ಆತ್ಮನಿರ್ಭರ ಭಾರತದ ಪರಿಕಲ್ಪನೆ ಇಂದು ದೇಶದ ಅಭಿವೃದ್ಧಿಯ ಪ್ರಮುಖ ಚರ್ಚೆಯಾಗಿದೆ. ಆದರೆ ಮೈಸೂರು ಮಹಾರಾಜರು ಶತಮಾನದ ಹಿಂದೆಯೇ ಸ್ವಾವಲಂಬನೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದ್ದರು. ಮೈಸೂರಿನ ಇತಿಹಾಸ, ಕೈಗಾರಿಕಾ ಬೆಳವಣಿಗೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಅಪರಿಮಿತ.
ಕನ್ನಡಪ್ರಭ ವಾರ್ತೆ ಮೈಸೂರು
ದೂರದೃಷ್ಟಿಯ ಕಲ್ಪನೆಯೊಂದಿಗೆ ಮಹಾರಾಜರು ಶತಮಾನಗಳ ಹಿಂದೆಯೇ ಕೈಗಾರಿಕೆ, ಶಿಕ್ಷಣ, ಬ್ಯಾಂಕಿಂಗ್‌ಕ್ಷೇತ್ರಕ್ಕೆ ಅಪಾರ ಆದ್ಯತೆ ನೀಡಿದ್ದರು ಎಂದು ಮಾಜಿ ಸಚಿವ ಮುರುಗೇಶ್‌ನಿರಾಣಿ ಅಭಿಪ್ರಾಯಪಟ್ಟರು.ಮೈಸೂರಿನ ಜೆಪಿ ನಗರದಲ್ಲಿ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 75ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಆತ್ಮನಿರ್ಭರ ಭಾರತದ ಪರಿಕಲ್ಪನೆ ಇಂದು ದೇಶದ ಅಭಿವೃದ್ಧಿಯ ಪ್ರಮುಖ ಚರ್ಚೆಯಾಗಿದೆ. ಆದರೆ ಮೈಸೂರು ಮಹಾರಾಜರು ಶತಮಾನದ ಹಿಂದೆಯೇ ಸ್ವಾವಲಂಬನೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದ್ದರು. ಮೈಸೂರಿನ ಇತಿಹಾಸ, ಕೈಗಾರಿಕಾ ಬೆಳವಣಿಗೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಅಪರಿಮಿತ. ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೂ ಮಹಾರಾಜರು ಒತ್ತು ನೀಡಿದ್ದರು. ಇವೆಲ್ಲವೂ ಅವರ ದೂರದೃಷ್ಟಿಗೆ ಸಾಕ್ಷಿ ಎಂದು ಹೇಳಿದರು.
ನಮ್ಮ ಕುಟುಂಬಕ್ಕೆ ಬೇಕಾಗುವ ವಸ್ತುಗಳನ್ನು ನಾವೇ ತಯಾರಿಸಬೇಕು. ಬೇರೆ ರಾಜ್ಯ ಅಥವಾ ದೇಶದ ಮೇಲೆ ಅವಲಂಬಿತರಾಗಬಾರದು ಎಂಬ ಚಿಂತನೆ ಶತಮಾನಗಳ ಹಿಂದೆಯೇ ಮೈಸೂರಿನಲ್ಲಿ ಇತ್ತು. ಜನಾ ದೈನಂದಿನ ಬದುಕಿಗೆ ಅಗತ್ಯವಾದ ಹಲವು ವಸ್ತುಗಳ ಉತ್ಪಾದನೆಗೆ ಮೈಸೂರು ಸಂಸ್ಥಾನದಲ್ಲಿ ಉತ್ತೇಜನ ನೀಡಲಾಗಿತ್ತು ಎಂದರು.ಇಂಧನ ಕ್ಷೇತ್ರದಲ್ಲೆಯೂ ಮೈಸೂರು ಶತಮಾನ ಹಿಂದೆಯೇ ಹೆಜ್ಜೆ ಇಟ್ಟಿತ್ತು. ಇಂದು ಎಥನಾಲ್ ಅನ್ನು ಪೆಟ್ರೋಲ್ ಗೆ ಪರ್ಯಾಯವಾಗಿ ಬಳಸುವ ಕುರಿತು ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಆದರೆ, ಮೈಸೂರಿನಲ್ಲಿ ಈ ಪ್ರಯೋಗ ನೂರು ವರ್ಷಗಳ ಹಿಂದೆಯೇ ನಡೆದಿತ್ತು. ಸರ್ ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರಿನಲ್ಲಿ ದಿನಕ್ಕೆ ಸುಮಾರು 30 ಕೆಎಲ್ ಎಥೆನಾಲ್ ಉತ್ಪಾದಿಸುವ ಸಾಮರ್ಥ್ಯದ ಘಟಕವಿತ್ತು. ಅಲ್ಲಿ ಉತ್ಪಾದನೆಯಾದ ಎಥನಾಲ್ ಅನ್ನು ಮುಂದಕ್ಕೆ ಸಾಗಿಸಿ, ವಾಹನಗಳ ಇಂಧನದಲ್ಲಿ ಶೇ. 20ರಷ್ಟು ಮಿಶ್ರಣ ಮಾಡಿ ಬಳಸುವ ಪ್ರಯೋಗ ನಡೆದಿತ್ತು ಎಂದು ಅವರು ವಿವರಿಸಿದರು.
