ಕನಕದಾಸರು ಮತ್ತು ಪುರಂದರದಾಸರು ಸಮಕಾಲೀನರಾಗಿದ್ದು, ಅಂದಿನ ಕಾಲದಲ್ಲಿ ಇಬ್ಬರನ್ನೂ ಅಶ್ವಿನಿ ನಕ್ಷತ್ರಗಳೆಂದು ಕರೆಯಲಾಗುತ್ತಿತ್ತು. ತಮ್ಮ ಸಾಹಿತ್ಯ ಮತ್ತು ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಅಸಮಾನತೆ ಹಾಗೂ ಜಾತಿಭೇದಗಳ ವಿರುದ್ಧ ಜನಜಾಗೃತಿ ಮೂಡಿಸಿದ ಕನಕದಾಸರು, ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಭಕ್ತಿ, ನೈತಿಕತೆ, ಸಮಾನತೆ ಹಾಗೂ ಜೀವನ ಮೌಲ್ಯಗಳನ್ನು ಬೋಧಿಸಿದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ಸಂತ ಭಕ್ತಶ್ರೇಷ್ಠ ಕನಕದಾಸರು ತಮ್ಮ ಬದುಕು, ಬರಹ ಹಾಗೂ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕರು. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ತಹಶೀಲ್ದಾರ್ ಸ್ಮಿತಾ ರಾಮು ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಂತ ಭಕ್ತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಕದಾಸರು ಮತ್ತು ಪುರಂದರದಾಸರು ಸಮಕಾಲೀನರಾಗಿದ್ದು, ಅಂದಿನ ಕಾಲದಲ್ಲಿ ಇಬ್ಬರನ್ನೂ ಅಶ್ವಿನಿ ನಕ್ಷತ್ರಗಳೆಂದು ಕರೆಯಲಾಗುತ್ತಿತ್ತು. ತಮ್ಮ ಸಾಹಿತ್ಯ ಮತ್ತು ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಅಸಮಾನತೆ ಹಾಗೂ ಜಾತಿಭೇದಗಳ ವಿರುದ್ಧ ಜನಜಾಗೃತಿ ಮೂಡಿಸಿದ ಕನಕದಾಸರು, ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಭಕ್ತಿ, ನೈತಿಕತೆ, ಸಮಾನತೆ ಹಾಗೂ ಜೀವನ ಮೌಲ್ಯಗಳನ್ನು ಬೋಧಿಸಿದರು. ಅವರ ಕೀರ್ತನೆಗಳು ಕೇವಲ ಭಕ್ತಿಗೀತೆಗಳಲ್ಲ, ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಚಿಂತನೆಗಳಾಗಿವೆ. ಇಂದಿನ ಯುವಜನತೆ ಅವರ ಜೀವನ ಚರಿತ್ರೆ ಮತ್ತು ವಿಚಾರಧಾರೆಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಭಾಷಣಕಾರ ರಮೇಶ್ ಮಾತನಾಡಿ, ಮಹನೀಯರ ಜಯಂತಿ ಆಚರಣೆಗಳು ಸಮಾಜದ ಜನರ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಅವರ ಆದರ್ಶಮಯ ಬದುಕು, ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವುದರ ಜತೆಗೆ, ಅವರ ಜೀವನ ನಮಗೆಲ್ಲ ಮಾರ್ಗದರ್ಶನವಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಜಯಂತಿ ಆಚರಿಸುತ್ತಿದೆ ಎಂದರು.

ಮಹನೀಯರ ತತ್ವಾದರ್ಶಗಳನ್ನು ಕೇವಲ ಜಯಂತಿಗಳಿಗೆ ಸೀಮಿತಗೊಳಿಸದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮುಖಂಡ ಯಡಿಯಾಲ ನಾಗರಾಜು ಮಾತನಾಡಿ, ನಂಜನಗೂಡಿನಲ್ಲಿ ಕನಕದಾಸರ ಹೆಸರನ್ನು ಶಾಶ್ವತವಾಗಿ ಸ್ಮರಿಸುವ ನಿಟ್ಟಿನಲ್ಲಿ ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಅವರ ಹೆಸರಿಡಬೇಕು. ಅದೇ ರೀತಿ ಮಾಜಿ ಶಾಸಕ ಹಾಗೂ ವಿದ್ಯಾದಾನಿಗಳಾಗಿ ಗುರುತಿಸಿಕೊಂಡಿದ್ದ, ಕನಕದಾಸರ ವಿದ್ಯಾರ್ಥಿನಿಲಯದ ಸಂಸ್ಥಾಪಕ ಎನ್. ರಾಚಯ್ಯ ಅವರ ಹೆಸರನ್ನೂ ಸೂಕ್ತ ಸ್ಥಳಕ್ಕೆ ನಾಮಕರಣ ಮಾಡಬೇಕು. ಈ ಮೂಲಕ ಇಬ್ಬರು ಮಹನೀಯರ ಸೇವೆ ಮತ್ತು ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಅವರು ಮನವಿ ಮಾಡಿದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೇಶವಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ಶ್ರೀಕಂಠೇಶ್ವರ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಬಸವೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ರೈತ ಸಂಘದ ರಾಜ್ಯ ಕಾರ್ಯದಕ್ಷ ಟಿ.ಆರ್. ವಿದ್ಯಾಸಾಗರ್, ತಾಂಡವಪುರ ಮೋಹನ್, ಉಪ ತಹಸೀಲ್ದಾರ್ ನಂದ ಕಿಶೋರ್, ಇಒ ಜೆರಾಲ್ಡ್ ರಾಜೇಶ್, ಹಾಡ್ಯ ರಂಗಸ್ವಾಮಿ, ಎನ್.ಎಸ್. ಮಹಾದೇವ, ಕೆಂಪಣ್ಣ, ಯಡಿಯಾಲ ನಾಗರಾಜು, ಕುರಟ್ಟಿ ಬಸವರಾಜು, ಕುರಿಹುಂಡಿ ಬಸವರಾಜು, ಹುಚ್ಚೇಗೌಡ, ಮುದ್ದು ಮಾದೇಗೌಡ, ಗುರುಮಲ್ಲಪ್ಪ, ಕತ್ವಾಡಿಪುರ ಸಿದ್ದಯ್ಯ, ದಸಂಸ ಮುಖಂಡ ಸುರೇಶ್ ಇದ್ದರು.