಸಲಿಗೆ ಉದ್ಯಾನವನ ಅಭಿವೃದ್ಧಿಯೂ ನಿರ್ಲಕ್ಷಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಒಂದೂವರೆ ದಶಕದಿಂದ ಫಿರಂಗಿ ನಳಿಕೆಗೆ ಗೌರವ, ಪೂಜೆ ಸಿಗದೇ ಎಲ್ಲರಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. ಸ್ಮರಣೆ ಯಾರಿಗೂ ಇಲ್ಲವಾಗಿದೆ.ಇತಿಹಾಸ ಸಾರುವಂತಹ ಈ ಫಿರಂಗಿ ನಳಿಕೆಯ ರಕ್ಷಣೆ ಆಗಬೇಕು ಎಂದು ಇಲ್ಲಿನ ಪ್ರಗತಿಪರ ಸಂಘಟನೆಯ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೌ.ಹಾಲೇಶ್, ಉಪಾಧ್ಯಕ್ಷ ಬುಳ್ಳಿ ನಾಗರಾಜ್, ಕಾರ್ಯದರ್ಶಿ ಮಹೇಶ್ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ.
- - -(ಬಾಕ್ಸ್)
* ಫಿರಂಗಿ ನಳಿಕೆಗೆ ಗೌರವ, ಪೂಜೆ ಸಲ್ಲಬೇಕುಚನ್ನಗಿರಿ ಪಟ್ಟಣದಲ್ಲಿ ಎರಡು ಸುತ್ತಿನ ಕಲ್ಲಿನ ಕೋಟೆ ನಿರ್ಮಿಸಿ, ಶತ್ರುಗಳನ್ನು ಸದೆ ಬಡಿದಿದ್ದ ಕೆಳದಿ ರಾಣಿ ಚನ್ನಮ್ಮನ ಶೌರ್ಯ, ಸಾಹಸ ಸ್ಮರಿಸಲು ಇರುವುದು ಇದೊಂದೇ ಫಿರಂಗಿ ನಳಿಕೆ. ಭಗ್ನಗೊಂಡ ಫಿರಂಗಿ ನಳಿಕೆ ಈಗ ಅನಾಥವಾಗಿದೆ. ಇದರ ಸಂರಕ್ಷಣೆ ಜೊತೆಗೆ ಸಾರ್ವಜನಿಕರಿಗೆ ನಿತ್ಯ ಕಾಣಿಸುವಂತೆ ತಾಲೂಕು ಆಡಳಿತದ ಕಚೇರಿಯ ಮುಂದಾಗಲಿ, ಪುರಸಭೆ ಕಚೇರಿಯ ಮುಂದಾಗಲಿ ಪ್ರತಿಷ್ಠಾಪಿಸಬೇಕಿದೆ. ಅಲ್ಲದೇ, ರಾಷ್ಟ್ರೀಯ ಹಬ್ಬಗಳಲ್ಲಿ ಮತ್ತು ಆಯುಧ ಪೂಜೆಯ ಸಂದರ್ಭಗಳಲ್ಲಿ ಚನ್ನಗಿರಿ ಇತಿಹಾಸ ಕುರುಹಾದ ಈ ಫಿರಂಗಿಗೆ ಗೌರವ ಯುತವಾಗಿ ಪೂಜೆ ಸಲ್ಲಿಸಬೇಕು ಎಂದು ಚನ್ನಗಿರಿಯ ಹಿರೇಮಠದ ಡಾ. ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.ಫಿರಂಗಿ ನಳಿಕೆಯನ್ನು ಸೂಕ್ತವಾಗಿ ರಕ್ಷಿಸುವ ಕೆಲಸ ತಾಲೂಕು ಆಡಳಿತವಾಗಲಿ, ಪಟ್ಟಣದ ಆಡಳಿತವನ್ನು ನಡೆಸುವ ಪುರಸಭೆಯಾಗಲಿ ಮಾಡಬೇಕಾದ ಜವಾಬ್ದಾರಿ ಇದೆ. ಕೆಳದಿರಾಣಿ ಚನ್ನಮ್ಮ ತನ್ನ ಆಡಳಿತ ವೇಳೆ ಪುರಾತನ ಹಿರೇಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದರು. ಇಂತಹ ವೀರವನಿತೆಯ ಆಡಳಿತದಲ್ಲಿ ಬಳಸುತ್ತಿದ್ದ ಫಿರಂಗಿಯನ್ನು ಜನತೆಗೆ ಕಾಣದಂತೆ ಪಾಳುಬಿದ್ದ ಉದ್ಯಾನದಲ್ಲಿದೆ. ಇದು ಚನ್ನಗಿರಿ ಇತಿಹಾಸವನ್ನೇ ಮರೆಮಾಚುವಂತಿದೆ. ಕೂಡಲೇ ತಾಲೂಕು ಆಡಳಿತ ಈ ಫಿರಂಗಿ ನಳಿಕೆ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
- - -(ಫೋಟೋಗಳಿವೆ.)