ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿಂದೂ ಧರ್ಮ ಒಡೆಯುವುದೇ ಕಾಂಗ್ರೆಸ್ ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಜಾತಿ ಸಮೀಕ್ಷೆಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಉಪಜಾತಿಗಳನ್ನು ಕ್ರೆಸ್ತ್ ಧರ್ಮದ ಪಟ್ಟಿಯಲ್ಲಿ ತೋರಿಸುವ ದುಸ್ಸಾಹಸಕ್ಕೆ ಕೈಹಾಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಕಿಡಿಕಾರಿದರು.ಇಲ್ಲಿನ ಗಾಂಧಿ ಭವನದಲ್ಲಿ ಹಿಂದೂ ಜನ ಜಾಗೃತಿ ವೇದಿಕೆಯ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಹಿಂದೂ ಜಾತಿಗಳ ನಡುವೆ ಕ್ರೈಸ್ತರನ್ನು ನುಗ್ಗಿಸುವ ಹುನ್ನಾರದ ವಿರುದ್ಧ ಜನಜಾಗೃತಿ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಸಮೀಕ್ಷೆಯ ಪ್ರಕಟಿತ ಪಟ್ಟಿಯಲ್ಲಿ ಎಲ್ಲ ಹಿಂದೂ ಸಮುದಾಯದ ಜಾತಿ ಮತ್ತು ಉಪಜಾತಿಗಳಲ್ಲಿ ಇಲ್ಲದೇ ಇರುವ ಹೊಸ ಕ್ರಿಶ್ಚಿಯನ್ ಎಂಬ ಉಪಜಾತಿ ಸೃಷ್ಟಿಸಿದ್ದರಿಂದ ಸಮಾಜದ ಜನರಲ್ಲಿ ಗೊಂದಲ ಮೂಡಿಸಿ ದ್ವೇಷ ಮತ್ತು ಕೋಮುವಾದ ಬೆಳೆಯುವ ಸಾಧ್ಯೆತೆ ಇದೆ. ಸಮಾಜದಲ್ಲಿ ಒಡೆದು ಆಳುವ ನೀತಿಯನ್ನು ಸರ್ಕಾರ ಮಾಡುತ್ತಿದೆ. ಸಮೀಕ್ಷೆ ನೆಪ ಇಟ್ಟುಕೊಂಡು ಮತಾಂತರ ಮಾಡಿ ಸಮಾಜ ಒಡೆಯುವ ಕೆಲಸ ಸರಿಯಲ್ಲ. ಸರ್ಕಾರ ಇದರಲ್ಲಿ ವಿಫಲವಾಗಲಿದೆ. ಈ ಬಗ್ಗೆ ಎಲ್ಲ ಸಮಾಜದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೋರಿದರು.ಬಿಜೆಪಿ ಮುಖಂಡ ಎಂ.ಬಿ.ಝಿರಲಿ ಮಾತನಾಡಿ, ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ನೆಪದಲ್ಲಿ ಕರ್ನಾಟಕ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿ ಸ್ವಯಂಪ್ರೇರಿತವಾಗಿ ಮತಾಂತರಗೊಳ್ಳಲು ಅವಕಾಶವಿದೆ. ಆದರೆ, ಸರ್ಕಾರ ಇಲ್ಲದೇ ಇರುವ ಜಾತಿಗಳಿಗೆ ಕ್ರಿಶ್ಚಿಯನ್ ಪದ ಬಳಿಸಿ ಉಪಜಾತಿಗಳನ್ನು ಸೃಷ್ಟಿಸಿ ಮಂತಾತರಕ್ಕೆ ಒತ್ತಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಮಾಡುವ ಸಮೀಕ್ಷೆಯ ರೀತಿ ಖಂಡನೀಯ ಹಿಂದೂ ಸಮಾಜ ಶಾಂತಿಯನ್ನು ಬಯಸಿದ್ದು, ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು. ಸರ್ಕಾರ ನಡೆಸಿರುವುದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ. ಜಾತಿ ಸಮೀಕ್ಷೆಯಲ್ಲ ಎಂದು ಸಿ.ಎಂ.ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಕ್ರೈಸ್ತ್ ಮತವನ್ನು ಸೇರಿಸಿರುವುದು ಏಕೆ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಅದರ ಪ್ರಕ್ರಿಯೆ ಖಂಡನೀಯವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 52 ಜಾತಿಗಳಿಗೆ ಉಪಜಾತಿಯಾಗಿ ಕ್ರೈಸ್ತ ಮತವನ್ನು ಸೇರಿಸುತ್ತಿದೆ. ಇದು ಜಾತಿ ಸಮೀಕ್ಷೆಯಲ್ಲ ಎಂದರೇ ಉಪಜಾತಿಗಳನ್ನು ಕಾಲಂನಲ್ಲಿ ನೀಡಿದ್ದೇಕೆ ಎಂದು ಆಕ್ರೊಶ ವ್ಯಕ್ತಪಡಿಸಿದರು.ಮಾಜಿ ಶಾಸಕ ಅನೀಲ ಬೆನಕೆ, ಬಿಜೆಪಿ ಮುಖಂಡ ಮುರುಘಂದ್ರಗೌಡ ಪಾಟೀಲ ಸೇರಿದಂತೆ ಶ್ರೀಗಳು ಹಿಂದೂ ಸಮಾಜದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.ಹಿಂದೂ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ವತಿಯಿಂದ ರಾಜ್ಯಪಾಲರಿಗೆ ಮನವಿ
ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಉಪ ಜಾತಿಗಳಿಗೆ ಕ್ರಿಶ್ಚಿಯನ್ ಪದ ಸೇರಿಸಿರುವ ಕ್ರಮದ ವಿರುದ್ಧ ಹಿಂದೂ ಸಮಾಜದ ಮುಖಂಡರಿಂದ ಆಕ್ರೋಶ ವ್ಯಕ್ತವಾಯಿತು.ಇಲ್ಲಿನ ಗಾಂಧಿ ಭವನದಲ್ಲಿ ಹಿಂದೂ ಜನ ಜಾಗೃತಿ ವೇದಿಕೆಯ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಹಿಂದೂ ಜಾತಿಗಳ ನಡುವೆ ಕ್ರೈಸ್ತರನ್ನು ನುಗ್ಗಿಸುವ ಹುನ್ನಾರದ ವಿರುದ್ಧ ಜನಜಾಗೃತಿ ದುಂಡು ಮೇಜಿನ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಬಹುತೇಕ ಮುಖಂಡರು, ಹಿಂದೂ ಧರ್ಮವನ್ನು ಒಡೆಯಲು ಸರ್ಕಾರ ನಡೆಸಿರುವ ಹುನ್ನಾರು ಎಂದು ಹರಿಹಾಯ್ದರು. ಹಿಂದು ಸಮಾಜದ ಹಲವಾರು ಮುಖಂಡರು ಮಾತನಾಡಿ, ಜಾತಿಗಳಿಗೆ ಕ್ರಿಶ್ಚಿಯನ್ ಪದ ಸೇರಿಸಿರುವುದನ್ನು ಖಂಡಿಸಿ, ಹಿಂದೂ ಜನ ಜಾಗೃತಿ ವೇದಿಕೆಯ ಹೋರಾಟಕ್ಕೆ ಬೆಂಬಲವಿರುವುದಾಗಿ ಘೋಷಿಸಿದರು.
ಸಭೆ ಬಳಿಕ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಮೀಕ್ಷೆಯಲ್ಲಿ ಹೊಸದಾಗಿ ಕ್ರಿಶ್ಚಿಯನ್ ಎಂಬ ಹೊಸ ಉಪಜಾತಿ ಸೃಷ್ಟಿಸಲಾಗಿದೆ. ಇದರಿಂದ ಸಮಾಜದಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿದೆ. ಹೀಗಾಗಿ ಇದನ್ನು ಸಮೀಕ್ಷೆ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಬುಧವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಸಮೀಕ್ಷೆಗಾಗಿ ಪ್ರಕಟಿಸಿದ ಪಟ್ಟಿಯಲ್ಲಿ ಹಿಂದೂ ಧರ್ಮದ 46 ಉಪಜಾತಿಗಳು ಮುಂದು ಕ್ರಿಶ್ಚಿಯನ್ ಎಂದು ನಮೂದಿಸಲಾಗಿದೆ. ಈ ಸಮೀಕ್ಷೆ ಮೂಲಕ ಹಿಂದೂ ಧರ್ಮದ ವಿಭಜನೆಗೆ ಸರ್ಕಾರದ ಮುಂದಾಗಿದೆ. ಅಲ್ಲದೇ, ಮತಾಂತರಕ್ಕೆ ಕುಮ್ಮಕ್ಕು ನೀಡಿದಂತಾಗಿದೆ.
-ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ.