ಸರಳ ಜೀವನ, ಉದಾತ್ತ ಚಿಂತನೆ, ನಿರಂತರ ಕಾಯಕ ಹಾಗೂ ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಅಸಂಖ್ಯಾತ ಜನರ ಬದುಕಿಗೆ ಬೆಳಕಾದ ಆರೂಢ ದಾಸೋಹಿ ಮಹಾಶರಣ ಮಾಗನೂರು ಬಸಪ್ಪನವರ ಆದರ್ಶಮಯ ಜೀವನ ಇಂದಿನ ಯುವಜನತೆಗೆ ದಾರಿದೀಪವಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.

- ಪುಣ್ಯಸ್ಮರಣೆ- ಸರ್ವ ಸಮ್ಮೇಳನ ಉದ್ಘಾಟಿಸಿದ ಸಚಿವ ಕೆ.ಎಸ್‌.ಬಸವಂತಪ್ಪ ಅಭಿಮತ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರಳ ಜೀವನ, ಉದಾತ್ತ ಚಿಂತನೆ, ನಿರಂತರ ಕಾಯಕ ಹಾಗೂ ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಅಸಂಖ್ಯಾತ ಜನರ ಬದುಕಿಗೆ ಬೆಳಕಾದ ಆರೂಢ ದಾಸೋಹಿ ಮಹಾಶರಣ ಮಾಗನೂರು ಬಸಪ್ಪನವರ ಆದರ್ಶಮಯ ಜೀವನ ಇಂದಿನ ಯುವಜನತೆಗೆ ದಾರಿದೀಪವಾಗಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.

ನಗರದ ತರಳಬಾಳು ಬಡಾವಣೆಯ ಶ್ರೀ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೂಢ ದಾಸೋಹಿ ಮಹಾಶರಣ ಲಿಂ. ಮಾಗನೂರು ಬಸಪ್ಪನವರ 31ನೇ ವಾರ್ಷಿಕ ಪುಣ್ಯಸ್ಮರಣೆ ಹಾಗೂ ಶಿವಭಕ್ತಿ ಸಂಪನ್ನೆ ಶರಣೆ ಲಿಂ. ಸರ್ವಮಂಗಳಮ್ಮ ಮಾಗನೂರು ಬಸಪ್ಪನವರ 18ನೇ ಪುಣ್ಯಸ್ಮರಣೆ ಮತ್ತು ಸರ್ವಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಾಗನೂರು ಬಸಪ್ಪನವರು ವೈಯಕ್ತಿಕ ಸಾಧನೆಗೆ ಸೀಮಿತವಾಗದೇ ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದರು. ಅವರಲ್ಲಿ ಅಪಾರ ಹೃದಯವಂತಿಕೆ, ದಾನಗುಣ ಹಾಗೂ ಮಾನವೀಯ ಮೌಲ್ಯಗಳಿದ್ದವು. ಬಡವರು, ನಿರ್ಗತಿಕರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರಿಗೆ ಯಾವುದೇ ತಾರತಮ್ಯವಿಲ್ಲದೆ ನೆರವು ನೀಡುತ್ತಿದ್ದರು ಎಂದು ಸ್ಮರಿಸಿದರು.

ಈ ಹಿಂದೆ ಗಾಂಧಿ ನಗರದ ಸಮೀಪ ಮಂಡಕ್ಕಿ ಭಟ್ಟಿ ನಡೆಸುತ್ತಿದ್ದ ಮಾಗನೂರು ಬಸಪ್ಪನವರು, ಶಾಲೆಯಿಂದ ಬರುತ್ತಿದ್ದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಬಿಸಿಬಿಸಿ ಕಡಲೆಬೀಜ ವಿತರಿಸುತ್ತಿದ್ದರು. ಗಾಂಧೀಜಿ ತತ್ತ್ವಗಳಿಂದ ಪ್ರೇರಿತರಾಗಿದ್ದರು. ಮಾದಿಗ, ಬೋವಿ, ನಾಯಕ ಹಾಗೂ ಲಂಬಾಣಿ ಸೇರಿದಂತೆ ವಿವಿಧ ಶೋಷಿತ ಸಮುದಾಯಗಳ ಜನರಿಗೆ ನಿವೇಶನ ಮತ್ತು ಜಾಗ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.

ದಾವಣಗೆರೆ ವಿವಿಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಕಾಶ್, ಪ್ರೊ. ಬಿ.ಸಿ.ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಧಾರವಾಡ ಮುರುಘಾ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ ಅಧ್ಯಕ್ಷತೆ ವಹಿಸಿದ್ದರು. ಶರಣ ಎಂ.ಬಿ. ಚನ್ನಬಸವನಗೌಡ, ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಚ್.ವಿ. ವಾಮದೇವಪ್ಪ, ದಾವಣಗೆರೆ ವಿವಿಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಜಿ.ಪ್ರಕಾಶ್, ಪ್ರೊ. ಬಿ.ಸಿ.ಪ್ರಸನ್ನಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

- - -

(ಕೋಟ್)

ಬಡತನದಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ ಮಾಗನೂರು ಬಸಪ್ಪ ಅವರು ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವಾದವರು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರೇರಕ ಶಕ್ತಿಯಾದರು. ಶಿಕ್ಷಣವು ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ, ಕುಟುಂಬ ಮತ್ತು ಸಮಾಜದ ಭವಿಷ್ಯವನ್ನೂ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ತಮ್ಮ ಸೇವೆಯ ಮೂಲಕ ಸಾರಿದರು. ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಭದ್ರ ಬುನಾದಿ ಎಂಬ ಅವರ ನಂಬಿಕೆ ಇಂದಿಗೂ ಪ್ರಸ್ತುತವಾಗಿದೆ.

- ಕೆ.ಎಸ್.ಬಸವಂತಪ್ಪ, ಸಚಿವ.

- - -

(ಟಾಪ್ ಕೋಟ್‌) ಮಾಗನೂರು ಬಸಪ್ಪನವರು, ರಾಜನಹಳ್ಳಿ ಹನುಮಂತಪ್ಪನವರು ಹಾಗೂ ಶಾಮನೂರು ಶಿವಶಂಕರಪ್ಪ ಅವರಂತಹ ಹಲವಾರು ದಾನಿಗಳು ಸಮಾಜದ ಒಳಿತಿಗಾಗಿ ದಾನ- ಧರ್ಮಗಳನ್ನು ಮಾಡುತ್ತ ಬಂದಿದ್ದಾರೆ. ಇಂತಹ ಮಹನೀಯರ ಸತ್ಕಾರ್ಯಗಳನ್ನು ಸ್ಮರಿಸುವುದು ಮತ್ತು ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮಾಜದ ಕರ್ತವ್ಯ.

- ಕೆ.ಎಸ್.ಬಸವಂತಪ್ಪ, ಸಚಿವ.

- - -

-30ಕೆಡಿವಿಜಿ44: ಸಚಿವ ಕೆ.ಎಸ್‌.ಬಸವಂತಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.