ದೇಶಕ್ಕೆ ಅನ್ನ ಕೊಡುವ ರೈತನ ಜೀವನ ಹಸನಾಗಬೇಕು: ನಿಶ್ಚಲಾನಂದನಾಥ ಮಹಾಸ್ವಾಮೀಜಿ

| Published : Jan 18 2025, 12:47 AM IST

ದೇಶಕ್ಕೆ ಅನ್ನ ಕೊಡುವ ರೈತನ ಜೀವನ ಹಸನಾಗಬೇಕು: ನಿಶ್ಚಲಾನಂದನಾಥ ಮಹಾಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಸಂಕ್ರಾಂತಿಯಂದು ಇದ್ದ ಸಡಗರ, ಸಂಭ್ರಮ, ಹೊಸತನ, ಸಹೋದರತ್ವ, ಸಹಬಾಳ್ವೆ ಹಾಗೂ ದನಗಳಿಗೆ ಪೂಜೆ ಮಾಡಿ ಕಿಚ್ಚಾಯಿಸಿ ಸಹಭೋಜನ ಮಾಡುತ್ತಿದ್ದುದನ್ನು ವಿವರಿಸಿದರು. ಇಂದು ರೈತ ಹುಟ್ಟುಹಬ್ಬ, ಮದುವೆ, ತಿಥಿ, ಹಾಲು- ತುಪ್ಪ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡಿ ಸಾಲದ ಸುಳಿಗೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾನೆ ಎಂದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ದೇಶಕ್ಕೆ ಅನ್ನ ಕೊಡುವ ರೈತನ ಜೀವನ ಹಸನಾಗಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕಸಾಪ ಹಾಗೂ ಗ್ರಾಮರಂಗ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿಯವರ ಪುರ ಪ್ರವೇಶ ಹಾಗೂ ಸಂಕ್ರಾಂತಿ ಪುರಸ್ಕಾರ ಸಮಾರಂಭದಲ್ಲಿ ಉತ್ತಮ ರಾಸುಗಳು ಹಾಗೂ ಭತ್ತದ ರಾಶಿಗೆ ಪೂಜೆ ಸಲ್ಲಿಸಿ, ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅನ್ನವಿಲ್ಲದೇ ಯಾರೂ ಬದುಕಲು ಸಾಧ್ಯವಿಲ್ಲ. ವಾಹನಗಳಿಲ್ಲದೇ, ಫೋನ್, ಫ್ಯಾನುಗಳಿಲ್ಲದೇ, ಕಾಲಿಗೆ ಚಪ್ಪಲಿ ಇಲ್ಲದೆ, ಚಿನ್ನ- ಬೆಳ್ಳಿ, ಬಂಗಾರಗಳಿಲ್ಲದೇ ಬದುಕಬಹುದು. ಆದರೆ, ಜೀವ ಉಳಿಸುವ ಆಹಾರವಿಲ್ಲದೇ ಬದುಕಲು ಸಾಧ್ಯವಿಲ್ಲ. ಹೀಗಾಗಿ ಅನ್ನ ನೀಡುವ ರೈತನನ್ನು ಪೂಜ್ಯ ಭಾವನೆಯಿಂದ ಕಂಡು ಗೌರವಿಸಬೇಕು ಎಂದರು.

ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಅವರನ್ನು ಪಟ್ಟಣದ ಪಾಂಡವ ಕ್ರೀಡಾಂಗಣದಿಂದ ಜೋಡೆತ್ತುಗಳ ಮೆರವಣಿಗೆ ಹಾಗೂ ಪೂರ್ಣ ಕುಂಭದೊಂದಿಗೆ ಅದ್ಧೂರಿಯಾಗಿ ‌ಸ್ವಾಗತಿಸಿಕೊಳ್ಳುವ ಮೂಲಕ ಸ್ವಾಮೀಜಿ ಪುರ ಪ್ರವೇಶ ಕಾರ್ಯಕ್ರಮ ನಡೆಯಿತು.

ಈ ಹಿಂದೆ ಸಂಕ್ರಾಂತಿಯಂದು ಇದ್ದ ಸಡಗರ, ಸಂಭ್ರಮ, ಹೊಸತನ, ಸಹೋದರತ್ವ, ಸಹಬಾಳ್ವೆ ಹಾಗೂ ದನಗಳಿಗೆ ಪೂಜೆ ಮಾಡಿ ಕಿಚ್ಚಾಯಿಸಿ ಸಹಭೋಜನ ಮಾಡುತ್ತಿದ್ದುದನ್ನು ವಿವರಿಸಿದರು. ಇಂದು ರೈತ ಹುಟ್ಟುಹಬ್ಬ, ಮದುವೆ, ತಿಥಿ, ಹಾಲು- ತುಪ್ಪ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡಿ ಸಾಲದ ಸುಳಿಗೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾನೆ ಎಂದರು.

ಈ ವೇಳೆ ಸ್ವಾಮೀಜಿ ಅವರಿಗೆ ಭಕ್ತಿಭಾವದಿಂದ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು. ಸಭಿಕರು, ಸಾರ್ವಜನಿಕರು ಭಕ್ತಿಯಿಂದ ಅವರಿಗೆ ಪಾದಪೂಜೆ ಮಾಡಿ ಅವರ ಆಶೀರ್ವಾದ ಪಡೆದರು. ಇದೇ ವೇಳೆ ಉತ್ತಮ ರಾಸುಗಳನ್ನು ಸಾಕಿದ್ದ ಹಾರೋಹಳ್ಳಿ ಬಸವರಾಜು ಹಾಗೂ ಬೇವಿನಕುಪ್ಪೆ ನಡಕೇರಿಗೌಡ ಬಿನ್ ದೊಡ್ಡ ಕೆಂಪೂಗೌಡ ಅವರನ್ನು ಸಂಕ್ರಾಂತಿ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಕಸಾಪ ಅಧ್ಯಕ್ಷ ಮೇನಾಗ್ರ ಪ್ರಕಾಶ್, ಮಾಜಿ ಅಧ್ಯಕ್ಷರಾದ ಎಚ್.ಆರ್.ಧನ್ಯಕುಮಾರ್, ಎಂ.ರಮೇಶ್, ಗ್ರಾಮರಂಗ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಬಿ.ಎಸ್.ನಾಗಲಿಂಗೇಗೌಡ, ಶಿವರಾಜು, ಶ್ರೀನಿವಾಸ್ ಇತರರಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರಯ್ಯ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಅವರ ಸಾಧನೆ ಬಗ್ಗೆ ಸ್ವರಚಿತ ಕವನ ರಚಿಸಿ, ವಾಚಿಸಿ ಎಲ್ಲರಿಗೂ ಶುಭ ಕೋರಿದರು.