ಕಾರ್ಯಕ್ರಮಕ್ಕೂ ಮೊದಲು ಪರಮಪೂಜ್ಯ ಜಗದ್ಗುರು ರಾಜಗುರುತಿಲಕ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಭಾವಚಿತ್ರದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ವೀರಗಾಸೆ ಕುಣಿತ, ತಮಟೆ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಯಿತು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಬದುಕೇ ಒಂದು ಪವಾಡ, ನುಡಿದಂತೆ ನಡೆದ ನಿಸ್ವಾರ್ಥ ಸೇವೆಯ ಪ್ರತೀಕ ಅವರು. ಇಂದು ಜಗದಗಲ ಬೆಳೆದು ನಿಂತಿರುವ ಜೆಎಸ್‌ಎಸ್ ಮಹಾವಿದ್ಯಾಪೀಠದ ಎಲ್ಲಾ ಸಂಸ್ಥೆಗಳಿಗೆ ಮೂಲ ಬೇರು ರಾಜೇಂದ್ರ ಶ್ರೀಗಳ ದೂರದೃಷ್ಟಿ ಮತ್ತು ಕ್ರಿಯಾಶೀಲತೆಯೇ ಕಾರಣ ಎಂದು ಮಾಜಿ ಶಾಸಕರಾದ ಪರಿಮಳ ನಾಗಪ್ಪ ಅವರು ಅಭಿಪ್ರಾಯ ಪಟ್ಟರು.ತಾಲೂಕಿನ ಕಾಮಗೆರೆ ಗ್ರಾಮದ ಜೆಎಸ್ಎಸ್ ಮಹಾ ವಿದ್ಯಾಪೀಠದ ಆಶ್ರಯದಲ್ಲಿ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಿದ್ದ ಜಗದ್ಗುರು ರಾಜಗುರುತಿಲಕ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಮಪೂಜ್ಯ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಮನುಷ್ಯತ್ವದಿಂದ ದೇವತ್ವಕ್ಕೆ ಏರಿದ ಮಹಾ ಚೇತನ. ಅವರು ಕೇವಲ ಮಠಾಧೀಶರಾಗಿರಲಿಲ್ಲ, ಸಮಾಜ ಸುಧಾರಕರು, ಶಿಕ್ಷಣ ಕ್ರಾಂತಿಯ ಹರಿಕಾರರು. ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಜಗದ್ಗುರುಗಳಾಗಿದ್ದ ಶ್ರೀಗಳು ಕೇವಲ 12ನೇ ವಯಸ್ಸಿನಲ್ಲಿ ಪಟ್ಟಾಧಿಕಾರ ವಹಿಸಿಕೊಂಡು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಮಠದ ಉನ್ನತಿಗೆ ಶ್ರಮಿಸಿದರು.ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಮೈಸೂರಿನಲ್ಲಿ ವಸತಿ, ಊಟದ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಮರುಗಿದ ಅವರು, ತಮ್ಮ ಚಿನ್ನದ ಕರಡಿಗೆಯನ್ನು ಅಡವಿಟ್ಟು ಮಕ್ಕಳಿಗೆ ಅನ್ನದಾಸೋಹ ನೀಡಿದ ಮಾತೃಹೃದಯಿ. ನಮಗೆ ಎಲ್ಲರೂ ಬೇಕು, ನಾವು ಎಲ್ಲರಿಗೂ ಬೇಕು ಎಂಬ ವಿಶಾಲ ಮನೋಭಾವ ಹೊಂದಿದ್ದರು. ಅನ್ನ ದಾಸೋಹ, ಅಕ್ಷರ ದಾಸೋಹ, ಜ್ಞಾನ ದಾಸೋಹ ಎಂಬ ತ್ರಿವಿಧ ದಾಸೋಹದ ಮೂಲಕ ದೇಶ ವಿದೇಶಗಳಲ್ಲೂ ಶಿಕ್ಷಣ ಕ್ರಾಂತಿಯನ್ನು ಉಂಟು ಮಾಡಿರುವ ಶ್ರೀಮಠದ ಆಶ್ರಯದಲ್ಲಿ ಲಕ್ಷಾಂತರ ಜನ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಪಡೆದಿದ್ದಾರೆ.
ನೂರಾರು ಶಾಲಾ- ಕಾಲೇಜು, ವಿದ್ಯಾರ್ಥಿ ನಿಲಯ, ಆಸ್ಪತ್ರೆಗಳನ್ನು ಸ್ಥಾಪಿಸಿ ಸುತ್ತೂರು ಮಠವನ್ನು ಗೌರಿಶಂಕರ ಶಿಖರದಂತೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶ್ರೀಗಳ ಕಾರ್ಯವನ್ನು ನುಡಿ ನಮನ ಸಲ್ಲಿಸಿದ ಶಿವಣ್ಣನವರು ಸ್ಮರಿಸಿದರು.ಕಾರ್ಯಕ್ರಮಕ್ಕೂ ಮೊದಲು ಪರಮಪೂಜ್ಯ ಜಗದ್ಗುರು ರಾಜಗುರುತಿಲಕ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಭಾವಚಿತ್ರದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ವೀರಗಾಸೆ ಕುಣಿತ, ತಮಟೆ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಯಿತು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮುಡಿಗುಂಡ ವಿರಕ್ತಮಠದ ಶ್ರೀ ಶ್ರೀಕಂಠ ಸ್ವಾಮಿಗಳು ಆಶೀರ್ವಚನ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹನೂರು ತಾಲೂಕು ಅಧ್ಯಕ್ಷರಾದ ಜೆ.ಸೋಮಶೇಖರ್ ಒಡೆಯರಪಾಳ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಕುಸುಮ ಕೆ.ಸಿ., ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥರು, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಮತ್ತು ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.