ಗ್ರಾಮೀಣ ಮಕ್ಕಳ, ಯುವಕರ ಹಾಗೂ ಉದ್ಯೋಗಾಕಾಂಕ್ಷಿಗಳ ಜ್ಞಾನಾರ್ಜನೆಗೆ ಬೆಳಕಾಗಬೇಕಿದ್ದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ. ಆದರೆ, ಈ ಜ್ಞಾನ ದೇಗುಲಗಳ ಬಾಗಿಲು ತೆರೆದು ಓದುಗರಿಗೆ ಜ್ಞಾನ ಹಂಚುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ಬದುಕೇ ಕತ್ತಲಲ್ಲಿ ಸಿಲುಕಿದೆ.
ರಾಜ್ಯದ 5799 ಗ್ರಾಪಂ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಕನಿಷ್ಠ ವೇತನವೂ ಮರೀಚಿಕೆ । ₹12 ಸಾವಿರ ಮಾತ್ರ ಪಾವತಿ, ₹7 ಸಾವಿರ ಬಾಕಿ, ಒಂದೂವರೆ ವರ್ಷದಿಂದ ಕನಿಷ್ಠ ವೇತನ ಸಿಗದೇ ಸಂಕಷ್ಟ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಗ್ರಾಮೀಣ ಮಕ್ಕಳ, ಯುವಕರ ಹಾಗೂ ಉದ್ಯೋಗಾಕಾಂಕ್ಷಿಗಳ ಜ್ಞಾನಾರ್ಜನೆಗೆ ಬೆಳಕಾಗಬೇಕಿದ್ದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ. ಆದರೆ, ಈ ಜ್ಞಾನ ದೇಗುಲಗಳ ಬಾಗಿಲು ತೆರೆದು ಓದುಗರಿಗೆ ಜ್ಞಾನ ಹಂಚುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ಬದುಕೇ ಕತ್ತಲಲ್ಲಿ ಸಿಲುಕಿದೆ.
ರಾಜ್ಯದಲ್ಲಿ 5799 ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೇಲ್ವಿಚಾರಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ (₹19 ಸಾವಿರ)ದ ಪೂರ್ಣ ಮೊತ್ತ ಕೈ ಸೇರುತ್ತಿಲ್ಲ. ಸರ್ಕಾರದ ಪಾಲಿನಿಂದ ಪ್ರಸ್ತುತ ₹12 ಸಾವಿರ ಮಾತ್ರ ಪಾವತಿಯಾಗುತ್ತಿದ್ದು, ಉಳಿದ ಮೊತ್ತವನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ಗ್ರಂಥಾಲಯ ಕರದಿಂದ ಭರಿಸಬೇಕೆಂಬ ವ್ಯವಸ್ಥೆ ಇದೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹ ಕುಸಿತ, ಬರ ಪರಿಸ್ಥಿತಿ, ಗ್ರಾಪಂಗಳ ಆರ್ಥಿಕ ಸಂಕಷ್ಟ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಗ್ರಂಥಾಲಯ ಕರದ ಹಣ ಸಮರ್ಪಕವಾಗಿ ಸಂಗ್ರಹವಾಗುತ್ತಿಲ್ಲ. ಪರಿಣಾಮವಾಗಿ ಮೇಲ್ವಿಚಾರಕರಿಗೆ ಬರಬೇಕಾದ ಬಾಕಿ ವೇತನ ವರ್ಷಗಟ್ಟಲೇ ಬಾಕಿ ಉಳಿಯುತ್ತಿದೆ. ಸರ್ಕಾರದಿಂದ ನೀಡಬೇಕಾದ 12 ಸಾವಿರವನ್ನೂ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರ ಬಿಡುಗಡೆ ಮಾಡುತ್ತಿದ್ದು ಅದೇ ಸದ್ಯಕ್ಕೆ ಆಸರೆಯಾಗಿದೆ.
