ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ಪಟ್ಟಣಕ್ಕೆ ಸಾರ್ವಜನಿಕರ ಅರ್ಜಿ ಅಹವಾಲು ಸ್ವಿಕರಿಸಲು ಬುಧವಾರ ಆಗಮಿಸಿದ್ದ ಲೋಕಾಯುಕ್ತ ಇಲಾಖೆ ಎಸ್‌ಪಿ ಜಾನ್ ಆಂಟೋನಿ ಹಾಗೂ ತಂಡದವರು ಇಲ್ಲಿನ 100 ಹಾಸಿಗೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದೀಢಿರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದ ಘಟನೆ ನಡೆಯಿತು.ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ ಮಾತನಾಡಿ, ಆಸ್ಪತ್ರೆಯ ಪ್ರವೇಶ ದ್ವಾರ, ಸಾಮಾನ್ಯ ವಾರ್ಡ್, ಹೊರಾಂಗಣ ಎಲ್ಲಾ ಕಡೆ ಕಸದ ರಾಶಿ ತುಂಬಿದೆ, ಸಿರಿಂಜ್‌ಗಳು, ಬಾಟಲ್‌ಗಳು, ಔಷಧಿಗಳು ಎಲ್ಲೆಂದರಲ್ಲಿ ಬಿದ್ದಿವೆ, ಹೊರ ರೋಗಿಗಳ ವಾರ್ಡನಲ್ಲಿ ಬೆಡ್‌ಶಿಟ್ ಹಾಕಿಲ್ಲ ಸರ್ಕಾರದ ಅನುದಾನ ಸಾಕಷ್ಟು ಬರುತ್ತದೆ, ಬಳಕೆಯೂ ಆಗುತ್ತದೆ ಆದರೂ ಯಾಕೆ ಇಂತಹ ಅವ್ಯವಸ್ಥೆ ಇಟ್ಟುಕೊಂಡಿದ್ದೀರಿ ಎಂದು ವೈದ್ಯಾಧಿಕಾರಿ ಡಾ. ವಿನೋದ ಹಾಗೂ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು.
ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲ, ಹೆರಿಗೆ ಹಾಗೂ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಹಣ ಕೇಳುತ್ತಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಅಧಿಕಾರಿಗಳು ಲಂಚ ಪಡೆದ ಡಿ ದರ್ಜೆ ನೌಕರನಿಂದ ₹1500 ಲಂಚದ ಮಾಹಿತಿ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.ಲೋಕಾಯುಕ್ತ ಡಿವೈಎಸ್‌ಪಿ ಗೀತಾ ಬೇನಹಾಳ ಮಹಿಳಾ ಶೌಚಾಲಯ ವಿಕ್ಷಣೆ ಮಾಡಿ, ಶೌಚಾಲಯಕ್ಕೆ ಬಾಗಿಲು ಇಲ್ಲ, ಶೌಚಕ್ಕೆ ಹೋದವರು ನೀರು ಸಹ ಹಾಕಿಲ್ಲ. 100 ಹಾಸಿಗೆಯ ತಾಲೂಕು ಆಸ್ಪತ್ರೆಯಲ್ಲಿ ಇದೆಂತಾ ಅವ್ಯವಸ್ಥೆ? ದುರ್ನಾತ ಬರುತ್ತಿದ್ದರೂ ತಡೆದುಕೊಂಡು ಇದ್ದೀರಾ? ಸ್ವಲ್ಪವೂ ನಿಮ್ಮಲ್ಲಿ ಕರ್ತವ್ಯ ಪ್ರಜ್ಞೆ ಇಲ್ಲವೇ. ಕೂಡಲೇ ಶೌಚಾಲಯಗಳಿಗೆ ಬಾಗಿಲುಗಳನ್ನು ಅಳವಡಿಸಿ, ಸ್ವಚ್ಛಗೊಳಿಸುವ ಕೆಲಸ ಮಾಡಿಸಿ ಎಂದು ತಾಕೀತು ಮಾಡಿದರು.
ವೈದ್ಯಾಧಿಕಾರಿ ಡಾ. ವಿನೋದ ರಾಠೋಡ ಮಾತನಾಡಿ, ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ಮತ್ತು ಬಯೋಮೇಟ್ರಿಕ್ ಹಾಗೂ ಕುಡಿವ ನೀರಿನ ವ್ಯವಸ್ಥೆ ತುರ್ತಾಗಿ ಮಾಡಿಸಲಾಗುತ್ತದೆ. ಆಸ್ಪತ್ರೆಯ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಸಮಾಜಾಯಿಷಿ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್, ಪಿಐ ರಾಜಶೇಖರ ಹಳಗೋಧಿ, ಪಿಎಸ್‌ಐ ಮಹಿಬೂಬ ಅಲಿ ಸೇರಿದಂತೆ ಲೋಕಾಯುಕ್ತ ಇಲಾಖೆ ಸಿಬ್ಬಂದಿ, ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಇದ್ದರು.