ಸಾರಾಂಶ
ಅಳ್ನಾವರ:
ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸಮೀಪದ ಹುಲಿಕೇರಿ ಇಂದಿರಮ್ಮನ ಕೆರೆ ನೀರಿನ ಪ್ರಮಾಣ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಕೆರೆಯ ಕಟ್ಟೆಯ ನವೀಕರಣ ನಂತರ ಮೊದಲ ಬಾರಿಗೆ ಕಳೆದ ಎರಡು ದಿನಗಳ ಹಿಂದೆಯಷ್ಟೆ ಕೆರೆಯು ಕೋಡಿ ಹರಿದಿತ್ತು. ಎರಡು ದಿನಗಳಿಂದ ಮಳೆ ಪ್ರಮಾಣದಲ್ಲಿಯೂ ಕೊಂಚ ಇಳಿಮುಖವಾಗಿದ್ದು ಕೆರೆಯ ಎರಡು ಕಾಲುವೆ ಮುಖಾಂತರ ನೀರನ್ನು ಹರಿಬಿಡಲಾಗಿತ್ತು. ಈ ಮೂಲಕ ಕೆರೆಯಲ್ಲಿನ ನೀರಿನ ಪ್ರಮಾಣ ಇಳಿಕೆಯಾಗಿತ್ತು. ಆದರೆ, ಬುಧವಾರ ರಾತ್ರಿ ಸುರಿದ ಮಳೆಗೆ ಕೆರೆಯ ಹಿನ್ನೀರು ಅಧಿಕವಾಗಿದ್ದು, ಕೆರೆ ಕೋಡಿಯ 2.5 ಅಡಿ ಎತ್ತರದಷ್ಟು ನೀರು ಹೊರಹೋಗುತ್ತಿದೆ.
ಜತೆಗೆ ಬೆಳಗಾವಿ ರಸ್ತೆಗೆ ಸಂಪರ್ಕ ಕಲ್ಪಿಸುವ ಹುಲಿಕೇರಿ ರಸ್ತೆಯಲ್ಲಿರುವ ಸೇತುವೆಯು ಮುಳುಗಡೆಯಾಗಿದೆ. ಕಳೆದ 2020ರಲ್ಲಿ ಅತಿವೃಷ್ಠಿಯಿಂದ ಈ ಸೇತುವೆಯೂ ಕೊಚ್ಚಿಕೊಂಡು ಹೋಗಿದ್ದು ಮರು ನಿರ್ಮಾಣ ಮಾಡಲಾಗಿತ್ತು. ಆದರೆ, ಇದೀಗ ನೀರಿನ ಸೆಳೆತ ಅಧಿಕವಾಗಿದ್ದರಿಂದ ಸೇತುವೆಯ ಎರಡು ಬದಿಯಲ್ಲಿ ನೀರು ನುಗ್ಗಿ ರಸ್ತೆ ಸಂಚಾರ ಬಂದಾಗಿದೆ.ಸೋಮವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು ರೈತರು ಹೊಲದಲ್ಲಿಯೇ ಜಾನುವಾರು ಕಟ್ಟಿ ಹಾಕುತ್ತಿದ್ದರು. ಆದರೆ ಕೆರೆಯ ಹೆಚ್ಚುವರಿ ನೀರು ಹಳ್ಳದ ಮುಖಾಂತರ ಹರಿದು ಹೋಗುತ್ತಿದ್ದರಿಂದ ರೈತರು ತಮ್ಮ ಹೊಲಗಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಸೆಳುವು ಅಧಿಕವಾಗಿ ನೀರಿನ ರಭಸ ಅಧಿಕವಾಗುತ್ತಿದೆ. ಇಷ್ಟಾಗಿಯೂ ಮೀನುಗಾರರು ಮಾತ್ರ ಜೀವದ ಹಂಗಿಲ್ಲದೆ ಕೆರೆಯಲ್ಲಿ ಮೀನು ಹಿಡಿಯುವುದು ಕಂಡುಬಂತು.
ಭಯದ ವಾತಾವರಣ..2109ರಲ್ಲಿ ಅತಿವೃಷ್ಟಿಯಿಂದಾಗಿ ತಾಲೂಕಿನಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿತ್ತು. ಅದರಲ್ಲೂ ಅಳ್ನಾವರದ ಡೌಗಿ ಹಳ್ಳದ ದಂಡೆಯ ಮೇಲಿರುವ ತಿಲಕ ನಗರ, ಅಮೃತನಗರ, ದೇಸಾಯಿಚಾಳಗಳು ಮುಳುಗಡೆಯಾಗಿದ್ದವು. ಆದರೆ, ಬುಧವಾರ ಸುರಿದ ಮಳೆಗೆ ಡೌಗಿಹಳ್ಳದ ನೀರು ಅಧಿಕವಾಗಿ ಹರಿಯುತ್ತಿದ್ದು ಜನರಲ್ಲಿ ಭಯವನ್ನುಂಟು ಮಾಡಿದೆ.