ಬೆಂಗಳೂರಿನ ಮಿಲನ್ ಫರ್ಟಿಲಿಟಿ ಮತ್ತು ಬರ್ತಿಂಗ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಸುನಿತಾ ಮಹೇಶ್ ವಿವರಣೆ ಇಲ್ಲಿದೆ
ಬೆಂಗಳೂರು: ಇಂದಿನ ಆಧುನಿಕ ಯುಗದಲ್ಲಿ ಅನೇಕ ದಂಪತಿಗಳು ಸಂತಾನಹೀನತೆ ಅಥವಾ ಮಕ್ಕಳಾಗದಿರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಈ ಸಮಸ್ಯೆಗೆ ವಯಸ್ಸು, ಬದಲಾದ ಜೀವನಶೈಲಿ, ಹಾರ್ಮೋನುಗಳ ಅಸಮತೋಲನ, ವಿಪರೀತ ಮಾನಸಿಕ ಒತ್ತಡ, ಧೂಮಪಾನ ಅಥವಾ ಬೊಜ್ಜಿನಂತಹ ಕಾರಣಗಳನ್ನು ಮಾತ್ರ ದೂಷಿಸಲಾಗುತ್ತದೆ. ಆದರೆ, ಗರ್ಭಧಾರಣೆಯ ಪ್ರಕ್ರಿಯೆಯಲ್ಲಿ ಬಹುತೇಕರು ಅರಿವಿಲ್ಲದೆ ನಿರ್ಲಕ್ಷಿಸುವ ಅತ್ಯಂತ ಪ್ರಮುಖ ಹಾಗೂ ನಿರ್ಣಾಯಕ ಅಂಶವೆಂದರೆ ''ಸೂಕ್ಷ್ಮ ಪೋಷಕಾಂಶಗಳ ಕೊರತೆ''.
ವಿಶೇಷವಾಗಿ ವಿಟಮಿನ್ ಡಿ, ವಿಟಮಿನ್ ಬಿ12 ಮತ್ತು ಫೋಲೇಟ್- ಈ ಮೂರು ಪೋಷಕಾಂಶಗಳು ಸ್ತ್ರೀ ಮತ್ತು ಪುರುಷರಿಬ್ಬರ ಸಂತಾನೋತ್ಪತ್ತಿ ಆರೋಗ್ಯದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಇವುಗಳ ಕೊರತೆಯು ಫಲವತ್ತತೆಯ ಮೇಲೆ ಸದ್ದಿಲ್ಲದೆ ಗಂಭೀರವಾದ ದುಷ್ಪರಿಣಾಮ ಬೀರುತ್ತದೆ ಎಂದು ಬೆಂಗಳೂರಿನ ಮಿಲನ್ ಫರ್ಟಿಲಿಟಿ ಮತ್ತು ಬರ್ತಿಂಗ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಸುನಿತಾ ಮಹೇಶ್ ವಿವರಿಸಿದ್ದಾರೆ. ದೇಹದಲ್ಲಿನ ಈ ಕೊರತೆಗಳನ್ನು ಆರಂಭದಲ್ಲೇ ರಕ್ತಪರೀಕ್ಷೆಗಳ ಮೂಲಕ ಗುರುತಿಸಿ ಸರಿಪಡಿಸಿಕೊಂಡರೆ, ಆರೋಗ್ಯಕರ ಗರ್ಭಧಾರಣೆಗೆ ನಾಂದಿ ಹಾಡಬಹುದು.ಸೂರ್ಯನ ಕಿರಣಗಳ ಉಡುಗೊರೆ: ವಿಟಮಿನ್ ಡಿ ಯ ಮಹತ್ವ''ಸೂರ್ಯನ ಕಿರಣಗಳ ವಿಟಮಿನ್'' ಎಂದೇ ಕರೆಯಲ್ಪಡುವ ವಿಟಮಿನ್ ಡಿ ಕೇವಲ ನಮ್ಮ ಮೂಳೆಗಳ ಆರೋಗ್ಯ ಕಾಪಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲೂ ಇದು ಅತ್ಯಗತ್ಯ. ಮಹಿಳೆಯರಲ್ಲಿ ಅಂಡಾಶಯದ ಸಮರ್ಪಕ ಕಾರ್ಯನಿರ್ವಹಣೆಗೆ, ಅಂಡಾಣುಗಳ ಗುಣಮಟ್ಟ ಹೆಚ್ಚಿಸಲು ಮತ್ತು ಭ್ರೂಣವು ಗರ್ಭಾಶಯದಲ್ಲಿ ಯಶಸ್ವಿಯಾಗಿ ನೆಲೆಗೊಳ್ಳಲು (Implantation) ಇದು ಸಹಾಯ ಮಾಡುತ್ತದೆ. ಕೃತಕ ಗರ್ಭಧಾರಣಾ (IVF) ಚಿಕಿತ್ಸೆಗಳ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರಲ್ಲಿ ಇದು ವೀರ್ಯಾಣುಗಳ ಚಲನಶೀಲತೆ, ವೀರ್ಯದ ಒಟ್ಟಾರೆ ಗುಣಮಟ್ಟ ಹಾಗೂ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಸದಾ ಒಳಾಂಗಣದಲ್ಲಿಯೇ ಕಳೆಯುವ ಜೀವನಶೈಲಿ ಹಾಗೂ ಸನ್‌ಸ್ಕ್ರೀನ್ ಲೋಷನ್‌ಗಳ ಅತಿಯಾದ ಬಳಕೆಯಿಂದಾಗಿ ಇದರ ಕೊರತೆ ವ್ಯಾಪಕವಾಗಿದೆ.ನಿರ್ಲಕ್ಷ್ಯಕ್ಕೊಳಗಾಗುವ ಪೋಷಕಾಂಶ: ವಿಟಮಿನ್ ಬಿ12ನರಗಳ ಆರೋಗ್ಯ ಮತ್ತು ಡಿಎನ್‌ಎ ಸಂಶ್ಲೇಷಣೆಗೆ ಅವಶ್ಯಕವಾದ ವಿಟಮಿನ್ ಬಿ12, ಫಲವತ್ತತೆಯ ವಿಚಾರದಲ್ಲಿ ಹೆಚ್ಚಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ. ಮಹಿಳೆಯರಲ್ಲಿ ಬಿ12 ಕೊರತೆಯು ಅಂಡೋತ್ಪತ್ತಿ (Ovulation) ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಅಲ್ಲದೆ, ಭ್ರೂಣ ಕಸಿಯ ವೈಫಲ್ಯ ಅಥವಾ ಆರಂಭಿಕ ಗರ್ಭಪಾತದ ಅಪಾಯವನ್ನು ಇದು ಹೆಚ್ಚಿಸುತ್ತದೆ. ಪುರುಷರಲ್ಲಿ ಈ ಕೊರತೆಯು ವೀರ್ಯಾಣುಗಳ ಸಂಖ್ಯೆ ಕುಸಿಯಲು ಮತ್ತು ಕಳಪೆ ಚಲನೆಗೆ ಕಾರಣವಾಗುತ್ತದೆ. ವಿಟಮಿನ್ ಬಿ12 ಹೆಚ್ಚಾಗಿ ಮಾಂಸ, ಮೊಟ್ಟೆ ಮತ್ತು ಹಾಲಿನಂತಹ ಪ್ರಾಣಿಜನ್ಯ ಆಹಾರಗಳಲ್ಲಿ ಮಾತ್ರ ಸಿಗುವುದರಿಂದ ಸಸ್ಯಾಹಾರಿಗಳು ಇದರ ಕೊರತೆಗೆ ಸುಲಭವಾಗಿ ತುತ್ತಾಗುತ್ತಾರೆ. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿರುವುದರಿಂದ ದೇಹದಲ್ಲಿ ಶೇಖರಣೆಯಾಗುವುದಿಲ್ಲ. ಆದ್ದರಿಂದ ಪ್ರತಿದಿನದ ಆಹಾರದ ಮೂಲಕ ಇದನ್ನು ಒದಗಿಸುತ್ತಿರಬೇಕು.ಭ್ರೂಣದ ಸಮರ್ಪಕ ಬೆಳವಣಿಗೆಗೆ ಫೋಲೇಟ್ (ವಿಟಮಿನ್ ಬಿ9)ಫೋಲೇಟ್ ಗರ್ಭದಲ್ಲಿರುವ ಶಿಶುಗಳಲ್ಲಿ ನರನಾಳದ ದೋಷಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ಹೊಂದಿದೆ. ಗರ್ಭಧಾರಣೆಗೂ ಮುನ್ನವೇ ಇದರ ಅವಶ್ಯಕತೆ ಇರುತ್ತದೆ. ಇದು ಜೀವಕೋಶಗಳ ವಿಭಜನೆ ಮತ್ತು ಭ್ರೂಣದ ಆರಂಭಿಕ ಬೆಳವಣಿಗೆಗೆ ಅತ್ಯಗತ್ಯ. ಫೋಲೇಟ್ ಕೊರತೆಯು ಮಹಿಳೆಯರಲ್ಲಿ ಅಂಡಾಣುವಿನ ಗುಣಮಟ್ಟವನ್ನು ಕುಗ್ಗಿಸಿದರೆ, ಪುರುಷರಲ್ಲಿ ವೀರ್ಯಾಣುಗಳ ಡಿಎನ್‌ಎ ಹಾನಿಗೆ ಕಾರಣವಾಗುತ್ತದೆ. ಹಸಿರು ಎಲೆಗಳ ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಸಿಟ್ರಸ್ ಹಣ್ಣುಗಳಲ್ಲಿ ಇದು ಹೇರಳವಾಗಿ ಸಿಗುತ್ತದೆ.50ರ ಹರೆಯದ ನಂತರ ಎದುರಾಗುವ ಸವಾಲುಗಳುವಯಸ್ಸಾದಂತೆ ಪೋಷಕಾಂಶಗಳ ಕೊರತೆಯ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ 50 ವರ್ಷ ದಾಟಿದ ಋತುಬಂಧಕ್ಕೊಳಗಾದ (Menopause) ಮಹಿಳೆಯರಲ್ಲಿ ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗುವುದರಿಂದ, ಅದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೀರಿಕೊಳ್ಳುವಿಕೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದ ಕೀಲು ನೋವು, ಮೂಳೆ ಸವೆತ ಮತ್ತು ಮೂಳೆ ಮುರಿತದ ಅಪಾಯ ಉಂಟಾಗುತ್ತದೆ. ಮತ್ತೊಂದೆಡೆ, ವಯಸ್ಸಿಗೆ ಸಂಬಂಧಿಸಿದ ಜೀರ್ಣಕ್ರಿಯೆ ಮತ್ತು ಕರುಳಿನ ಸಮಸ್ಯೆಗಳಿಂದಾಗಿ ಮಹಿಳೆಯರು ಹಾಗೂ ಪುರುಷರಿಬ್ಬರಲ್ಲೂ ವಿಟಮಿನ್ ಬಿ12 ಮತ್ತು ಕಬ್ಬಿಣಾಂಶದ ಕೊರತೆ ಕಾಡಬಹುದು.ಆರಂಭಿಕ ತಪಾಸಣೆಯೇ ಪರಿಹಾರಈ ಸೂಕ್ಷ್ಮ ಪೋಷಕಾಂಶಗಳ ಕೊರತೆಯ ಲಕ್ಷಣಗಳಾದ ಆಯಾಸ, ಕೀಲು ನೋವು, ಪದೇಪದೇ ಕಾಡುವ ಸೋಂಕುಗಳು ಮತ್ತು ದೌರ್ಬಲ್ಯವನ್ನು ಕೇವಲ ವಯಸ್ಸಾಗುವಿಕೆಯ ಲಕ್ಷಣಗಳೆಂದು ನಿರ್ಲಕ್ಷಿಸಬಾರದು. ನಿಯಮಿತವಾಗಿ ರಕ್ತ ತಪಾಸಣೆ ಮಾಡಿಸುವ ಮೂಲಕ ಈ ಕೊರತೆಗಳನ್ನು ಆರಂಭದಲ್ಲೇ ಗುರುತಿಸಬಹುದು. ವೈದ್ಯರ ಸಲಹೆಯ ಮೇರೆಗೆ ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು, ಸಾಕಷ್ಟು ಸೂರ್ಯನ ಬೆಳಕಿಗೆ ಮೈಯೊಡ್ಡುವುದು ಮತ್ತು ಅಗತ್ಯವಿದ್ದಲ್ಲಿ ಪೂರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ದಂಪತಿಗಳು ಫಲವತ್ತತೆ ಹಾಗೂ ಒಟ್ಟಾರೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.