ದೇಶ ವಿಭಜಿಸುವ ದುರುಳರ ಮಟ್ಟಹಾಕಬೇಕು: ಸಂಸದ ಪ್ರಜ್ವಲ್ ರೇವಣ್ಣ

| Published : Apr 05 2024, 01:05 AM IST

ದೇಶ ವಿಭಜಿಸುವ ದುರುಳರ ಮಟ್ಟಹಾಕಬೇಕು: ಸಂಸದ ಪ್ರಜ್ವಲ್ ರೇವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾರ್ಥ ಹಿತಾಸಕ್ತಿಗಾಗಿ ದೇಶ ವಿಭಜನೆ ಹುನ್ನಾರ ನಡೆಸಿರುವ ದುಷ್ಟ ಕೂಟದ ದುರುಳ ಶಕ್ತಿಗಳನ್ನು ಮಟ್ಟಹಾಕಲು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಹೋರಾಟ ನಡೆಸೋಣ ಎಂದು ಸಂಸದ ಪ್ರಜ್ವಲ್ ರೇವಣ್ಣ ಕರೆ ನೀಡಿದರು. ಅರಸೀಕೆರೆಯಲ್ಲಿ ಹಮ್ಮಿಕೊಂಡ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸ್ವಾರ್ಥ ಹಿತಾಸಕ್ತಿಗಾಗಿ ದೇಶ ವಿಭಜನೆ ಹುನ್ನಾರ ನಡೆಸಿರುವ ದುಷ್ಟ ಕೂಟದ ದುರುಳ ಶಕ್ತಿಗಳನ್ನು ಮಟ್ಟಹಾಕಲು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಹೋರಾಟ ನಡೆಸೋಣ ಎಂದು ಸಂಸದ ಪ್ರಜ್ವಲ್ ರೇವಣ್ಣ ಕರೆ ನೀಡಿದರು.

ನಗರದ ಸುಭಾಷ ನಗರ ಬಡಾವಣೆಯ ಶಾಂತವೀರಮ್ಮ ಪರಮೇಶ್ವರಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ‘ಭಾರತದ ಅಸ್ಮಿತೆಯನ್ನು ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ಪರಿಚಯಿಸಿದ್ದು ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದಾರೆ. ಆದ್ದರಿಂದಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎನ್‌ಡಿಎ ಬೆಂಬಲಿಸಲು ತೀರ್ಮಾನ ಮಾಡಿದ್ದಾರೆ. ತೆರಿಗೆ ಹಣ ನೀಡಿಲ್ಲ ಎನ್ನುವ ಆಧಾರ ರಹಿತ ವಾದಗಳನ್ನು ಮುಂದಿಡುತ್ತಿರುವ ಕೆಲವರು ತಮ್ಮ ಸ್ವಾರ್ಥಕ್ಕಾಗಿ ದೇಶ ವಿಭಜನೆಯ ಮಾತು ಆಡುತ್ತಿರುವುದು ಖಂಡನೀಯ’ ಎಂದು ಬೇಸರ ವ್ಯಕ್ತಪಡಿಸಿದರು.

ಭವಿಷ್ಯದ ಭವ್ಯ ಭಾರತದ ಕನಸಿಗೆ ಕೊಡಲಿ ಏಟು ನೀಡಲು ಹೊರಟಿರುವ ದುಷ್ಟ ಶಕ್ತಿಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೃಪೆಯಿಂದ ಬೆಳದವರು ಎಲ್ಲವನ್ನು ಮರೆತು ಮನಬಂದಂತೆ ಮಾತನಾಡುತ್ತಿದ್ದು ಕಾಲವೇ ಅವರಿಗೆ ಉತ್ತರಿಸಲಿದೆ. ದೇಶದ ಸಮಗ್ರತೆ ಹಾಗೂ ಐಕ್ಯತೆಗಾಗಿ ಉಭಯ ಪಕ್ಷಗಳ ಮುಖಂಡರು ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ಮಾತನಾಡಿ, ಲೋಕಸಭಾ ಚುನಾವಣೆಯನ್ನು ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹಬ್ಬದಂತೆ ಪರಿಗಣಿಸಿ ಗೆಲುವಿಗೆ ಪಣ ತೊಡಬೇಕು. ಆಗ ಮಾತ್ರವೇ ರಾಜಕೀಯ ಎದುರಾಳಿಗಳನ್ನು ಸಮರ್ಥವಾಗಿ ಮಣಿಸಲು ಸಾಧ್ಯ ಎಂದು ಹೇಳಿದರು.

ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜಕೀಯ ದೈತ್ಯಶಕ್ತಿಯಾಗಿದ್ದಾರೆ. ಮನೆ ಮನೆಗೆ ಗಂಗೆ, ಮುದ್ರಾ ಯೋಜನೆ ಸೇರಿ ಲೆಕ್ಕವಿಲ್ಲದಷ್ಟು ಜನಪರ ಕೆಲಸ ಮಾಡಿರುವುದು ಜಗಜ್ಜಾಹೀರಾಗಿದೆ. ಉಭಯ ನಾಯಕರಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಪ್ರಜ್ವಲ್ ರೇವಣ್ಣ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆಲ್ಲಿಸೋಣ ಎಂದರು.

ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಸ್.ಲಿಂಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬಿಜೆಪಿ ಮುಖಂಡ ಜಿವಿಟಿ ಬಸವರಾಜ್ ಮಾತನಾಡಿದರು. ಮಾಜಿ ಶಾಸಕ ಎ.ಎಸ್.ಬಸವರಾಜು, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಬಿಜೆಪಿ ಗ್ರಾಮಾಂತರ ಮಂಡಲಾಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ನಗರಾಧ್ಯಕ್ಷ ಪುರುಷೋತ್ತಮ್, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಜಿಲ್ಲಾ ವಕ್ಪ್‌ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್ ಇತರರಿದ್ದರು.

ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಮಂಗಳವಾರ ಸಂಜೆ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದರು.

ಹೊಸೂರು ಗಂಗಾಧರ್, ದಂದೂರು ರವಿ, ಹರ್ಷವರ್ಧನ್ ರಾಜ್, ನಗರಸಭೆ ಸದಸ್ಯರಾದ ಸಿ.ಗಿರೀಶ್,ಜಾಕೀರ್ ಹುಸೇನ್, ಈಶ್ವರಪ್ಪ, ರಮೇಶ್ ನಾಯ್ಡು, ಶಿವನ್‌ರಾಜ್, ಕೆಂಕೆರೆ ಕೇಶವ್, ಕುಡುಕುಂದಿ ಕುಮಾರ್ ಇದ್ದರು.

ಅರಸೀಕೆರೆಯ ಸುಭಾಷ ನಗರ ಬಡಾವಣೆಯಲ್ಲಿರುವ ಶಾಂತವೀರಮ್ಮ ಪರಮೇಶ್ವರಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿದರು.