ಮತ್ತೆ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ

| Published : Aug 28 2024, 12:49 AM IST

ಸಾರಾಂಶ

ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಬ್ಬರ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಮತ್ತೆ ಉಕ್ಕಿ ಹರಿಯುತ್ತಿದೆ.ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಗಳ ಒಳ ಹರಿವು ಹೆಚ್ಚಾಗಿದ್ದು, ಚಿಕ್ಕೋಡಿ ಉಪವಿಭಾಗದ ಕೃಷ್ಣಾ ನದಿಯ ಕೆಳಹಂತದ ಆರು ಸೇತುವೆ ಜಲಾವೃತಗೊಂಡಿವೆ. ಕಳೆದ 20 ದಿನಗಳ ಹಿಂದೆಯಷ್ಟೇ ನಿರಂತರ ಮಳೆಯಿಂದ ಉಂಟಾಗಿದ್ದ ಕೃಷ್ಣಾ ನದಿ ಭಾಗದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದಲ್ಲದೆ ಸಾವಿರಾರು ಜನ ನಿರಾಶ್ರಿತರ ಶಿಬಿರ ಸೇರಿದ್ದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಬ್ಬರ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಮತ್ತೆ ಉಕ್ಕಿ ಹರಿಯುತ್ತಿದೆ.

ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಗಳ ಒಳ ಹರಿವು ಹೆಚ್ಚಾಗಿದ್ದು, ಚಿಕ್ಕೋಡಿ ಉಪವಿಭಾಗದ ಕೃಷ್ಣಾ ನದಿಯ ಕೆಳಹಂತದ ಆರು ಸೇತುವೆ ಜಲಾವೃತಗೊಂಡಿವೆ. ಕಳೆದ 20 ದಿನಗಳ ಹಿಂದೆಯಷ್ಟೇ ನಿರಂತರ ಮಳೆಯಿಂದ ಉಂಟಾಗಿದ್ದ ಕೃಷ್ಣಾ ನದಿ ಭಾಗದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದಲ್ಲದೆ ಸಾವಿರಾರು ಜನ ನಿರಾಶ್ರಿತರ ಶಿಬಿರ ಸೇರಿದ್ದರು.

ಮಳೆ ಆರ್ಭಟ ಜೋರಾದ ಹಿನ್ನಲೆಯಲ್ಲಿ ವೇದಗಂಗಾ ನದಿಯ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ ಸೇತುವೆ ಜಲಾವೃತಗೊಂಡಿವೆ. ದೂದಗಂಗಾ ನದಿಯ ಕಾರದಗಾ-ಬೋಜ್, ಬೋಜವಾಡಿ-ಕುನ್ನೂರ, ಬೋಜ್-ಕುನ್ನೂರ, ಮಲ್ಲಿಕವಾಡ-ದತ್ತವಾಡ ಸೇತುವೆ ಮುಳುಗಡೆಯಾಗಿವೆ‌. ಇನ್ನೂ ಸರಸಿಂಹವಾಡಿಯ ದತ್ತ ಮಂದಿರ ಜಲಾವೃತಗೊಂಡಿದೆ.ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿಯೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಮಲಪ್ರಬಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಮಲಪ್ರಭಾ ಜಲಾಶಯದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದಾಗಿ ಮಲಪ್ರಭಾ ನದಿತೀರದ ಗ್ರಾಮಸ್ಥರಿಗೆ ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.