ಸರ್ಕಾರಿ ಉದ್ಯೋಗಗಳಲ್ಲಿ ಐಚ್ಛಿಕ ಕನ್ನಡವನ್ನು ಅಧ್ಯಯನ ಮಾಡಿದವರಿಗೆ ವಿಶೇಷ ಮೀಸಲಾತಿ ಕಲ್ಪಿಸುವ ಕುರಿತು ಸರ್ಕಾರ ಗಮನಹರಿಸಬೇಕು. ಕನ್ನಡಿಗರ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂರಕ್ಷಣೆ ಮತ್ತು ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಭಾಷಾ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಯುವಜನತೆ ಕೈಜೋಡಿಸಬೇಕು .
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕನ್ನಡಿಗರಾಗಿ ಹುಟ್ಟಿದ ಪ್ರತಿಯೊಬ್ಬರು ನಮ್ಮ ಭಾಷೆಯ ಮೇಲಿನ ಅಭಿಮಾನ ಮತ್ತು ಗೌರವವನ್ನು ಎಂದಿಗೂ ಮರೆಯಬಾರದು. ಕನ್ನಡ ಭಾಷೆಗೆ ತನ್ನದೇ ಆದ ಶ್ರೀಮಂತ ಇತಿಹಾಸ, ಸಾಹಿತ್ಯಕ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವವಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಜಿ. ಸಿದ್ದರಾಮಯ್ಯ ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ''''ಕನ್ನಡ ಕಲರವ'''' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಕೇವಲ ಸಂವಹನ ಭಾಷೆಯಲ್ಲ, ಅದು ಕನ್ನಡಿಗರ ಭಾವನೆ, ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ನಮ್ಮ ಹೃದಯದ ಭಾಷೆಯಾಗಿರುವ ಕನ್ನಡಕ್ಕೆ ಸಾವಿರಾರು ವರ್ಷಗಳ ಸಾಹಿತ್ಯಕ ಹಿನ್ನೆಲೆಯಿದೆ. ಕನ್ನಡದ ಪ್ರಭಾವ ಗ್ರೀಕ್ ನಾಟಕಗಳಲ್ಲಿಯೂ ಉಲ್ಲೇಖಿತವಾಗಿರುವುದು ಭಾಷೆಯ ವ್ಯಾಪಕತೆಯನ್ನು ತೋರಿಸುತ್ತದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕನ್ನಡಿಗರು ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಸಾಧನೆ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ದೇಳಿದರು. ಆದಿಕವಿ ಪಂಪನಿಂದ ಕುಮಾರವ್ಯಾಸ, ಬಸವಣ್ಣನವರಿಂದ ಕುವೆಂಪು ಅವರವರೆಗೆ ಅನೇಕ ಮಹನೀಯರು ತಮ್ಮ ಸಾಹಿತ್ಯ ಮತ್ತು ವಚನಗಳ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಇಂತಹ ಮಹಾನ್ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜತೆಗೆ ಕನ್ನಡ ಸಾಹಿತ್ಯ, ಕವನ, ಕಥೆ ಹಾಗೂ ಮಹನೀಯರ ಜೀವನ ಚರಿತ್ರೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಈರಪ್ಪ ನಾಯಕ ಮಾತನಾಡಿ, ಸರ್ಕಾರಿ ಉದ್ಯೋಗಗಳಲ್ಲಿ ಐಚ್ಛಿಕ ಕನ್ನಡವನ್ನು ಅಧ್ಯಯನ ಮಾಡಿದವರಿಗೆ ವಿಶೇಷ ಮೀಸಲಾತಿ ಕಲ್ಪಿಸುವ ಕುರಿತು ಸರ್ಕಾರ ಗಮನಹರಿಸಬೇಕು. ಕನ್ನಡಿಗರ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂರಕ್ಷಣೆ ಮತ್ತು ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಭಾಷಾ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಯುವಜನತೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ದೀಪಾ ಡಿ.ಎಸ್., ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಚೈತಾಲಿ, ಉಪನ್ಯಾಸಕರಾದ ಕರಿಬಸಣ್ಣ, ರೂಪಾ, ಮುನಿರಾಜು, ಡಾ. ಗಿರಿಜಾ, ಬಿಂದು, ಜ್ಯೋತಿ, ರವಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.--------------