ಸಾರಾಂಶ
ಕಳೆದ ಕೆಲವು ದಿನಗಳಿಂದ ಅಬ್ಬರಿಸಿದ ಮಳೆಯಿಂದ ಜಿಲ್ಲೆಯ ರೈತರ ಬದುಕು ಮೂರಾಬಟ್ಟೆಯಾಗಿದೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾಳಾಗಿದ್ದು, 513 ಮನೆಗಳಿಗೆ ಹಾನಿಯಾಗಿದೆ.
ಹಾವೇರಿ: ಕಳೆದ ಕೆಲವು ದಿನಗಳಿಂದ ಅಬ್ಬರಿಸಿದ ಮಳೆಯಿಂದ ಜಿಲ್ಲೆಯ ರೈತರ ಬದುಕು ಮೂರಾಬಟ್ಟೆಯಾಗಿದೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾಳಾಗಿದ್ದು, 513 ಮನೆಗಳಿಗೆ ಹಾನಿಯಾಗಿದೆ.
ಕಟಾವಿನ ಹಂತದಲ್ಲಿದ್ದ ಬೆಳೆಗಳು ಜಲಾವೃತಗೊಂಡು ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ತೆನೆಭರಿತ ಭತ್ತ ಸಂಪೂರ್ಣವಾಗಿ ನೀರಿನಲ್ಲಿ ಹಾಸಿದ್ದು, ಇದನ್ನು ನೋಡಿ ರೈತರು ಕಣ್ಣೀರಿಡುತ್ತಿದ್ದಾರೆ. ಅಕ್ಟೋಬರ್ ಆರಂಭದಿಂದ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ಸುಮಾರು ೨ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಯುಟಿಪಿ ಕಾಲುವೆ ಒಡೆದು, ಕೆರೆ, ಹಳ್ಳ, ನದಿಗಳ ನೀರು ನುಗ್ಗಿ ಬೆಳೆ ಹಾನಿಯಾದರೆ, ಉಳಿದೆಡೆಯಲ್ಲಿ ನಿರಂತರ ಮಳೆಗೆ ಸಿಲುಕಿ ಹತ್ತಿ, ಮೆಕ್ಕೆಜೋಳ, ಸೋಯಾಬಿನ್, ಜೋಳ, ಶೇಂಗಾ ಸೇರಿದಂತೆ ತೋಟಗಾರಿಕೆ ಬೆಳೆಗಳೂ ಸಹ ಹಾನಿಗೀಡಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಜಿಲ್ಲೆಯಲ್ಲಿ ಅ.೧೨ರಂದು ಕನಕಾಪುರ ಬಳಿ ಕಾಲುವೆ ಒಡೆದು ಅಪಾರ ಪ್ರಮಾಣದಲ್ಲಿ ನೀರು ಜಮೀನುಗಳಿಗೆ ನುಗ್ಗಿ ಬೆಳೆಗಳು ಹಾನಿಗೀಡಾಗಿದ್ದರೇ, ಇದೀಗ ಮತ್ತೇ ಹಾವೇರಿ ತಾಲೂಕಿನ ದೇವಿಹೋಸೂರು ಗ್ರಾಮದ ಬಳಿ ಯುಟಿಪಿ ಕಾಲುವೆ ಒಡೆದು ರೈತರ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಮೆಕ್ಕೆಜೋಳ, ಹತ್ತಿ, ಜೋಳ, ಸೋಯಾಬೀನ್ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಕಾಲುವೆ ಒಡೆದು ಬೆಳೆ ಕೊಚ್ಚಿಕೊಂಡು ಹೋದರೂ ಸಹ ಯಾವೊಬ್ಬ ಅಧಿಕಾರಿಗಳು ಬಂದು ನೋಡಿಲ್ಲ ಅಲ್ಲದೇ ಕಾಲುವೆ ಕಾಮಗಾರಿ ಕಳಪೆಯಾಗಿದ್ದು, ಸಂಬಂಧಿಸಿದವರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಹಾಗೂ ತಕ್ಷಣವೇ ಪರಿಹಾರ ನೀಡಬೇಕೆಂದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ೫೧೩ ಮನೆ ಹಾನಿ: ಜಿಲ್ಲೆಯಲ್ಲಿ ಮಳೆಯಿಂದಾಗಿ ಈವರೆಗೆ ೫೧೩ ಮನೆಗಳಿಗೆ ಹಾನಿಯಾಗಿದೆ. ಬ್ಯಾಡಗಿ ತಾಲೂಕಿನಲ್ಲಿ ೭೪ ಮನೆಗಳು, ಹಾನಗಲ್ಲ ೫೪, ಹಾವೇರಿ ೫೩, ಹಿರೇಕೆರೂರು ೪೦, ರಾಣಿಬೆನ್ನೂರ ೭೫, ರಟ್ಟೀಹಳ್ಳಿ ೮೪, ಸವಣೂರ ೯೫ ಮತ್ತು ಶಿಗ್ಗಾಂವಿ ತಾಲೂಕಿನಲ್ಲಿ ೩೮ ಮನೆಗಳಿಗೆ ಹಾನಿಯಾಗಿದೆ. ಜೊತೆಗೆ ಜಿಲ್ಲೆಯಲ್ಲಿ ೫ ದನದ ಕೊಟ್ಟಿಗೆ ಹಾನಿಗೀಡಾಗಿವೆ.೪೨೬ ಮನೆ ಜಲಾವೃತ: ವಾರದಿಂದ ನಿತ್ಯವೂ ಸುರಿಯುತ್ತಿರುವ ಭಾರಿ ಮಳೆಗೆ ವಿವಿಧ ಗ್ರಾಮಗಳಲ್ಲಿ ೪೨೬ ಮನೆಗಳು ಜಲಾವೃತಗೊಂಡಿವೆ. ಹಾನಗಲ್ಲ ೩೨, ರಟ್ಟೀಹಳ್ಳಿ ೩, ಹಿರೇಕೆರೂರ ೧೨, ಬ್ಯಾಡಗಿ ಪಟ್ಟಣ ೨೨೭ ಮತ್ತು ರಾಮಗೊಂಡನಹಳ್ಳಿ ೧೨ ಸೇರಿ ಬ್ಯಾಡಗಿ ತಾಲೂಕಿನಲ್ಲೇ ೨೩೯, ರಾಣಿಬೆನ್ನೂರ ೧೦, ಸವಣೂರ ತಾಲೂಕಿನ ಬರದೂರ, ಹುರಳಿಕುಪ್ಪಿ, ಜಲ್ಲಾಪುರ, ಕಡಕೋಳ, ಕೆ.ಬಿ. ತಿಮ್ಮಾಪುರ ಮತ್ತು ಮಣ್ಣೂರ ಗ್ರಾಮಗಳ ಒಟ್ಟು ೧೩೨ಗ್ರಾಮಗಳು ಜಲಾವೃತಗೊಂಡಿವೆ.ಮೂರು ಕಾಳಜಿ ಕೇಂದ್ರ ಸ್ಥಾಪನೆ: ಜಲಾವೃತಗೊಂಡ ಮನೆಗಳಲ್ಲಿನ ಕುಟುಂಬಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಅವರಿಗಾಗಿ ಜಿಲ್ಲೆಯಲ್ಲಿ ಮೂರು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಶಿಗ್ಗಾಂವಿ ಪಟ್ಟಣದ ಮಾರುತಿ ನಗರದ ಬಾಬು ಜಗಜೀವನ್‌ರಾಮ್ ಸಭಾಭವನದಲ್ಲಿ ೧೮ ಕುಟುಂಬಗಳ ೯೪ ಜನರಿಗೆ, ಹಾವೇರಿ ತಾಲೂಕಿನ ತಿಮ್ಮಾಪುರ ಎಂ.ಎ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧೫ ಕುಟುಂಬಗಳ ೫೪ ಜನರಿಗೆ, ಸವಣೂರು ತಾಲೂಕಿನ ಬರದೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೪೦ ಕುಟುಂಬಗಳ ೧೩೪ ಜನರಿಗೆ ತಾತ್ಕಾಲಿಕ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.ಬೆಳೆ ಹಾನಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧ ಬೆಳೆಗಳು ಜಲಾವೃತಗೊಂಡು ಹಾನಿಗೀಡಾಗಿದ್ದು, ಹಾವೇರಿ ತಾಲೂಕಿನ ೨೮೦ ಹೆಕ್ಟೇರ್, ರಾಣಿಬೆನ್ನೂರ ೮೨೫, ಬ್ಯಾಡಗಿ ೨೧೦, ಹಾನಗಲ್ಲ ೧೧೩, ಶಿಗ್ಗಾವಿ ೧೯೭, ರಟ್ಟೀಹಳ್ಳಿ ೨೦೦ ಹೆಕ್ಟೇರ್ ಪ್ರದೇಶದಲ್ಲಿನ ಮೆಕ್ಕೆಜೋಳ, ಶೇಂಗಾ, ಹತ್ತಿ, ಭತ್ತ, ಜೋಳ, ಸೋಯಾಬಿನ್ ಬೆಳೆಗಳು ಸೇರಿ ಒಟ್ಟು ೧೮೩೫ ಹೆಕ್ಟೇರ್ ಪ್ರದೇಶದ ಕೃಷಿ ಬೆಳೆ ಹಾನಿಗೀಡಾಗಿದೆ. ಅದೇ ರೀತಿ ತೋಟಗಾರಿಕೆಯ ೪೦.೨೫ ಹೆಕ್ಟೇರ್ ಬೆಳೆ ಹಾನಿಗೀಡಾಗಿದೆ.