ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಕಾರ್ಯಕ್ರಮವನ್ನು ಯಾವುದೇ ಅದ್ದೂರಿತನವಿಲ್ಲದೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ
ಬಳ್ಳಾರಿ: ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಸೇರಿದಂತೆ ಎಲ್ಲ ಧರ್ಮಗ್ರಂಥಗಳ ಮೂಲ ಸಾರ, ಸತ್ಯ, ಪರಸ್ಪರ ಗೌರವ ಹಾಗೂ ಪ್ರೀತಿಯಿಂದ ಬಾಳುವುದನ್ನು ಕೇವಲ ಬೋಧನೆ ಮಾಡದೆ ತಮ್ಮ ಸ್ವಂತ ಜೀವನದಲ್ಲಿ ಅಳವಡಿಸಿಕೊಂಡು ಜೀವಿಸಿದ ಮಹಾತ್ಮರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಹೇಳಿದರು.
ನಗರದ ರೈಲ್ವೆ ನಿಲ್ದಾಣದ ಎದುರುಗಡೆ ಇರುವ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧೀಜಿಯವರ 157ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಕಾರ್ಯಕ್ರಮವನ್ನು ಯಾವುದೇ ಅದ್ದೂರಿತನವಿಲ್ಲದೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಗಾಂಧೀಜಿ ಹುಟ್ಟಿನಿಂದಲೇ ಸಂತರಾಗಿರಲಿಲ್ಲ, ಅವರೂ ತಪ್ಪು ಮಾಡಿದ್ದರು. ಆದರೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ತಪ್ಪು ತಿದ್ದಿಕೊಂಡು ಸತ್ಯದ ಹಾದಿಯಲ್ಲಿ ನಡೆಯುವ ಅವಕಾಶವಿದೆ ಎಂಬುದನ್ನು ಅವರ ಜೀವನ ತೋರಿಸಿಕೊಟ್ಟಿದೆ. ಸುಳ್ಳಿನ ಹಾದಿ ಸುಲಭವೆನಿಸಿದರೂ ಅಂತಿಮವಾಗಿ ಸತ್ಯ ಮತ್ತು ಸರಳ ಜೀವನವೇ ನಿಜವಾದ ಸಂತೋಷ ನೀಡುತ್ತದೆ ಎಂದರು.ಪ್ರಾಪಂಚಿಕ ವ್ಯಾಮೋಹಗಳಿಂದ ಮುಕ್ತರಾಗಿ ಸನ್ಮಾರ್ಗದಲ್ಲಿ ಸಾಗುವುದೇ ಎಲ್ಲ ತತ್ವಶಾಸ್ತ್ರಗಳ ಸಾರವಾಗಿದೆ. ಇಂದಿನ ಆಧುನಿಕ ಯುಗದ ಯುವಪೀಳಿಗೆ ಗಾಂಧೀಜಿ ತತ್ವಾದರ್ಶ ಹಾಗೂ ಜೀವನ ಮೌಲ್ಯ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಕೃತಕ ಬುದ್ಧಿಮತ್ತೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಮಹಾತ್ಮ ಗಾಂಧೀಜಿ ಜೀವನ ಮೌಲ್ಯಗಳು ಹಾಗೂ ತತ್ವಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಎಂದು ಹೇಳಿದರು.ಗಾಂಧೀಜಿ ಅಂದೇ ಸುಸ್ಥಿರ ಅಭಿವೃದ್ಧಿ ಕುರಿತು ಪ್ರತಿಪಾದಿಸಿದ್ದರು. ಪ್ರಸ್ತುತ ಜಗತ್ತು ಎದುರಿಸುತ್ತಿರುವ ಹವಾಮಾನ ವೈಪರೀತ್ಯ ಸಮಸ್ಯೆಗೆ ಅವರ ಪರಿಸರಸ್ನೇಹಿ ಚಿಂತನೆ ಇಂದಿಗೂ ಪ್ರಮುಖ ಮಾರ್ಗದರ್ಶಿಯಾಗಿವೆ. ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಆಗಮನದಿಂದ ಉದ್ಯೋಗ ಕಡಿತದ ಆತಂಕ ಎದುರಾಗಿರುವ ಈ ಕಾಲಘಟ್ಟದಲ್ಲಿ ಮಾನವ ಶ್ರಮ ಮತ್ತು ಕೌಶಲ್ಯ ಮಹತ್ವದ ಬಗ್ಗೆ ಗಾಂಧೀಜಿ ಅಂದೇ ಎಚ್ಚರಿಸಿದ್ದರು.
ನೂತನ ತಂತ್ರಜ್ಞಾನ ನೈತಿಕವಾಗಿ ಸಮಾಜಕ್ಕೆ ಪೂರಕವಾಗಿ ಅಳವಡಿಸಿಕೊಳ್ಳಲು ಗಾಂಧಿ ತತ್ವ ಅತ್ಯಗತ್ಯ. ಅವರ ಸರಳತೆ ಮತ್ತು ಸ್ಥಿತಪ್ರಜ್ಞ ವ್ಯಕ್ತಿತ್ವವು ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಮಾದರಿಯಾಗಿದೆ ಎಂದರು.ಮಹಾತ್ಮ ಗಾಂಧೀಜಿ ಜೀವನ ಚರಿತ್ರೆ ಕುರಿತು ಬಳ್ಳಾರಿಯ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷ ವಿಶೇಷ ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸರ್ವಧರ್ಮ ಗ್ರಂಥಗಳ ಬೋಧನೆ ಮಾಡಿದ್ದು, ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಎನ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಸಹಾಯಕ ಆಯುಕ್ತ ಎಚ್.ಡಿ.ರಾಜೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ್, ಪ್ರದಸ ನವೀನ್ ಕುಮಾರ್.ಜಿ., ಸಿಬ್ಬಂದಿ ಹನುಮೇಶ್.ಎಚ್.,ವಿಜಯ್ ಕುಮಾರ್, ಮಲ್ಲೇಶಪ್ಪ, ಹನುಮಂತಪ್ಪ, ರೋಜಮೇರಿ, ಮುತ್ತಣ್ಣ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿ, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.