ನಾವು ಕಲಿತ ವಿದ್ಯೆ ಎಂದಿಗೂ ಕೈ ಬಿಡುವುದಿಲ್ಲ: ರವೀಂದ್ರ ವೆಂಕಟರಾಮು

| Published : Sep 23 2024, 01:19 AM IST

ಸಾರಾಂಶ

ಭಾಷೆ, ಸಂಸ್ಕೃತಿ, ಶಿಕ್ಷಣ, ಆರೋಗ್ಯ ಮತ್ತು ಪರಿಸರಕ್ಕೆ ಪೂರಕವಾದ ಸಮಾಜ ಮುಖಿ ಕಾರ್ಯಗಳನ್ನು ಅವಿರತ ಟ್ರಸ್ಟ್ ಮತ್ತು ಅಪ್ಟಿವ್ ಸಂಸ್ಥೆ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಕಳೆದ 1964ರಲ್ಲಿ ನಿರ್ಮಾಣಗೊಂಡಿದ್ದ ಈ ಶಾಲಾ ಕಟ್ಟಡ ಬಹಳ ಶಿಥಿಲಗೊಂಡಿತ್ತು. ನಮ್ಮ ಕುಟುಂಬಸ್ಥರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿನ್ನೆಲೆಯಲ್ಲಿ ಓದಿದ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕೆಂಬ ಮಮತೆ ಅವರಲ್ಲಿತ್ತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಮಕ್ಕಳಿಗೆ ಶಿಕ್ಷಣವೇ ಬಹುದೊಡ್ಡ ಆಸ್ತಿ. ವಿದ್ಯೆ ಯಾರೂ ಕೂಡ ಕದಿಯಲಾರದ ಸಂಪತ್ತು. ಶಿಕ್ಷಣವನ್ನು ಜೀವನವನ್ನಾಗಿಸಿಕೊಂಡರೆ ವಿದ್ಯೆ ಎಂದಿಗೂ ಕೂಡ ಮಕ್ಕಳ ಕೈ ಬಿಡುವುದಿಲ್ಲ ಎಂದು ಬೆಂಗಳೂರಿನ ಅವಿರತ ಟ್ರಸ್ಟ್‌ನ ಸಂಸ್ಥಾಪಕ ಸದಸ್ಯ ರವೀಂದ್ರ ವೆಂಕಟರಾಮು ಹೇಳಿದರು.

ತಾಲೂಕಿನ ದೊಡ್ಡಚಿಕ್ಕನಹಳ್ಳಿ ವಿಶ್ವಮಾನವ ಹಿರಿಯ ವಿದ್ಯಾರ್ಥಿಗಳ ಸಂಘ, ಬೆಂಗಳೂರಿನ ಅವಿರತ ಟ್ರಸ್ಟ್ ಮತ್ತು ಅಪ್ಟಿವ್ ಸಂಸ್ಥೆಯ ಆರ್ಥಿಕ ನೆರವಿನ 25 ಲಕ್ಷ ಹಾಗೂ ಸ್ಥಳೀಯ ಶಾಸಕರ ಅನುದಾನ 5 ಲಕ್ಷ ಸೇರಿ ಒಟ್ಟು 30 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಅತ್ಯಾಧುನಿಕ ರೀತಿಯಲ್ಲಿ ನವೀಕರಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾಷೆ, ಸಂಸ್ಕೃತಿ, ಶಿಕ್ಷಣ, ಆರೋಗ್ಯ ಮತ್ತು ಪರಿಸರಕ್ಕೆ ಪೂರಕವಾದ ಸಮಾಜ ಮುಖಿ ಕಾರ್ಯಗಳನ್ನು ಅವಿರತ ಟ್ರಸ್ಟ್ ಮತ್ತು ಅಪ್ಟಿವ್ ಸಂಸ್ಥೆ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಕಳೆದ 1964ರಲ್ಲಿ ನಿರ್ಮಾಣಗೊಂಡಿದ್ದ ಈ ಶಾಲಾ ಕಟ್ಟಡ ಬಹಳ ಶಿಥಿಲಗೊಂಡಿತ್ತು. ನಮ್ಮ ಕುಟುಂಬಸ್ಥರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿನ್ನೆಲೆಯಲ್ಲಿ ಓದಿದ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕೆಂಬ ಮಮತೆ ಅವರಲ್ಲಿತ್ತು ಎಂದರು.

ಅವಿರತ ಟ್ರಸ್ಟ್ ಮತ್ತು ಅಪ್ಟಿವ್ ಸಂಸ್ಥೆ ಗಳಿಸಿರುವ ಲಾಭಾಂಶದ ಶೇ.2ರಷ್ಟು ಹಣವನ್ನು ಇಂತಹ ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡಿ ಈ ಶಾಲಾ ಕಟ್ಟಡವನ್ನು ಅತ್ಯಾಧುನಿಕ ರೀತಿಯಲ್ಲಿ ನವೀಕರಿಸಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಸರ್ಕಾರಿ ಶಾಲೆ ಈ ಮಟ್ಟಕ್ಕೆ ರೂಪುಗೊಳ್ಳಲು ಟ್ರಸ್ಟ್‌ನ ದೇಣಿ ಮತ್ತು ಮುತುವರ್ಜಿಗಿಂತ ಮುಖ್ಯ ಶಿಕ್ಷಕ ಚೇತನ್‌ಕುಮಾರ್ ಅವರ ಪರಿಶ್ರಮ ಅಪಾರವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ಮಾತನಾಡಿ, ಒಬ್ಬ ಶಿಕ್ಷಕ ಅಥವಾ ಪೋಷಕರು ಮನಸ್ಸು ಮಾಡಿದರೆ ಏನನ್ನಾದರೂ ಮಾಡಬಹುದೆಂಬುದಕ್ಕೆ ಈ ಗ್ರಾಮಕ್ಕಿಂತ ದೊಡ್ಡ ಉದಾಹರಣೆ ಕೊಡಲು ಸಾಧ್ಯವಿಲ್ಲ. ಗ್ರಾಮದ ಸರ್ಕಾರಿ ಶಾಲೆಯನ್ನು ಇಷ್ಟೊಂದು ಸುಸಜ್ಜಿತವಾಗಿ ನವೀಕರಿಸಿ ಮಕ್ಕಳು ಮತ್ತು ಪೋಷಕರನ್ನು ಸೆಳೆಯುತ್ತಿರುವುದು ಬಹಳ ಉತ್ತಮವಾದ ಕೆಲಸ ಎಂದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಮಾತನಾಡಿದರು. ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಡಿ.ಎನ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಅವಿರತ ಟ್ರಸ್ಟ್‌ನ ಸಂಸ್ಥಾಪಕ ವೆಂಕಟರಾಮು, ಅಪ್ಟಿವ್ ಸಂಸ್ಥೆ ರೀಷ್ಮಾ, ಚೈತ್ರ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಜಯಸ್ವಾಮಿ, ಸಿಆರ್‌ಪಿಗಳಾದ ಸುರೇಶ್, ಕೆಂಪೇಗೌಡ, ಉಗ್ರೇಗೌಡ, ಬಿಆರ್‌ಪಿ ವಿರೂಪಾಕ್ಷ, ಇಸಿಒಗಳಾದ ಮಂಜುನಾಥ್, ಎನ್.ಡಿ.ಶಿವಕುಮಾರ್, ಶಾಲೆಯ ಮುಖ್ಯಶಿಕ್ಷಕ ಚೇತನ್‌ಕುಮಾರ್, ಗ್ರಾಪಂ ಸದಸ್ಯ ಡಿ.ಆರ್.ರಾಮಚಂದ್ರು, ಮನ್‌ಮುಲ್ ಮಾಜಿ ನಿರ್ದೇಶಕ ಡಿ.ಟಿ.ಕೃಷ್ಣೇಗೌಡ, ಶಿಕ್ಷಕಿ ಕೆ.ಎನ್.ವರದೇವಿ, ಮುಖಂಡ ಡಿ.ಕೆ.ರಾಜೇಗೌಡ ಸೇರಿದಂತೆ ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರು ಮತ್ತು ಗ್ರಾಮಸ್ಥರು ಇದ್ದರು.