ಕೆರೆಗೆ ನೀರು ಹರಿಸುವ ಸಮಸ್ಯೆ ಇತ್ತು, ಸಮಸ್ಯೆಗೆ ಬಗೆಹರಿಸಿ ನೀರು ಹರಿಸಲಾಗಿದೆ, ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೆರೆಗೆ ನೀರು ಹರಿಸುವ ಸಮಸ್ಯೆ ಇತ್ತು, ಸಮಸ್ಯೆಗೆ ಬಗೆಹರಿಸಿ ನೀರು ಹರಿಸಲಾಗಿದೆ, ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದರು.ತಾಲೂಕಿನ ಹುತ್ತೂರು ಪಂಪ್ ಹೌಸ್‌ನಲ್ಲಿ ವಡ್ಡಗೆರೆ ಕೆರೆಗೆ ನೀರು ಹರಿಸುವ ಮೋಟರ್ ಸ್ವೀಚ್ ಆನ್ ಮಾಡಿ ಮಾತನಾಡಿ, ಪ್ರತಿಭಟನಾ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದ ಭರವಸೆಯಂತೆ ಕೆರೆಗೆ ನೀರು ಹರಿಸಲು ಚಾಲನೆ ಕೊಟ್ಟಿದ್ದೇನೆ. ಆಲಂಬೂರು 4ನೇ ಹಂತದ ಕೆರೆಗಳಿಗೆ ನೀರು ತುಂಬಿಸಲು ಇನ್ನೂ 100ಕ್ಕೂ ಹೆಚ್ಚು ದಿನಗಳ ಕಾಲಾವಕಾಶ ಇದೆ. ಹೂತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಹೋಗುತ್ತಿದೆ. ಮುಂದಿನ ಕೆರೆಗಳಿಗೂ ನೀರು ಹರಿದು ಸಾಗಲಿದೆ ಎಂದು ಸ್ಪಷ್ಟಪಡಿಸಿದರು.
ಕೆರಹಳ್ಳಿ ಪಂಪ್ ಹೌಸ್ ನಲ್ಲಿ ನೀರೆತ್ತುವ ಯಂತ್ರಗಳು ದುರಸ್ತಿಗೆ ಬಂದ ಕಾರಣ ನೀರು ತುಂಬಿಸಲು ವಿಳಂಭವಾಗಿತ್ತು. ಕಳೆದ 15 ದಿನಗಳ ಹಿಂದೆಯೇ ಯಂತ್ರಗಳು ದುರಸ್ತಿಗೊಂಡಿದ್ದವು ಯಂತ್ರಗಳ ಟ್ರಯಲ್ ಮಾಡಿದ ಬಳಿಕ ಸಾಧಕ, ಬಾಧಕ ನೋಡಿ ಚಾಲನೆಯಾಗಿದೆ ಎಂದರು.ಆಲಂಬೂರು 4 ನೇ ಹಂತದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಯಾವ ಸಮಸ್ಯೆ ಆಗದಂತೆ ಕೆರೆಗೆ ನೀರು ಹರಿಸಲು ಎಲ್ಲಾ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಶಾಸಕರೊಂದಿಗೆ ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷರಾದ ಕಬ್ಬಹಳ್ಳಿ ಮಹೇಶ, ಪಿ.ಮಹದೇವಪ್ಪ, ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಮಡಿವಾಳಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಶಶಿಧರ್ ಪಿ ದೀಪು, ಮುಖಂಡರಾದ ವಡ್ಡಗೆರೆ ನಾಗಪ್ಪ, ಅಂಕಹಳ್ಳಿ ಅಭಿಷೇಕ್, ಆದರ್ಶ ಸೇರಿದಂತೆ ಅಧಿಕಾರಿಗಳಿದ್ದರು.ಬಿಜೆಪಿ ನನ್ನ ವಯಕ್ತಿಕ ಟೀಕೆಗೆ ಪ್ರತಿಭಟಿಸಿದ್ರು:
ಬಿಜೆಪಿಗರು ಪ್ರತಿಭಟನೆ ಕೆರೆ ನೀರಿಗಾಗಿ ಮಾಡಲಿ, ನನ್ನ ಮೇಲೆ ದಿಕ್ಕಾರ ಕೂಗಲಿ ಪರವಾಗಿಲ್ಲ. ಆದರೆ ನೀರಿಗಾಗಿ ನಡೆಸಿದ ಪ್ರತಿಭಟನೆಯಲ್ಲಿ ನನ್ನ ವಯಕ್ತಿಕ ಟೀಕೆಗೆ ಮಾಡಿದ್ದಾರೆ. ಇದನ್ನು ಕ್ಷೇತ್ರದ ಜನತೆಗೆ ಅರ್ಥವಾಗಿದೆ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹಾಗೂ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.ಬಿಜೆಪಿ ಜನರು ಹಾಗೂ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ವಿಪಕ್ಷಗಳಿಗೆ ನನ್ನ ಮೇಲೆ ಅಪಪ್ರಚಾರ ಹಾಗೂ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಗರ ಅಪಪ್ರಚಾರ ಹಾಗೂ ಪ್ರತಿಭಟನೆಗೆ ಅಡಿಪಾಯ ಇಲ್ಲ. ನನ್ನ ಮತ್ತು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಸತ್ಯಾಂಶವಿಲ್ಲದ ಆರೋಪ, ಟೀಕೆ ಮಾಡುತ್ತಿದ್ದಾರೆ. ಬಿಜೆಪಿಗರ ಪ್ರತಿಭಟನೆ ಮಾಡಿದಾಕ್ಷಣ ಕೆರೆಗೆ ನೀರು ಬಿಟ್ಟಿಲ್ಲ. ಯಂತ್ರಗಳು ದುರಸ್ತಿಯಾದ ಬಳಿಕ ನೀರು ಬಿಡಲಾಗಿದೆ ಎಂದರು.
ಬಿಜೆಪಿಗರಿಗೆ ನನ್ನ ಮೇಲೆ ಪ್ರತಿಭಟನೆ, ಅಪಪ್ರಚಾರ ಕ್ಷೇತ್ರದ ಜನತೆಗೆ ಅರ್ಥ ಮಾಡಿಕೊಂಡರೆ ಬಿಜೆಪಿಗರ ನಿಜ ಬಣ್ಣ ಬಯಲಾಗುತ್ತದೆ. ಕೆರೆಗೆ ನೀರು ಬಿಡಿಸುವುದರಲ್ಲಿ ರಾಜಕೀಯ ದುರುದ್ದೇಶವೂ ಇಲ್ಲ, ರಾಜಕೀಯ ಲಾಭವೂ ಇಲ್ಲ ಎಂದರಲ್ಲದೆ, ನನ್ನ ಭರವಸೆ ಮೇರೆಗೆ ಪ್ರತಿಭಟನೆ ಕೈ ಬಿಟ್ಟ ರೈತರು ಹಾಗು ರೈತಸಂಘಕ್ಕೆ ಧನ್ಯವಾದ ಸಲ್ಲಿಸಿದರು.