ಸಾರಾಂಶ
-ಆರ್ಯಭಟ ಅಂತಾರಾಷ್ಟ್ರೀಯ ಅಕಾಡೆಮಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
---------ಕನ್ನಡಪ್ರಭ ವಾರ್ತೆ ಯಾದಗಿರಿಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ದೇಶದ ಇತಿಹಾಸ, ವಿಜ್ಞಾನ, ಗಣಿತ ವಿಷಯಗಳ ಬಗ್ಗೆ ವಿಷಯ ತಜ್ಞರಿಂದ ಅಗತ್ಯ ಉಪನ್ಯಾಸ, ಮಾಹಿತಿ ನೀಡುವುದೇ ಪ್ರಮುಖ ಉದ್ದೇಶ ಎಂದು ಅಕಾಡೆಮಿಯ ಅಧ್ಯಕ್ಷ ಸುಧಾಕರರೆಡ್ಡಿ ಮಾಲಿ ಪಾಟೀಲ್ ಅನಪೂರ ಹೇಳಿದರು.
ನಗರದ ಆರ್ಯಭಟ ಅಂತಾರಾಷ್ಟ್ರೀಯ ಅಕಾಡೆಮಿ ಶಾಲೆಯಲ್ಲಿ ನಡೆದಿರುವ ವಿಜ್ಞಾನ ವಸ್ತು ಪ್ರದರ್ಶನ ಸಂದರ್ಭದಲ್ಲಿ ಮಾತನಾಡಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿರುವುದರಿಂದ ಬರುವ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಕಾಣಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಹೊರವಲಯದಲ್ಲಿರುವ ಆರ್ಯಭಟ ಅಂತಾರಾಷ್ಟ್ರೀಯ ಅಕಾಡೆಮಿ ಶಾಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಪ್ರಥಮ ಬಾರಿಗೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಲು ಜಿಲ್ಲೆಯ ನಾನಾ ಭಾಗಗಳ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ನಿರೀಕ್ಷೆಗೆ ಮೀರಿ ಆಗಮಿಸಿ ಅಗತ್ಯ ಮಾಹಿತಿ ಪಡೆದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಮತ್ತು ಬಯೋಟೆಕ್ನಾಲಜಿ, ವಿಷಯಗಳಿಗೆ ಸಂಬಂಧಿಸಿದಂತೆ ವಿಜ್ಞಾನ ಮಾದರಿಗಳನ್ನು ಪ್ರದರ್ಶನದಲ್ಲಿ ಇರಿಸಿದ್ದರು. ವಿಜ್ಞಾನ ಮಾದರಿಯನ್ನು ವೀಕ್ಷಿಸಿ ವಿದ್ಯಾರ್ಥಿಗಳಿಂದ ಅಗತ್ಯ ಮಾಹಿತಿ ಪಡೆದರು.ಐತಿಹಾಸಿಕ ನಾಣ್ಯಶಾಸ್ತ್ರಜ್ಞ ಹೈದ್ರಾಬಾದ್ ನ ರಮೇಶ ಕುಮಾರ್, ಅವರ ಪ್ರಾಚೀನ ವಿಜಯನಗರ, ಪದ್ಮಾನಾಯಕ, ಚಾಲುಕ್ಯರ, ರಾಷ್ಟ್ರಕೂಟರ, ಚೋಳರ, ಟಿಪ್ಪು ಸುಲ್ತಾನ, ಮೊಘಲರ, ಕಾಕತೀಯ, ಮರಾಠ, ದಿಲ್ಲಿ ಸುಲ್ತಾನರ, ಶಾತವಾಹನರ್, ಮೊದಲಾದ ಸಾಮ್ರಾಜ್ಯಗಳ ಅಧಿಕಾರ ಅವಧಿಯಲ್ಲಿ ಚಲಾವಣೆಯಲ್ಲಿದ್ದ ಬೆಳ್ಳಿ, ಬಂಗಾರ, ಸ್ಮರಣೀಯ ನಾಣ್ಯ, ನೋಟುಗಳನ್ನು ಹಾಗೂ 250 ವಿದೇಶಗಳ ನೋಟುಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು ತಜ್ಞರಿಂದ ಮಾಹಿತಿ ಪಡೆದರು.
ಎಎಂಡಿ ಬೆಂಗಳೂರ ಸಂಸ್ಥೆಯ ಪಂಚಮುಖಿ ಅವರು ಪ್ರದರ್ಶನಕ್ಕೆ ಇರಿಸಿದ್ದ ವಿವಿಧ ಖನಿಜ ವಸ್ತುಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು ಭೂಗರ್ಭದಲ್ಲಿ ಇರುವ ಮಹತ್ವದ ಖನಿಜಗಳ ಸಂಪತ್ತಿನ ಸಮಗ್ರ ವಿವರ ಪಡೆದು ಅಚ್ಚರಿ ವ್ಯಕ್ತಪಡಿಸಿದರು.------
ಫೋಟೊ:ಯಾದಗಿರಿ ನಗರದ ಆರ್ಯಭಟ ಅಂತಾರಾಷ್ಟ್ರೀಯ ಅಕಾಡೆಮಿ ಶಾಲೆಯಲ್ಲಿ ನಡೆದಿರುವ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಲು ಜಿಲ್ಲೆಯ ನಾನಾ ಭಾಗಗಳ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿರುವುದು.21ವೈಡಿಆರ್3: