ಪ್ರವಾಸಿ ನಿರ್ವಚನಾ ಕೇಂದ್ರಕ್ಕೆ ಯಾವಾಗ ವಿಮೋಚನೆ?

| Published : Dec 22 2024, 01:34 AM IST

ಪ್ರವಾಸಿ ನಿರ್ವಚನಾ ಕೇಂದ್ರಕ್ಕೆ ಯಾವಾಗ ವಿಮೋಚನೆ?
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇವಾಡಿ ಸರ್ಕಾರಿ ಪದವಿ ಕಾಲೇಜಿನ ಹತ್ತಿರದಲ್ಲಿ ನಿರ್ಮಿಸಲಾಗಿರುವ ಪ್ರವಾಸಿ ನಿರ್ವಚನಾ ಕೇಂದ್ರ ಎರಡು ವರ್ಷವಾದರೂ ಕಾರ್ಯಾರಂಭ ಮಾಡಿಲ್ಲ

ಗುರುಶಾಂತ ಜಡೆಹಿರೇಮಠ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ ಹಾಗೂ ಸುತ್ತಮುತ್ತಲ ಪ್ರದೇಶ ಪ್ರವಾಸೋದ್ಯಮ ನಗರವಾಗಿ ಬೆಳೆಯುತ್ತಿದ್ದು, ಪ್ರವಾಸಿಗರಿಗೆ ಇಲ್ಲಿಯ ಪ್ರವಾಸೋದ್ಯಮ ಸ್ಥಳಗಳ ಮತ್ತು ಚಟುವಟಿಕೆ ಕುರಿತು ಮಾಹಿತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಕಳೆದ ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಪ್ರವಾಸಿ ನಿರ್ವಚನಾ ಕೇಂದ್ರ ಬಳಕೆಯಾಗದೆ ಬಣಗುಡುತ್ತಿದೆ.

ಹಿರಿಯ ಶಾಸಕ ಆರ್.ವಿ. ದೇಶಪಾಂಡೆಯವರು ಆಗ ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ಈ ಭಾಗದ ಪ್ರವಾಸೋದ್ಯಮಕ್ಕಾಗಿ ಹತ್ತಾರು ಯೋಜನೆ ಮತ್ತು ಅನುದಾನ ತಂದಿದ್ದರು. ಅವುಗಳಲ್ಲಿ ಈ ಪ್ರವಾಸಿ ನಿರ್ವಚನಾ ಕೇಂದ್ರವೂ ಒಂದು. ಇದನ್ನು ನಗರದ ಅಂಬೇವಾಡಿ ಸರ್ಕಾರಿ ಪದವಿ ಕಾಲೇಜಿನ ಹತ್ತಿರದಲ್ಲಿ ನಿರ್ಮಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಂಡ ಈ ಕೇಂದ್ರಕ್ಕೆ ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಖರ್ಚಾಗಿದೆ. ಸುಮಾರು ೨ ಎಕರೆಯಷ್ಟು ಜಾಗದಲ್ಲಿ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣಗೊಂಡಿದೆ.

ಇದು ಜನವರಿ 31, ೨೦೨೩ರಂದು ಉದ್ಘಾಟನೆಗೊಂಡಿದ್ದು, ಕಟ್ಟಡಕ್ಕೆ ಅಗತ್ಯ ಮೂಲ ಸೌಕರ್ಯ, ಸಿಬ್ಬಂದಿ ಇದುವರೆಗೂ ಒದಗಿಸಿಲ್ಲ ಎಂಬ ಮಾತಿದೆ. ಉದ್ಘಾಟನೆಗೊಂಡ ದಿನದಿಂದ ಇಲ್ಲಿ ವರೆಗೆ ಈ ಕೇಂದ್ರದ ಬಾಗಿಲು ಮುಚ್ಚಿಕೊಂಡಿದೆ.

