ಸ್ವಾಮಿಗಳಾದವರಿಗೆ ನಿಂದೆ, ಅಪನಿಂದನೆಗಳು ಪರಿಗಣನೆಗೆ ಒಳಗಾಗದೆ ಎಲ್ಲವನ್ನು ಪ್ರಸಾದ ರೀತಿಯಲ್ಲಿ ಸ್ವೀಕರಿಸಿ ಸಮಾಜದ ಬೆಳವಣಿಗೆ ಮಾತ್ರ ಗಮನ ಕೊಡಬೇಕು.

ಮುಂಡರಗಿ: ಲಿಂಗಾಯೇತರನ್ನು ಮುಂಡರಗಿ ತೋಂಟದಾರ್ಯ ಮಠಕ್ಕೆ ಪೀಠಾಧಿಪತಿಗಳನ್ನಾಗಿ ನೇಮಿಸಿದ ಕೀರ್ತಿ ಗದುಗಿನ ಲಿಂ. ಡಾ. ತೋಂಟದ ಸಿದ್ದಲಿಂಗ ಸ್ವಾಮಿಗಳಿಗೆ ಸಲ್ಲತ್ತದೆ. ಇದು ಶ್ರೀಗಳ ನಿಜವಾದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ ಎಂದು ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ಎಡೆಯೂರು ತೋಂಟದ ಸಿದ್ದಲಿಂಗೇಶ್ವರರ ಚರಿತಾಮೃತ ಪ್ರವಚನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ. ವೆಂಕಟೇಶಕುಮಾರ ಅವರ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾಮಿಗಳಾದವರಿಗೆ ನಿಂದೆ, ಅಪನಿಂದನೆಗಳು ಪರಿಗಣನೆಗೆ ಒಳಗಾಗದೆ ಎಲ್ಲವನ್ನು ಪ್ರಸಾದ ರೀತಿಯಲ್ಲಿ ಸ್ವೀಕರಿಸಿ ಸಮಾಜದ ಬೆಳವಣಿಗೆ ಮಾತ್ರ ಗಮನ ಕೊಡಬೇಕು. ತನು, ಮನ ಶುದ್ಧವಾಗಿದ್ದರೆ ಮಾತ್ರ ಮತ್ತೊಬ್ಬರಿಗೆ ಏನನ್ನಾದರೂ ಹೇಳುವ ನೈತಿಕತೆ ಬರುತ್ತದೆ. ಕೇವಲ ಹಣ ಇದ್ದರೆ ಸಾಲದು ಎಂದ ಅವರು, ಲಿಂ. ಶ್ರೀಗಳ ಅಗಲುವಿಕೆಯಿಂದಾಗಿ ಕಲಾವಿದರು, ನಾಟಕಕಾರರು ತಬ್ಬಲಿಯಾಗಿದ್ದಾರೆ. ಕಲೆ, ಸಂಗೀತ, ನಾಟಕಕ್ಕೆ ಜಾತಿ ಸೋಂಕು ತಗುಲಬಾರದು ಮತ್ತು ಮಡಿವಂತಿಕೆ ದೂರವಾಗಬೇಕು. ಹೀಗಾದಾಗ ಮಾತ್ರ ಕಲೆ, ಸಂಸ್ಕೃತಿ ಉಳಿಯುತ್ತದೆ. ಕಲಾವಿದರಿಗೆ ಬೆಲೆ ಬರುತ್ತದೆ ಎಂದರು.

ಸಂಗೀತಗಾರ ಎಂ. ವೆಂಕಟೇಶಕುಮಾರ ತೋಂಟದಾರ್ಯ ಮಠದ ಕಲೆ ಸಂಪ್ರದಾಯ ಇತರ ಸಾಮಾಜಿಕ ಕೆಲಸಗಳ ಕುರಿತು ಸ್ಮರಿಸಿಕೊಂಡರು. ಪ್ರವಚನಕಾರ ಶರಣಬಸವ ದೇವರು ಲಿಂ. ತೋಂಟದ ಸಿದ್ದಲಿಂಗ ಸ್ವಾಮಿಗಳ ಸತ್ಕಾರ್ಯ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಪ್ರವಚನ ಸಮಿತಿ ಅಧ್ಯಕ್ಷ ಸಿ.ಕೆ. ಗಣಪ್ಪನವರ, ಉಪಾಧ್ಯಕ್ಷ ಬಸಯ್ಯ ಗಿಂಡಿಮಠ, ಶರಣಪ್ಪ ಕುಬಸದ, ಸುರೇಶ ಬಣಕಾರ, ಶಿವು ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ಸಮನ್ವಯ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ಪವನ ಚೋಪ್ರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ನಿರೂಪಿಸಿದರು.