ಒಕ್ಕೂಟದಲ್ಲಿ ಪಾರದರ್ಶಕ ವ್ಯವಹಾರ ನಿರ್ವಹಿಸುವುದೇ ಮಹಾಸಭೆ ಮುಖ್ಯ ಉದ್ದೇಶ

| Published : Sep 12 2024, 01:55 AM IST

ಒಕ್ಕೂಟದಲ್ಲಿ ಪಾರದರ್ಶಕ ವ್ಯವಹಾರ ನಿರ್ವಹಿಸುವುದೇ ಮಹಾಸಭೆ ಮುಖ್ಯ ಉದ್ದೇಶ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳಲ್ಲಿ ಆಗಿರುವ ಲೆಕ್ಕಾಚಾರಗಳನ್ನು ವಾರ್ಷಿಕ ಮಹಾ ಸಭೆಯಲ್ಲಿ ಪಾರದರ್ಶಕವಾಗಿ ಪ್ರದರ್ಶಿಸಲಾಗುತ್ತದೆ ಎಂದು ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕ ರಾಜೇಶ್ ಹೇಳಿದರು.

- ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ರಾಜೇಶ್ ಹೇಳಿಕೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳಲ್ಲಿ ಆಗಿರುವ ಲೆಕ್ಕಾಚಾರಗಳನ್ನು ವಾರ್ಷಿಕ ಮಹಾ ಸಭೆಯಲ್ಲಿ ಪಾರದರ್ಶಕವಾಗಿ ಪ್ರದರ್ಶಿಸಲಾಗುತ್ತದೆ ಎಂದು ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕ ರಾಜೇಶ್ ಹೇಳಿದರು.

ಮಂಗಳವಾರ ತಾಲೂಕಿನ ನಾಗಲಾಪುರ ಗ್ರಾಪಂನಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಈ ಸಭೆಯಲ್ಲಿ ಒಕ್ಕೂಟದ ವಾರ್ಷಿಕ ವರದಿಗಳು, ವಾರ್ಷಿಕ ಲೆಕ್ಕಗಳನ್ನು ಮಂಡಿಸಲಾಗುತ್ತದೆ. ಈ ಸಭೆ ಮೂಲಕ ಒಕ್ಕೂಟದ ಚಟುವಟಿಕೆಗಳ ಬಗ್ಗೆ ಚರ್ಚೆ, ವಿಮರ್ಶೆಗಳು, ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಚರ್ಚಿಸಲಾಗುತ್ತದೆ. ಒಕ್ಕೂಟದಲ್ಲಿ ಪಾರದರ್ಶಕ ವ್ಯವಹಾರ ಕಾದುಕೊಳ್ಳುವುದೇ ಈ ಮಹಾಸಭೆಯ ಮುಖ್ಯ ಉದ್ದೇಶವಾಗಿದೆ ಎಂದರು.

ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ ಸಭೆ ಉದ್ಘಾಟಿಸಿ ಮಾತನಾಡಿ, ಆದಷ್ಟು ಬೇಗ ಜಿಪಿಎಲ್‌ಎಫ್ ಕಚೇರಿಯ ವ್ಯವಸ್ಥೆ ಮಾಡಿಕೊಡಲಾಗುವುದು. ನಲ್‌ ಜಲ್ ಮಿತ್ರ ಅಡಿ ಆಯ್ಕೆಯಾಗಿರುವ ಎಲ್ಲಾ ಸ್ವ ಸಹಾಯ ಸಂಘದ ಸದಸ್ಯರು ಕಡ್ಡಾಯವಾಗಿ ತರಬೇತಿಗಳಿಗೆ ಹಾಜರಾಗಬೇಕು ಎಂದು ಸೂಚಿಸಿದರು.

ಎನ್.ಆರ್.ಎಲ್.ಎಂ. ಯೋಜನೆಯ ತಾಲೂಕು ವ್ಯವಸ್ಥಾಪಕ ಸುಬ್ರಮಣ್ಯ ಮಾತನಾಡಿ, ಈ ಸಭೆಯಲ್ಲಿ 2021 ರಿಂದ 2024 ರವರೆಗಿನ ಎಲ್ಲಾ ವಾರ್ಷಿಕ ಲೆಕ್ಕ ಪರಿಶೋಧನೆ ನಡೆಸಲಾಗುತ್ತದೆ. ಕರ್ನಾಟಕ ಸರ್ಕಾರ ಸಹಕಾರ ಸಂಘಗಳ ಕಾಯ್ದೆ 1960 ರಡಿ ಪ್ರತೀ ಎರಡು ವರ್ಷಕ್ಕೊಮ್ಮೆ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರತೀ ವರ್ಷ ವಾರ್ಷಿಕ ಮಹಾ ಸಭೆಗಳನ್ನು ಎಲ್ಲಾ ಗ್ರಾಪಂ ಮಟ್ಟದಲ್ಲೂ ಕೂಡ ನಡೆಸಲಾಗುತ್ತದೆ. ಕಾರ್ಯಕಾರಿಣಿ ಸಮಿತಿ ಸದಸ್ಯರು, ಒಕ್ಕೂಟದ ಸಮಗ್ರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ನಾಗಲಾಪುರ ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟದ ನೂತನ ಅಧ್ಯಕ್ಷರನ್ನಾಗಿ ಭಾರತಿ, ಕಾರ್ಯದರ್ಶಿಯಾಗಿ ಮೇರಿ, ಖಜಾಂಚಿಯಾಗಿ ದಿವ್ಯಾ ಅವರನ್ನು ಆಯ್ಕೆ ಮಾಡಲಾಯಿತು. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಕು. ವಿದ್ಯಾ ವಾರ್ಷಿಕ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಕಮಲ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಪಂ. ಸದಸ್ಯ ರಮೇಶ್, ಗ್ರಾಪಂ ಮಟ್ಟದ ಒಕ್ಕೂಟದ ಕಾರ್ಯದರ್ಶಿ ರಾಧಾ, ಖಜಾಂಚಿ ಅನ್ನಪೂರ್ಣ, ಗ್ರಾ.ಪಂ. ಕಾರ್ಯದರ್ಶಿ ಪಿ.ಕೆ. ಪ್ರಕಾಶ್, ನಾಗಲಾಪುರ ಸಂಜೀವಿನಿ ಒಕ್ಕೂಟದ ಸಿಬ್ಬಂದಿ, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ, ವಾರ್ಡ್ ಮಟ್ಟದ ಒಕ್ಕೂಟದ ಪದಾಧಿಕಾರಿಗಳು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.