ಬಾಕಿಯಲ್ಲೇ ಬದುಕು:ಕಳೆದ ಒಂದೂವರೆ ವರ್ಷದಿಂದ ಪೂರ್ಣ ಪ್ರಮಾಣದ ಕನಿಷ್ಠ ವೇತನ ದೊರೆಯದೆ ಅನೇಕ ಮೇಲ್ವಿಚಾರಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದಿನ ದುಬಾರಿ ಜೀವನದಲ್ಲಿ ₹12 ಸಾವಿರದ ಆದಾಯದಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ ಹಾಗೂ ವೈದ್ಯಕೀಯ ವೆಚ್ಚ ಭರಿಸುವುದು ಕಷ್ಟವಾಗಿದೆ. ಸಾಲ ಮಾಡಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಆರ್ಥಿಕ ಒತ್ತಡದಿಂದ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ ಎಂದು ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ವೇತನ ಪರಿಷ್ಕರಣೆಯಲ್ಲೂ ಕಡೆಗಣನೆ:ರಾಜ್ಯ ಕಾರ್ಮಿಕ ಇಲಾಖೆ 22-5-2026ರಿಂದ ಜಾರಿಗೆ ಬರುವಂತೆ 91 ವಲಯಗಳ ಕನಿಷ್ಠ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಆದರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರನ್ನು ಸೂಕ್ತವಾಗಿ ಕನಿಷ್ಠ ವೇತನ ವ್ಯಾಪ್ತಿಯಲ್ಲಿ ಪರಿಗಣಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ವರ್ಷಗಳಿಂದ ಅತ್ಯಂತ ಕಡಿಮೆ ಗೌರವಧನದಲ್ಲಿ ದುಡಿಯುತ್ತಿರುವ ಇವರಿಗೂ ಇತರ ಕಾರ್ಮಿಕರಂತೆ ಕಾಲಾನುಸಾರ ಕನಿಷ್ಠ ವೇತನ, ಸೇವಾ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಬೇಕೆಂಬ ಬೇಡಿಕೆ ಹಾಗೆಯೇ ಉಳಿದಿದೆ.
ಕಾಯಂ, ಪಿಂಚಣಿಗೂ ಆಗ್ರಹ:ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಗ್ರಂಥಾಲಯ ಮೇಲ್ವಿಚಾರಕರನ್ನು ಹಂತ ಹಂತವಾಗಿ ಕಾಯಂಗೊಳಿಸುವುದು, ನಿವೃತ್ತರಾದವರಿಗೆ ಪಿಂಚಣಿ ಅಥವಾ ಸೂಕ್ತ ಇಡಿಗಂಟು ನೀಡುವುದು, ಸೇವಾ ಸೌಲಭ್ಯ ಕಲ್ಪಿಸುವುದು ಹಾಗೂ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು. ಗ್ರಾಮೀಣ ಜನರ ಜ್ಞಾನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪ್ರಮುಖ ವೇದಿಕೆಯಾಗಿರುವ ಗ್ರಂಥಾಲಯಗಳ ನಿರ್ವಹಣೆಗೆ ಗ್ರಾಪಂಗಳು ಹೆಚ್ಚಿನ ಆದ್ಯತೆ ನೀಡಬೇಕು. ಬರಗಾಲ ಹಾಗೂ ತೆರಿಗೆ ಕೊರತೆಯ ನೆಪದಲ್ಲಿ ಗ್ರಂಥಾಲಯಗಳ ಮೂಲಭೂತ ಅಗತ್ಯಗಳನ್ನೂ ನಿರ್ಲಕ್ಷಿಸಬಾರದು. ಗ್ರಂಥಪಾಲಕರು ತೀರಾ ಸಂಕಷ್ಟದಲ್ಲಿದ್ದಾರೆ. ಅವರ ಬದುಕಿಗೆ ಕೂಡಲೇ ನ್ಯಾಯ ಒದಗಿಸಬೇಕಿದೆ. ರಾಜ್ಯ ಸರ್ಕಾರ ಹೊಸದಾಗಿ ಸ್ಥಾಪಿಸಿರುವ ಪ್ರಜಾ ಸೇವಾ ಸಚಿವಾಲಯವಾದರೂ ಈ ನೌಕರರ ಬಹುದಿನಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮುಂದಾಗಬೇಕು ಎಂದು ಪ್ರಜಾಸೇವಾ ಇಲಾಖೆಗೆ ಲಿಖಿತವಾಗಿಯೂ ಮನವಿ ಮಾಡಿದ್ದೇನೆ ಎನ್ನುತ್ತಾರೆ ಗ್ರಂಥಾಲಯ ಮೇಲ್ವಿಚಾರಕ ಸುರೇಶ ಪತ್ತಾರ.