- ಶೃಂಗೇರಿಯಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಶೃಂಗೇರಿಅತಿವೃಷ್ಠಿ, ಹಳದಿ ಎಲೆ ರೋಗ, ಎಲೆ ಚುಕ್ಕಿರೋಗ, ಕೊಳೆರೋಗ, ಬೆಳೆಹಾನಿ ಒತ್ತುವರಿ ಸಮಸ್ಯೆ, ಜನವಿರೋಧಿ ಅರಣ್ಯ ಕಾಯ್ದೆ ಗಳಿಂದ ಮಲೆನಾಡಿನ ರೈತರ ಬದುಕು ಸಂಕಷ್ಟದಲ್ಲಿದೆ. ರೈತರ ಗಂಭೀರವಾದ ಸಮಸ್ಯೆ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಸಂಚಾಲಕ ಅಂಬಳೂರು ರಾಮಕೃಷ್ಣರಾವ್ ಆರೋಪಿಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಸೊಪ್ಪಿನ ಬೆಟ್ಟ ಮಂಜೂರಾತಿ ತಡೆ ವಿರೋಧಿಸಿ, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.ಸೊಪ್ಪಿನ ಬೆಟ್ಟ ಪ್ರದೇಶ ಬ್ರಿಟೀಷರ ಕಾಲದಿಂದಲೂ ರೈತರಿಗೆ ಸಂಬಂಧಿಸಿದ ಜಾಗ ಎಂಬ ಉಲ್ಲೇಖಗಳಿವೆ. 1867 ರಲ್ಲಿಯೇ ಬ್ರಿಟೀಷ್ ಸರ್ಕಾರ ಮೊದಲ ಬಾರಿಗೆ ಸೊಪ್ಪಿನ ಬೆಟ್ಟದಲ್ಲಿ ರೈತರಿಗೆ ಅಗತ್ಯವಿರುವ ಸೊಪ್ಪು, ದರಗು, ಮಣ್ಣು ಪಡೆಯುವ ಹಕ್ಕು ನೀಡಿತ್ತು. ಆದರೆ ಅಂದು ಬ್ರಿಟೀಷ್ ಸರ್ಕಾರ ರೈತರಿಗೆ ನೀಡಿದ್ದ ಪಕ್ಕನ್ನು ಇಂದು ನಮ್ಮದೇ ಸರ್ಕಾರಗಳು ರೈತರಿಂದ ಕಿತ್ತುಕೊಳ್ಳುತ್ತಿದೆ. 2002 ರಲ್ಲಿ ಅಂದಿನ ಜಿಲ್ಲಾಧಿಕಾರಿ 58 ಸಾವಿರ ಎಕರೆ ಕಂದಾಯ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿದರು.ಈ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಜಾಗವೇ ಇಲ್ಲವಾಗಿದೆ.ಎಲ್ಲವೂ ಅರಣ್ಯಇಲಾಖೆ ಜಾಗ.
ಸೆಕ್ಷನ್ 4 (1),ಸೆಕ್ಷನ್ 17 ಮಾಡಿ ಎಲ್ಲಾ ಜಮೀನನ್ನು ಅರಣ್ಯಇಲಾಖೆಗೆ ಸೇರಿಸಿ ರೈತರ, ಬಡವರ ಜಮೀನು ,ಮನೆಗಳನ್ನು ಕಿತ್ತು ಕೊಂಡು ನಿರ್ಗತಿಕರನ್ನಾಗಿ ಮಾಡಲಾಗುತ್ತದೆ. ಸರ್ಕಾರದ ಜನವಿರೋಧಿ ಅರಣ್ಯಕಾಯ್ದೆಗಳು ಮರಣಶಾಸನವಾಗಿದೆ. ಕಂದಾಯ ಇಲಾಖೆ ನಿರ್ಲಕ್ಷ್ಯ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಮಲೆನಾಡಿಗೆ ಇಂದು ಬಂದಿರುವ ಪರಿಸ್ಥಿತಿಗೆ ಕಾರಣ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಕಾನೂನು ರೂಪಿಸಿ ಸೊಪ್ಪಿನ ಬೆಟ್ಟ ಪ್ರದೇಶವನ್ನು ಕಂದಾಯ ಭೂಮಿಯನ್ನಾಗಿ ಮಾಡಬೇಕು. ತಿದ್ದುಪಡಿ ಮಾಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು.ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬೇಗಾರು ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಕೆ.ಡಿ.ಮಾತನಾಡಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ರೈತರ ಬದುಕು ರೂಪಿಸುವ ಕಾನೂನು ರೂಪಿಸುವ ಬದಲು ಮಾರಕ ಕಾಯ್ದೆ ಜಾರಿಗೊಳಿಸಿ ಬೀದಿಪಾಲು ಮಾಡಿ ಮರಣ ಶಾಸನ ಬರೆಯಲು ಹೊರಟಿವೆ. ಕೂಡಲೇ ಸೊಪ್ಪಿನಬೆಟ್ಟ ಮಂಜೂರಾತಿ ತಡೆಹಿಡಿರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಜೆಡಿಎಸ್ ನ ಭರತ್ ಗಿಣಕಲ್, ಬಿ.ಜಿ.ಪ್ರಸನ್ನ ಮಾತನಾಡಿದರು. ಪ್ರತಿಭಟನೆಯಲ್ಲಿ ಸಮಿತಿಯ ಕೆ.ಎಸ್. ರಮೇಶ್, ಕೆ.ಎಂ.ಶ್ರೀನಿವಾಸ್, ಹೆಬ್ಬಿಗೆ ಕೃಷ್ಣಮೂರ್ತಿ,ಮಾರನಕೊಡಿಗೆ ನಾಗೇಶ್ ನಾಯಕ್,ನಾಗೇಂದ್ರ,ದಿನೇಶ್ ಅಂಗುರುಡಿ,ಆಗುಂಬೆ ಗಣೇಶ್ ಹೆಗ್ಡೆ,ಗಿರೀಶ್ ಉಳುವೆ ವಿವಿಧ ಪಕ್ಷಗಳ ಮುಖಂಡರು, ಸಮೀತಿಯ ಸದಸ್ಯರು ಉಪಸ್ಥಿತರಿದ್ದರು.1 ಶ್ರೀ ಚಿತ್ರ 1-
ಶೃಂಗೇರಿ ತಾಲೂಕು ಕಚೇರಿ ಎದುರು ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮೀತಿ ಸಭೆಯಲ್ಲಿ ಅಂಬಳೂರು ರಾಮಕೃಷ್ಣರಾವ್ ಮಾತನಾಡಿದರು.1 ಶ್ರೀ ಚಿತ್ರ 2-ಶೃಂಗೇರಿ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲ ಪ್ರತಿಭಟನಾಕಾರರು ಸಮಾವೇಶಗೊಂಡಿರುವುದು.