ಇತ್ತ ಪ್ರವಾಸಿಗರು ಸುಳಿವೂ ಇಲ್ಲ. ದಾಂಡೇಲಿ ನಗರ ಪ್ರದೇಶದಿಂದ ನಾಲ್ಕು ಕಿಮೀ ದೂರವಿರುವುದರಿಂದ ಇತ್ತ ಪ್ರವಾಸಿಗರು ಬರುವುದೇ ಇಲ್ಲ. ಪ್ರವಾಸಿಗರು ದಾಂಡೇಲಿ ನಗರದಲ್ಲಿಯೇ ಇಳಿದು ನೇರವಾಗಿ ತಾವು ಬುಕ್ ಮಾಡಿದ ಹೋಂ ಸ್ವೇ, ರೆಸಾರ್ಟ್‌ಗಳಿಗೆ ಹೋಗುತ್ತಾರೆ. ಇಂತದೊಂದು ಕೇಂದ್ರ ಇದೆ ಎಂದು ಎಲ್ಲೂ ಕೂಡ ನಾಮಫಲಕವಿಲ್ಲ. ಇದರ ಕುರಿತು ಪ್ರಚಾರವನ್ನು ಯಾರೂ ಮಾಡಿಲ್ಲ.

ಇಕೋ ಟೂರಿಸಂಗೆ ಬಳಕೆ

ಈ ಕಟ್ಟಡವನ್ನು ಇಕೋ ಟೂರಿಸಂಗೆ ಬಳಸಿಕೊಳ್ಳವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಮತ್ತು ಜಂಗಲ್ ಲಾಡ್ಜ್‌ನವರು ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಇಕೋ ಟೂರಿಸಂಗೆ ಸಂಬಂಧಪಟ್ಟ ಚಟುವಟಿಕೆ ನಡೆಸುವ ಆಲೋಚನೆ ಇದೆ ಎನ್ನಲಾಗಿದೆ.

ಕಟ್ಟಡ ನಿರ್ಮಾಣದ ಸ್ಥಳವೇ ಅವೈಜ್ಞಾನಿಕವಾದದ್ದು ಎಂಬುದು ಸ್ಥಳೀಯರ ಮಾತಾಗಿದೆ. ಕಟ್ಟಡ ಮೊದಲ ಅಂತಸ್ತಿನ ಕಿಟಕಿ ಗಾಜು ಒಡೆದಿದ್ದು, ಹಾಕಿದ ವಿದ್ಯುತ್ ಪರಿಕರಗಳ ಸಂಪರ್ಕ ದುರಸ್ತಿಗೆ ಬಂದಿವೆ. ಇದು ಅಕ್ಕಪಕ್ಕದವರಿಗೆ ಬಟ್ಟೆ ಒಣಗಿಸುವ ಸ್ಥಳವಾಗಿದೆ. ಮಕ್ಕಳಿಗೆ ಆಟವಾಡುವ ಬಯಲು ಪ್ರದೇಶವಾಗಿದೆ. ಇದನ್ನು ನೋಡಿಕೊಳ್ಳಲು ಯಾರೂ ಇಲ್ಲ. ಒಟ್ಟಾರೆ ಈ ಪ್ರವಾಸಿ ನಿರ್ವಚನಾ ಕೇಂದ್ರಕ್ಕೆ ವಿಮೋಚನೆ ಸಿಗುವುದು ಯಾವಾಗ ಎಂದು ಕಾದು ನೋಡಬೇಕಿದೆ.ಶೀಘ್ರ ಆರಂಭ

ಈ ಕಟ್ಟಡ ನಿರ್ಮಾಣವಾದ ಬಳಿಕ ಒಂದಿಷ್ಟು ಕೆಲಸಗಳು ಬಾಕಿ ಇದ್ದವು. ಈಗ ಅವೆಲ್ಲವೂ ಮುಗಿದಿವೆ. ಈಗ ಜಂಗಲ್ ಲಾಡ್ಜ್ ಮತ್ತು ಅರಣ್ಯ ಇಲಾಖೆಯವರ ಜೊತೆ ಪ್ರವಾಸೋದ್ಯಮ ಇಲಾಖೆ ಕೂಡ ಸೇರಿ ಇಕೋ ಟೂರಿಸಂ ನಡೆಸುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಸದ್ಯದಲ್ಲಿಯೇ ಕೇಂದ್ರ ಆರಂಭವಾಗಲಿದೆ.-ಕೆ.ಜಯಂತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