ಶೃಂಗೇರಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಸಜ್ಜಿತ ಕಟ್ಟಡ, ಔಷಧಾಲಯ, ಔಷಧಿ ಸಾಮಗ್ರಿಗಳು, ಸುಸಜ್ಜಿತ ಬೆಡ್ ಗಳು, ಕುಡಿಯುವ ನೀರು, ಶೌಚಾಲಯ, ಕ್ಯಾಂಟೀನ್, ಎಕ್ಸರೆ, ಆಕ್ಸಿಜನ್ ಘಟಕ ಸಹಿತ ಎಲ್ಲಾ ರೀತಿ ಮೂಲ ಸೌಕರ್ಯಗಳಿಂದ ಕೂಡಿ ದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ವೈದ್ಯರೇ ಇಲ್ಲದೆ ಜನ ಹಿಡಿ ಶಾಪ ಹಾಕುವಂತಾಗಿದೆ.

-ಶೃಂಗೇರಿ: 96 ಹುದ್ದೆಗಳಲ್ಲಿ ಕೇವಲ 20 ಭರ್ತಿ, ಉಳಿದೆಲ್ಲ ಖಾಲಿ ಖಾಲಿ

ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಸಜ್ಜಿತ ಕಟ್ಟಡ, ಔಷಧಾಲಯ, ಔಷಧಿ ಸಾಮಗ್ರಿಗಳು, ಸುಸಜ್ಜಿತ ಬೆಡ್ ಗಳು, ಕುಡಿಯುವ ನೀರು, ಶೌಚಾಲಯ, ಕ್ಯಾಂಟೀನ್, ಎಕ್ಸರೆ, ಆಕ್ಸಿಜನ್ ಘಟಕ ಸಹಿತ ಎಲ್ಲಾ ರೀತಿ ಮೂಲ ಸೌಕರ್ಯಗಳಿಂದ ಕೂಡಿ ದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ವೈದ್ಯರೇ ಇಲ್ಲದೆ ಜನ ಹಿಡಿ ಶಾಪ ಹಾಕುವಂತಾಗಿದೆ.

ಕಳೆದ ಹಲವು ದಶಕಗಳಿಂದಲೂ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಕಾಡುತ್ತಲೇ ಇದ್ದರೂ ಇದನ್ನು ಸರಿ ಪಡಿಸಲು ಮಾತ್ರ ಅಧಿಕಾರಿಯಾದಿಯಾಗಿ ಜನಪ್ರತಿನಿಧಿಗಳು ಮನಸ್ಸು ಮಾಡದೆ ಇಲ್ಲಿಗೆ ಬರುವವರ ಪಾಡಂತೂ ಹೇಳತೀರ ದಾಗಿದೆ. ಸರ್ಕಾರಿ ಆಸ್ಪತ್ರೆ ಸೇವೆ ಅಗತ್ಯವುಳ್ಳವರಿಗೆ ಸಿಗದೇ ವೈದ್ಯರ ನೇಮಿಸುವಲ್ಲಿ ತಾಳಿರುವ ದಿವ್ಯ ನಿರ್ಲಕ್ಷ ದಿಂದ ಜನ ತತ್ತರಿಸಿದ್ದಾರೆ. ಆಸ್ಪತ್ರೆ ಸುಸಜ್ಜಿತ ಕಟ್ಟಡ, ಔಷಧಾಲಯ, ಔಷಧಿ ಸಾಮಗ್ರಿಗಳು, ಸುಸಜ್ಜಿತ ಬೆಡ್ ಗಳು, ಕುಡಿ ಯುವ ನೀರು, ಶೌಚಾಲಯ, ಕ್ಯಾಂಟೀನ್, ಎಕ್ಸರೆ, ಆಕ್ಸಿಜನ್ ಘಟಕ ಸಹಿತ ಎಲ್ಲಾ ರೀತಿ ಮೂಲ ಸೌಕರ್ಯ ಬಳಸಿ ಚಿಕಿತ್ಸೆ ನೀಡಲು ಅಗತ್ಯ ವೈದ್ಯ ಸಿಬ್ಬಂದಿಯೇ ಇಲ್ಲದೆ ಇರುವುದೇ ಬಹುದೊಡ್ಡ ನ್ಯೂನ್ಯತೆಯಾಗಿದೆ.

ಸುಮಾರು 9 ಗ್ರಾಮಪಂಚಾಯಿತಿ ವ್ಯಾಪ್ತಿ ಹೊಂದಿರುವ ತಾಲೂಕಿನ ಪ್ರಮುಖ ಕೇಂದ್ರ ಬಿಂದು. ಈ ಆಸ್ಪತ್ರೆಯಲ್ಲಿ ವೈದ್ಯ ಹುದ್ದೆಗಳು ಸೇರಿದಂತೆ ಒಟ್ಟು 96 ಕಾಯಂ ಹುದ್ದೆಗಳಿದ್ದರೂ ಹಾಲಿ ಕೇವಲ 20ಹುದ್ದೆಗಳಲ್ಲಿ ಮಾತ್ರ ವೈದ್ಯರು ಸಿಬ್ಬಂದಿ ಕಾರ್ಯ ನಿರತವಾಗಿದ್ದಾರೆ. ಉಳಿದೆಲ್ಲ ಹುದ್ದೆಗಳು ಖಾಲಿ. ಇರಬೇಕಿದ್ದ ಒಟ್ಟು13 ವೈದ್ಯರಲ್ಲಿ ಕೇವಲ ಒಬ್ಬರೇ ಕಾರ್ಯ ನಿರ್ವಹಿ ಸುತ್ತಿದ್ದಾರೆ. ಇವರೇ ಒಳ, ಹೊರರೋಗಿಗಳಿಗೆ, ತುರ್ತು, ಅಪಘಾತ ಪ್ರಕರಣ, ಸಭೆ, ಕಾರ್ಯಕ್ರಮ, ಆಡಳಿತ ಎಲ್ಲ ವನ್ನು ನಿರ್ವಹಿಸಬೇಕಾದ ಪರಿಸ್ಥಿತಿ. ಕೀಲು, ಮೂಳೆ, ಪ್ರಸೂತಿ, ಚರ್ಮ, ಮಕ್ಕಳ ತಜ್ಞರ ಹುದ್ದೆಗಳು ಭರ್ತಿಯಾಗಿಲ್ಲ.

ಪ್ರಮುಖ ಪ್ರವಾಸಿ ಕೇಂದ್ರವಾದ ಶೃಂಗೇರಿಗೆ ಪ್ರತಿನಿತ್ಯ ಸಾವಿರಾರು, ಪ್ರತೀ ವರ್ಷ 80 - 90 ಲಕ್ಷ ಪ್ರವಾಸಿಗರು ಭೇಟಿ ನೀಡು ತ್ತಾರೆ. ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿರುವುದರಿಂದ ಅಪಘಾತ ಪ್ರಕರಣಗಳು ಸಂಭವಿಸಿದರೆ ತುರ್ತು ಚಿಕಿತ್ಸೆಗೆ ಇಲ್ಲಿಗೆ ಬರುವವರಿಗೆ ವೈದ್ಯರ ಅಲಭ್ಯದಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಒದ್ದಾಡುವಂತಾ ಸ್ಥಿತಿ ಇದೆ.

ಹಾಗಾಗಿ ತಮ್ಮ ಮಕ್ಕಳನ್ನು ಹೊತ್ತು ಚಿಕಿತ್ಸೆಗಾಗಿ ಮಣಿಪಾಲ, ಮಂಗಳೂರು, ಉಡುಪಿ,ಶಿವಮೊಗ್ಗ ಕ್ಕೆ ಅಲೆದಾಡಬೇಕಾದ ದಯನೀಯ ಸ್ಥಿತಿ ಇಲ್ಲಿನ ಜನರದ್ದು. ಆಸ್ಪತ್ರೆಯಲ್ಲಿ ಎಕ್ಸರೆ ಮಾತ್ರ ಇದ್ದು ಸ್ಕಾನಿಂಗ್ ವ್ಯವಸ್ಥೆಯಿಲ್ಲ. ಗ್ರಾಮೀಣ ಪ್ರದೇಶ ಗಳಿಂದಲೂ ಪ್ರತಿನಿತ್ಯ ಸುಮಾರು 200 -250 ಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಾರೆ. ಆದರೆ ಹತಾಶೆಯಿಂದ ಹಿಂದಿರುಗುತ್ತಾರೆ.

ಗ್ರಾಮೀಣ ಬಡ, ಜನಸಾಮಾನ್ಯರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದು ಕಳೆದ ಹಲವಾರು ವರ್ಷಗಳಿಂದ ವೈದ್ಯರು, ಸಿಬ್ಬಂದಿ ಕೊರತೆ ಎದುರಿಸುತ್ತಿದ್ದರೂ ಈವರೆಗೂ ಶಾಶ್ವತ ಪರಿಹಾರ ಸಿಗದೇ ರೋಗಿಗಳು ಪರದಾಡುತ್ತಿರುವುದು ಈ ಆಸ್ಪತ್ರೆ ದೌರ್ಭಾಗ್ಯ ಎನ್ನಬಹುದು. ಇನ್ನಾದರೂ ಜನಪ್ರತಿನಿಧಿಗಳು, ಸಂಬಂಧ ಪಟ್ಟ ಇಲಾಖೆ, ಸರ್ಕಾರ ಇತ್ತ ಗಮನ ಹರಿಸಿ ಇಲ್ಲಿಗೆ ಅಗತ್ಯ ವೈದ್ಯರು, ಸಿಬ್ಬಂದಿಯನ್ನು ನೇಮಿಸಬೇಕಿದೆ.

