ಸಿಖ್‌ ಸಮುದಾಯದ ಪರಂಪರೆ ಇತರರಿಗೆ ಮಾದರಿ

| Published : Dec 28 2023, 01:45 AM IST

ಸಾರಾಂಶ

ಸಿಖ್‌ ಸಮುದಾಯದ ಇತಿಹಾಸ ರೋಚಕವಾಗಿದ್ದು, ಇವರ ಪರಂಪರೆ ಎಲ್ಲರಿಗೂ ಮಾದರಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ರಾಷ್ಟ್ರೀಯ ವೀರಬಾಲ ದಿವಸ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೋಶಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಧರ್ಮ, ಸಂಸ್ಕೃತಿಯ ರಕ್ಷಣೆಗೆ ತ್ಯಾಗ, ಬಲಿದಾನ ಮಾಡಿರುವ ಸಿಖ್‌ ಸಮುದಾಯದ ಇತಿಹಾಸ ರೋಚಕವಾಗಿದ್ದು, ಇವರ ಪರಂಪರೆ ಎಲ್ಲರಿಗೂ ಮಾದರಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಂಗಳವಾರ ಸಂಜೆ ದೇಶಪಾಂಡೆ ನಗರದಲ್ಲಿರುವ ಗುರುದ್ವಾರದ ಗುರುಸಿಂಗ್‌ ಸಭಾಭವನದಲ್ಲಿ ಸಾಹಿಬ್ ದಾದಾ ಬಾಬಾ ಜೊರಾವರ್ ಸಿಂಗ್ ಹಾಗೂ ಫತೇಹ್ ಸಿಂಗ್ ಸಾಹೇಬ್ ಅವರ ನೆನಪಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೀರಬಾಲ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಖ್‌ ಧರ್ಮ ಗುರು ಗೋವಿಂದ ಸಿಂಗ್ ಅವರ ಪುತ್ರರಾದ ಜೊರಾವರ್‌ ಸಿಂಗ್ ಮತ್ತು ಫತೇಹ್‌ ಸಿಂಗ್ ‌ಅವರು ‌‌ಹುತಾತ್ಮರಾದ ದಿನವನ್ನು 2022 ರಿಂದ ವೀರಬಾಲ ದಿವಸ ಎಂದು ಆಚರಿಸಲಾಗುತ್ತಿದೆ. ಅವರು ಸಂಸ್ಕೃತಿ ರಕ್ಷಿಸಲು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಜೀವನ ಮತ್ತು ಮೊಘಲರ ಸೇನೆಯಿಂದ ಹೇಗೆ ಕ್ರೂರವಾಗಿ ಕೊಲ್ಲಲ್ಪಟ್ಟರು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಮಹಾರಾಷ್ಟ್ರ ಹಾಗೂ ವಿವಿಧ ರಾಜ್ಯದಲ್ಲಿ ಗುರುನಾನಕ್ ಜಯಂತಿ ಮತ್ತು ಗುರು ಗೋವಿಂದ ಸಿಂಗ್ ಜಯಂತಿ ದಿನದಂದು ಸರ್ಕಾರಿ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿಯೂ ರಜೆ ಘೋಷಿಸುವಂತೆ ಸಮುದಾಯದವರು ವಿನಂತಿಸಿದ್ದಾರೆ. ಬಾಲವೀರ ದಿವಸ ಬದಲಿಗೆ ಸಾಹೇಬ್ ಜಾದೆ ಸಾದತ್ ದಿವಸ ಎಂದು ಘೋಷಣೆ ಮಾಡುವಂತೆಯೂ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸಚಿವರ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಬಿಜೆಪಿ ಮುಖಂಡ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಖ್ ಸಮುದಾಯದ ಮುಖಂಡರಾದ ಜಸ್ಮಿಲ್ ಸಿಂಗ್, ಜಸ್ವೀರ್ ಸಿಂಗ್, ಪ್ರಿತಂ ಸಿಂಗ್, ಹರಪಾಲ ಸಿಂಗ್, ಇಕ್ಬಾಲ್ ಸಿಂಗ್, ರಾಜೇಂದ್ರ ಸಿಂಗ್ ಸೇರಿದಂತೆ ಹಲವರಿದ್ದರು.