ಸಾರಾಂಶ
- ದಾವಣಗೆರೆ ತಾ. ಕುರ್ಕಿ ಬಳಿ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ದುರಂತ
- - -- ಅವೈಜ್ಞಾನಿಕ ಹೆದ್ದಾರಿ ಎಂದು ಆರೋಪಿಸಿ ರಾತ್ರೋರಾತ್ರಿ ಪ್ರತಿಭಟಿಸಿ ಗ್ರಾಮಸ್ಥರ ಆಕ್ರೋಶ
- ಹಾಲುವರ್ತಿ ರಾಮಣ್ಣ ಹಾಗೂ ಜಯಪ್ಪ ಎಂಬವರ ಮನೆಗಳು ಜಖಂ- ಲಾರಿ ನುಗ್ಗಿದ ರಭಸ ಹೇಗಿತ್ತೆಂದರೆ, ಮನೆಯಿಂದ ಯಾರೂ ಹೊರಬರಲಾಗದೇ ಪರದಾಟ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗಳಿಗೆ ನುಗ್ಗಿ, ಮೇಲ್ಚಾವಣಿಗೆ ತಾಗಿ ನಿಂತು, ದೊಡ್ಡ ದುರಂತ ತಪ್ಪಿದ ಘಟನೆ ತಾಲೂಕಿನ ಕುರ್ಕಿ ಗ್ರಾಮದ ಬಳಿಯ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.ಹಾಲುವರ್ತಿ ರಾಮಣ್ಣ ಹಾಗೂ ಜಯಪ್ಪ ಎಂಬವರ ಮನೆ ಕಡೆ ಲಾರಿಯು ನುಗ್ಗಿಬಂದಿದೆ. ಮನೆ ಮೇಲ್ಚಾವಣಿಗಳು ಗಟ್ಟಿಯಾಗಿದ್ದರ ಫಲವಾಗಿ ಲಾರಿ ಮುಂದೆ ಸಾಗದೇ ಅಲ್ಲಿಯೇ ನಿಂತಿದೆ. ರಾತ್ರಿವೇಳೆ ಆಗಿದ್ದರಿಂದ ಮನೆ ಮುಂಭಾಗದಲ್ಲಿ, ಮನೆಯಂಗಳ, ಸುತ್ತಮುತ್ತ ಯಾರೂ ಇರಲಿಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಲಾರಿ ಮುಂದೆ ನುಗ್ಗಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಒಮ್ಮೆಲೆ ದೊಡ್ಡ ಶಬ್ಧದಿಂದ ಎಚ್ಚೆತ್ತ ಮನೆಗಳ ಸದಸ್ಯರು ಆತಂಕಗೊಂಡರು. ಲಾರಿ ನುಗ್ಗಿದ ರಭಸ ಹೇಗಿತ್ತೆಂದರೆ, ಮನೆಯಿಂದ ಯಾರೂ ಹೊರಬರಲಾಗದೇ, ಬಾಗಿಲು ತೆಗೆದರೂ ಏನೂ ಮಾಡಲಾಗದೇ ಪರದಾಡಿದರು.ಭಾರೀ ಸದ್ದು, ಜನರ ಕೂಗಾಟ ಕೇಳಿ ಗ್ರಾಮಸ್ಥರು ನೆರವಿಗೆ ದೌಡಾಯಿಸಿದ್ದಾರೆ. ಮನೆ ಮಂದಿಯನ್ನು ಏಣಿಯ ಸಹಾಯದೊಂದಿಗೆ ಹೊರಗೆ ಕರೆತರಲಾಯಿತು. ಲಾರಿ ನುಗ್ಗಿದ ರಭಸಕ್ಕೆ ಮನೆ ಮುಂದಿನ ವಿದ್ಯುತ್ ಕಂಬಗಳು ಜಖಂಗೊಂಡಿವೆ. ಹಾಲುವರ್ತಿ ರಾಮಪ್ಪ, ಜಯಪ್ಪನವರ ಮನೆಗೂ ಜಖಂಗೊಂಡಿವೆ. ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯೇ ಅವೈಜ್ಞಾನಿಕವಾಗಿದೆಯೆಂದು ಗ್ರಾಮಸ್ಥರು ರಾತ್ರೋರಾತ್ರಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದರು.
ರಾಜ್ಯ ಹೆದ್ದಾರಿ ಬಂದ್ ಮಾಡಿದ ಗ್ರಾಮಸ್ಥರು ತಮ್ಮ ಊರನ್ನು ಹಾದು ಹೋಗಿರುವ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ, ರಸ್ತೆಯಲ್ಲಿ ಬ್ಯಾರಿಕೇಡ್, ತಡೆಗೋಡೆಯನ್ನು ನಿರ್ಮಿಸುವಂತೆ, ಸೂಚನಾ ಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.ಹದಡಿ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ, ಪ್ರತಿಭಟನಾನಿರತ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದರು.
- - - (ಸಾಂದರ್ಭಿಕ ಚಿತ್ರ)