ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಅಗತ್ಯ ವಸ್ತುಗಳಾದ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹೀಗೆ ಎಲ್ಲಾ ವಸ್ತುಗಳ ಮೇಲೆ ತೆರಿಗೆ ವಿಧಿಸಿದ ಪ್ರಪಂಚದ ಏಕೈಕ ದೇಶ ಅಂದರೇ ಅದು ಭಾರತ ಮಾತ್ರ ಎಂದು ಸಿಪಿಐಎಂ ಜಿಲ್ಲಾ ಮುಖಂಡ ಆರ್. ಚಂದ್ರತೇಜಸ್ವಿ ಆರೋಪಿಸಿದರು.ನಗರದ ತಾಲೂಕು ಕಚೇರಿ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಹಾಲಿನ ದರ ಏರಿಕೆಯಾಗಬೇಕು. ಆ ದರದ ಲಾಭ ರೈತರಿಗೆ ಸೇರಬೇಕು ಎಂಬುದು ನಿಜ, ಆದರೆ, ಅದೇ ರೀತಿ ಗ್ರಾಹಕರಿಗೆ ಹೊರೆಯಾಗದ ರೀತಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ. ಏಕೆಂದರೆ ಹಾಲು ಜನಸಾಮಾನ್ಯರಿಗೆ ಅತಿ ಅಗತ್ಯ ವಸ್ತುಗಳಲ್ಲಿ ಒಂದು. ಇಂತವುಗಳಲ್ಲಿ ಲಾಭ ಅಪೇಕ್ಷಿಸದೇ ಸರ್ಕಾರವು ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವುದರಿಂದ ಎಲ್ಲ ವಸ್ತುಗಳ ಸಾಗಾಣಿಕೆ ವೆಚ್ಚ ಹೆಚ್ಚುತ್ತದೆ. ಅದರಿಂದ ಬೆಲೆಗಳು ಏರಿಕೆಯಾಗುತ್ತದೆ. 2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ 120 ಡಾಲರ್ ಇತ್ತು. ಅದನ್ನು ಸರಿದೂಗಿಸಿದ ಅಂದಿನ ಯುಪಿಎ ಸರ್ಕಾರ ಗ್ರಾಹಕರಿಗೆ 85 ರುಪಾಯಿ ಒಳಗೆ ಪೆಟ್ರೋಲ್ ಸರಬರಾಜು ಮಾಡುತ್ತಿತ್ತು. ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ 65 ಡಾಲರ್‌ಗೆ ಕುಸಿತವಾಗಿದೆ. ಆದರೂ ಪೆಟ್ರೋಲ್ 103 ರುಪಾಯಿಗಳಾಗಿದೆ. ಇದರ ಲಾಭ ಬಂಡವಾಳಶಾಯಿಗಳ ತಿಜೋರಿಗೆ ಸೇರುತ್ತದೆ ಎಂದು ಆರೋಪಿಸಿದರು.
ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್, ದಿನ ಬೆಳಗಾದರೆ ಯಾವ ವಸ್ತುಗಳ ಮೇಲೆ ತೆರಿಗೆ ಏರಿಸಬೇಕು ಎಂದು ಹವಣಿಸುತ್ತಿರುತ್ತಾರೆ ಎಂದ ಅವರು, ದಿನಬಳಕೆಯ ವಸ್ತುಗಳ ಮೇಲೆ ಜಿಎಸ್‌ಟಿ, ಸೆಸ್, ಸರ್ಚಾರ್ಜ್ ಹೆಸರಿನಲ್ಲಿ ಜನ ಸಾಮಾನ್ಯರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಹಾಲಿಗೆ ಸಂಬಂಧಿಸಿ ಎಲ್ಲಾ ಪದಾರ್ಥಗಳ ಮೇಲೆ ತೆರಿಗೆ ವಿಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಅಂಬಾನಿ ಅದಾನಿಯಂತ ಶ್ರೀಮಂತ ಉದ್ಯಮಿಗಳಿಗೆ ಸಂಬಂಧಿಸಿದ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದೆ. ಜೊತೆಗೆ ತೆರಿಗೆ ವಿನಾಯಿತಿ ನೀಡಿದ್ದಾರೆ. ಅದೇ ಸಾಮಾನ್ಯ ಜನ ಬಳಸುವ ಎಲ್ಲಾ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಲೂಟಿ ಮಾಡುತ್ತಿದ್ದಾರೆ. ಅದೂ ಸಾಲದೇ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ಯಮಗಳನ್ನು ಖಾಸಗಿಕರಣ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಪಕ್ಷದ ತಾಲೂಕು ಕಾರ್ಯದರ್ಶಿ ರುದ್ರಾರಾಧ್ಯ ಮಾತನಾಡಿ, ಕೇಂದ್ರ ಸರ್ಕಾರ ಹುಟ್ಟುವ ಮಗುವಿನಿಂದ ಹಿಡಿದು, ಶವ ಸಂಸ್ಕಾರಕ್ಕೆ ಬಳಸುವ ಬಟ್ಟೆವರೆಗೂ ದೋಸೆಯಿಂದ ಮಜ್ಜಿಗೆ ತನಕ ಜಿಎಸ್‌ಟಿ ವಿಧಿಸಿದೆ. ರಾಜ್ಯ ಸರ್ಕಾರ ಜನತೆಗೆ ಉಚಿತ ಯೋಜನೆಗಳನ್ನು ಕೊಟ್ಟಿದೆ. ಆದರೇ ಒಂದು ಕೈಯಲ್ಲಿ ಕೊಟ್ಟು ದಿನಬಳಕೆ ವಸ್ತುಗಳ ಬೆಲೆ ಏರಿಸಿ ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಭಾ ಬೆಳವಂಗಲ, ರಾಮಕೃಷ್ಣ, ಕಾರ್ಮಿಕ ಮುಖಂಡ ರೇಣುಕಾರಾಧ್ಯ, ರಘುಕುಮಾರ್, ಚೌಡಪ್ಪ, ಮುನಿನಾರಾಯಣಪ್ಪ ಇತರರು ಉಪಸ್ಥಿತರಿದ್ದರು.