----

ಆಸ್ಪತ್ರೆಯಲ್ಲಿ ಕುಡಿಯುವ ನೀರು, ವಿದ್ಯುತ್, ಪ್ರಯೋಗಾಲಯ, ಎಕ್ಸರೆ, ಆಕ್ಸಿಜನ್ ಘಟಕ ಸಹಿತ ಎಲ್ಲಾ ಮೂಲಭೂತ ಸೌಲಭ್ಯಗಳಿವೆ. ಸುಸಜ್ಜಿತ ಕಟ್ಟಡಕ್ಕೆ ಸುಣ್ಣ ಬಣ್ಣ, ಆಸ್ಪತ್ರೆ ಸುತ್ತಮುತ್ತಲ ಸ್ವಚ್ಛತೆ ಕಾಪಾಡಲಾಗಿದೆ. ಆದರೆ ಇಲ್ಲಿಗೆ ಅಗತ್ಯ ವೈದ್ಯ, ಸಿಬ್ಬಂದಿ ನೇಮಕವಾಗಬೇಕು.

- ಡಾ. ಶ್ರೀನಿವಾಸ್

ಆಡಳಿತ ವೈದ್ಯಾಧಿಕಾರಿ

--

ಗ್ರಾಮೀಣ ಭಾಗದ ಬಡ ಜನರು ತಾಲೂಕು ಕೇಂದ್ರದ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಮಕ್ಕಳ ತಜ್ಞರೇ ಇಲ್ಲ. ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಅವರನ್ನು ಹೊತ್ತು ನೂರಾರು ಕಿಮಿ ದೂರದ ಊರೂಗಳಿಗೆ ಹೋಗಬೇಕು. ಪ್ರಸೂತಿ ತಜ್ಞರಿಲ್ಲ, ನೇತ್ರ, ದಂತ ಕೀಲು ಮೂಳೆ ತಜ್ಞರ ಕೂಡಲೇ ನೇಮಕ ಮಾಡಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು.

- ಕೆ.ಎಂ. ರಾಮಣ್ಣ ಕರುವಾನೆ

ಜಿಲ್ಲಾ ದಸಸಂ ಸಮಿತಿ ಸದಸ್ಯ

-

ಅಗತ್ಯ ವೈದ್ಯರು ಸಿಬ್ಬಂದಿಯೇ ಇಲ್ಲದೇ ಔಷಧಿ ಮೂಲ ಸೌಲಭ್ಯಗಳಿದ್ದರೂ ಪ್ರಯೋಜನವಿಲ್ಲ. ಕ್ಷೇತ್ರದ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಜನರ ಆರೋಗ್ಯದ ಹಿತದೃಷ್ಠಿಯಿಂದ ಅಗತ್ಯ ವೈದ್ಯರನ್ನು ನೇಮಿಸ ಬೇಕು. ಕೀಲು ಮೂಳೆ ಮುರಿದರೆ ಬೇರೆವೂರಿಗೆ ಚಿಕಿತ್ಸೆಗೆ ಹೋಗಬೇಕು. ನೇತ್ರ, ದಂತ, ಚರ್ಮ ಎಲ್ಲಾ ತೊಂದರೆಗಳಿಗೆ ಇಲ್ಲಿ ವೈದ್ಯರಿಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಿ ವೈದ್ಯರು, ಸಿಬ್ಬಂದಿ ನೇಮಕ ಮಾಡಬೇಕು.

-- ರಾಜೇಶ್ ಮೇಘಳಬೈಲು,

ಅಧ್ಯಕ್ಷ ಬಿಜೆಪಿ ರೈತ ಮೊರ್ಚಾ

-

19 ಶ್ರೀ ಚಿತ್ರ 1- ಶೃಂಗೇರಿ ಸಾರ್ವಜನಿಕ ಆಸ್ಪತ್ರೆ.

19 ಶ್ರೀ ಚಿತ್ರ 2- ಡಾ.ಶ್ರೀನಿವಾಸ್ ಆಡಳಿತ ವೈದ್ಯಾಧಿಕಾರಿ.

19 ಶ್ರೀ ಚಿತ್ರ 3- ಕೆ.ಎಂ.ರಾಮಣ್ಣ ಕರುವಾನೆ ಜಿಲ್ಲಾ ದಸಸಂ ಸಮಿತಿ ಸದಸ್ಯ.

19 ಶ್ರೀ ಚಿತ್ರ 4- ರಾಜೇಶ್ ಮೇಘಳಬೈಲು.ಬಿಜೆಪಿ ರೈತಮೋರ್ಚ ಅಧ್ಯಕ್ಷ.