ಮೈಸೂರು ಮಹಾರಾಜರ ಹೆಸರು ದೇಶದ ಶ್ರೀಮಂತ ಹಾಗೂ ಪ್ರಭಾವಿ ರಾಜಮನೆತನಗಳ ಇತಿಹಾಸದಲ್ಲೂ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಅವರು ಕೈಗಾರಿಕೆ, ಶಿಕ್ಷಣ, ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಆಧುನಿಕ ಮೈಸೂರಿನ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿವೆ ಎಂದು ನಿರಾಣಿ ಅವರು ಹೇಳಿದರು.ಬ್ಯಾಂಕಿನಿಂದ 60 ಕೋಟಿ ರು. ನಿವ್ವಳ ಲಾಭ ಇದೆ. ಕಳೆದ 18 ವರ್ಷಗಳಲ್ಲಿ ವಿಜಯ ಸೌಹಾರ್ದ ಸಹಕಾರಿ ಸಂಘ ಹಂತ ಹಂತವಾಗಿ ಶಾಖೆಗಳನ್ನು ವಿಸ್ತರಿಸಿಕೊಂಡಿದ್ದು, ರಾಜ್ಯದ ವಿವಿಧ ಭಾಗಗಳ ಗ್ರಾಹಕರಿಗೆ ಸಮೀಪವಾಗುವ ಪ್ರಯತ್ನ ನಡೆಸಿದೆ. ಅದರಂತೆ ಮೈಸೂರಲ್ಲಿ 75ನೇ ಶಾಖೆ ಆರಂಭವು ಈ ವಿಸ್ತರಣಾ ಪಯಣದ ಪ್ರಮುಖ ಘಟ್ಟವಾಗಿದೆ ಎಂದರು.
ಕಳೆದ ಹಣಕಾಸು ಸಾಲಿನಲ್ಲಿ ಬ್ಯಾಂಕ್ ಸುಮಾರು 65 ಸಾವಿರ ಕೋಟಿ ರೂ. ವಹಿವಾಟು ನಡೆಸಿದ್ದು, 4 ಸಾವಿರ ಕೋಟಿ ರು. ಠೇವಣಿ ಹೊಂದಿದೆ. ಸುಮಾರು 60 ಕೋಟಿ ರು. ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕ್ ನ ಎನ್.ಪಿಎ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ ಎಂದು ಸಂಸ್ಥೆ ಬಗ್ಗೆ ಹೆಮ್ಮೆ ಪಟ್ಟರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಮೈಸೂರು ನಗರದಲ್ಲಿ ಖಾಸಗಿ ಸಂಸ್ಥೆಯೊಂದು ವ್ಯವಹಾರದ ಜೊತೆಗೆ ಜನಸೇವೆಯ ದೃಷ್ಟಿಕೋನವನ್ನೂ ಇಟ್ಟುಕೊಂಡು ತನ್ನ ಸೇವೆಯನ್ನು ವಿಸ್ತರಿಸುತ್ತಿರುವುದು ಶ್ಲಾಘನೀಯ ಎಂದರು.
ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಮೂಲಕ ಈ ವಲಯದ ಅಭಿವೃದ್ಧಿಗೆ ಹೊಸ ಚೌಕಟ್ಟು ರೂಪಿಸಿದೆ. ಸಹಕಾರಿ ಸಂಸ್ಥೆಗಳನ್ನು ಗ್ರಾಮೀಣ ಮಟ್ಟದಿಂದಲೇ ಬಲಪಡಿಸುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಸಹಕಾರಿ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ ಎಂದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು (ಪ್ಯಾಕ್ಸ್) ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಅವುಗಳ ಆಧುನಿಕರಣ ಮತ್ತು ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ಯಾಕ್ಸ್ ಗಳನ್ನೂ ದತ್ತಾಂಶವನ್ನು ಕೇಂದ್ರೀಕರಿಸಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸುಸಜ್ಜಿತ ವ್ಯವಸ್ಥೆ ರೂಪಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದರು.
ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಮೈಸೂರು ಶಾಖೆಯನ್ನು ಉದ್ಘಾಟಿಸಿದರು. ಕಾಗನೆಲೆ ಕನಕ ಗುರು ಪೀಠ (ಮೈಸೂರು ವಿಭಾಗ)ದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಬಿ.ಸಿ. ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಸಿಜಿಎಂ ಎಂ.ಎಚ್. ಪಟೇಲ್, ಬ್ಯಾಂಕಿನ ಎಚ್‌ಆರ್ ಆನಂದ್ ಕುಲಕರ್ಣಿ, ಅಶೋಕ್ ಮೊದಲಾದವರು ಇದ್ದರು.ಮೈಸೂರು ಭಾಗಕ್ಕೆ ಬ್ಯಾಂಕಿಂಗ್ ಕ್ಷೇತ್ರವೂ ವಿಸ್ತರಣೆಮೈಸೂರು ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಿದ್ದ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಮುರುಗೇಶ್ ನಿರಾಣಿ ಅವರು ಈಗ ಬ್ಯಾಂಕಿಂಗ್ ಕ್ಷೇತ್ರವನ್ನು ವಿಸ್ತರಿಸಿದ್ದಾರೆ.
ಅವರೇ ಸಂಸ್ಥಾಪಕ ಅಧ್ಯಕ್ಷರಾಗಿರುವ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 75ನೇ ಶಾಖೆ ತೆರೆಯುವ ಮೂಲಕ ಮೈಸೂರು ಪ್ರಾಂತ್ಯದ ಸಹಕಾರಿ ಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಗುರುತು ಇಟ್ಟಿದ್ದಾರೆ.